ನೂಯಾರ್ಕ್: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ಜೂನ್ 1 ರಿಂದ ಆರಂಭವಾಗಲಿರುವ ಪುರುಷರ ಟಿ20 ವಿಶ್ವಕಪ್ ಟೂರ್ನಿಯ(T20 World Cup 2024) ವೇಳಾಪಟ್ಟಿಯನ್ನು ಐಸಿಸಿ ಈಗಾಗಲೇ ಪ್ರಕಟಿಸಿದೆ. ಜತೆಗೆ ತಂಡಗಳ ಪಟ್ಟಿಯನ್ನು ಅಂತಿಮಗೊಳಿಸಲು ಗಡುವು ಕೂಡ ನೀಡಿದೆ. ಇದೀಗ ಜೂನ್ 9 ರಂದು ನಡೆಯುವ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಪಂದ್ಯಕ್ಕಾಗಿ ನ್ಯೂಯಾರ್ಕ್‌ನಲ್ಲಿ ವಿಶೇಷ ವ್ಯವಸ್ಥೆಯ ಸ್ಟೇಡಿಯಂ ನಿರ್ಮಾಣವಾಗುತ್ತಿದೆ.
ಪಂದ್ಯಾವಳಿ ಜೂನ್ 1 ರಿಂದ ಆರಂಭಗೊಂಡು ಜೂನ್ 29ರ ತನಕ ನಡೆಯಲಿದೆ. ಒಟ್ಟು 55 ಪಂದ್ಯಗಳು ಇರಲಿದೆ. ಈ ಪೈಕಿ 41 ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆದರೆ, ಉಳಿದ ಪಂದ್ಯಗಳಿಗೆ ಯುಎಸ್‌ಎ ಆತಿಥ್ಯ ವಹಿಸಲಿದೆ. ಭಾರತದ ಮೂರು ಪಂದ್ಯಗಳು ನ್ಯೂಯಾರ್ಕ್‌ನ ಪಾಪ್-ಅಪ್ ಕ್ರೀಡಾಂಗಣದಲ್ಲಿ ನಡೆಯಲಿವೆ.
ಇಂಡೋ ಪಾಕ್ ಪಂದ್ಯದ ಆತಿಥ್ಯ ವಹಿಸುವ ನ್ಯೂಯಾರ್ಕ್ ಕ್ರೀಡಾಂಗಣವು ಮೂರು ತಿಂಗಳೊಳಗೆ ಎದ್ದು ನಿಲ್ಲಲಿದೆ ಎಂದು ವರದಿಯಾಗಿದೆ. ಈಗಾಗಲೇ ಹಲವು ಹಂದ ಕಾಮಗಾರಿ ಪೂರ್ಣಗೊಂಡಿದ್ದು ಉಳಿದಿರುವ ಕೆಲಸ ಬರದಿಂದ ಸಾಗುತ್ತಿದೆ ಎಂದು ಇಲ್ಲಿನ ಸ್ಥಳೀಯ ರ್ಮಾಯಮಗಳು ವರದಿ ಮಾಡಿದೆ.
ತಾತ್ಕಾಲಿಕ ಕ್ರೀಡಾಂಗಣ
34 ಸಾವಿರ ಪ್ರೇಕ್ಷಕರು ಕೂರುವಷ್ಟು ಸಾಮರ್ಥ್ಯದ ಸ್ಟೇಡಿಯಂ ಇದಾಗಿದ್ದು. ಭಾರತ-ಪಾಕ್ ಪಂದ್ಯಕ್ಕಾಗಿಯೇ ಇದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಪಂದ್ಯದ ನಂತರ ಇದನ್ನು ಕೆಡವಲಾಗುತ್ತದೆ. ಎಂದು ತಿಳಿಸಲಾಗಿದೆ. ಭಾರತ ಮತ್ತು ಪಾಕ್ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ ಪಂದ್ಯ ಆರಂಭ
ನ್ಯೂಯಾರ್ಕ್ ಮತ್ತು ನವದೆಹಲಿ ನಡುವೆ 10.5 ಗಂಟೆಗಳ ಸಮಯದ ವ್ಯತ್ಯಾಸವಿರುವುದರಿಂದ, ಸಂಘಟಕರು ಕೆಲವು ಪಂದ್ಯಗಳನ್ನು, ವಿಶೇಷವಾಗಿ ಭಾರತವನ್ನು ಒಳಗೊಂಡ ಪಂದ್ಯಗಳನ್ನು ಬೆಳಗ್ಗೆ ಪ್ರಾರಂಭಿಸಲು ಒಪ್ಪಿಕೊಂಡಿದ್ದಾರೆ. ಇದು ಭಾರತೀಯ ದೂರದರ್ಶನ ಪ್ರೇಕ್ಷಕರಿಗೆ ತಮ್ಮ ಅನುಕೂಲದ ಸಮಯದಲ್ಲಿ ಪಂದ್ಯವನ್ನು ನೋಡಲು ಸಹಾಯ ಮಾಡಲಿದೆ. ಜೂನ್ 9 ಕೂಡ ಭಾನುವಾರವಾಗಿದೆ. ಅಮೆರಿಕದಲ್ಲಿ ರಾತ್ರಿ ಪಂದ್ಯ ಆಯೋಜಿಸಿದರೆ, ಭಾರತದಲ್ಲಿ ಸೋಮವಾರ ಮುಂಜಾನೆ ಪಂದ್ಯ ಪ್ರಸಾರವಾಗುತ್ತದೆ. ಹೀಗಾಗಿ ಅಮೆರಿಕದಲ್ಲಿ ರಾತ್ರಿ ಪಂದ್ಯ ನಡೆಸುವುದಾದರೆ ಜೂನ್ 8ರಂದೇ ನಡೆಯಲಿದೆ. ಆಗ ಭಾರತದಲ್ಲಿ ಭಾನುವಾರ ಬೆಳಗ್ಗೆ ಪಂದ್ಯ ಪ್ರಸಾರವಾಗಲಿದೆ.
ಇದನ್ನೂ ಓದಿ ICC T20I Rankings: ಬೌಲಿಂಗ್ ಶ್ರೇಯಾಂಕದಲ್ಲಿ ಜೀವನ ಶ್ರೇಷ್ಠ ಪ್ರಗತಿ ಸಾಧಿಸಿದ ಅಕ್ಷರ್ ಪಟೇಲ್
INDIA VS PAKISTAN WILL BE PLAYED IN NEW YORK CITY IN THE 2024 T20 WORLD CUP….!!! (The Guardian). pic.twitter.com/RbqrkYD2lj
— Mufaddal Vohra (@mufaddal_vohra) December 15, 2023
ಟಿ20 ಮುಖಾಮುಖಿ
ಭಾರತ ಮತ್ತು ಪಾಕಿಸ್ತಾನ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2021ರಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಎದುರಾಗಿತ್ತು. ಅದು ಕೂಡ 10 ವಿಕೆಟ್ ಅಂತರದ ಹೀನಾಯ ಸೋಲಾಗಿತ್ತು.
ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಆತಿಥೇಯ ಯುಎಸ್‌ಎ ತಂಡಗಳು ಕಾಣಿಸಿಕೊಂಡಿದೆ. ಒಟ್ಟು 5 ತಂಡಗಳ ನಾಲ್ಕು ಗುಂಪುಗಳನ್ನು ಮಾಡಲಾಗಿದೆ. ಟಿ20 ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 20 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ