Site icon Vistara News

Virat Kohli | ನೀಮ್​ ಕರೋಲಿ ಬಾಬಾ ಕೃಪೆ; ಶತಕ ಬಾರಿಸಿ ಹಲವು ದಾಖಲೆ ಬರೆದ ವಿರಾಟ್​ ಕೊಹ್ಲಿ

virat kohli

ಗುವಾಹಟಿ : ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ (Virat Kohli) ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಅವರು 87 ಎಸೆತಗಳಲ್ಲಿ 12 ಫೋರ್​ ಹಾಗೂ ಒಂದು ಸಿಕ್ಸರ್​ ನೆರವಿನಿಂದ 113 ರನ್​ ಬಾರಿಸಿದ್ದಾರೆ. ಅವರ ಶತಕ ನೆರವಿನಿಂದ ಭಾರತ ತಂಡದ ಲಂಕಾ ವಿರುದ್ಧ 373 ರನ್​ಗಳ ಬೃಹತ್​ ಮೊತ್ತ ಪೇರಿಸಿದೆ. ಈ ಮೂಲಕ ಭಾರತದ ಸ್ಟಾರ್​ ಬ್ಯಾಟರ್ ಹೊಸ ವರ್ಷದಲ್ಲಿ ಶುಭಾರಂಭ ಮಾಡಿದ್ದಾರೆ. ವಿರಾಟ್​ ಕೊಹ್ಲಿಗೆ 2023ರಲ್ಲಿ ಮೊದಲ ಪಂದ್ಯವಾಗಿದ್ದು ಅದರಲ್ಲೇ ಶತಕ ಬಾರಿಸುವ ಮೂಲಕ ಮಿಂಚಿದ್ದಾರೆ. ಆದರೆ, ಕೊಹ್ಲಿಯ ಈ ಸಾಧನೆಗೆ ಉತ್ತರ ಪ್ರದೇಶದ ಕರೋಲಿ ಬಾಬಾ ಅವರ ಕೃಪೆ ಕಾರಣ ಎಂದು ಹೇಳಲಾಗುತ್ತಿದೆ.

ನೀಮ್​ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದ ವಿರಾಟ್​ ಕೊಹ್ಲಿ ದಂಪತಿಯ ಚಿತ್ರ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್​ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಈ ಅವಧಿಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಪತಿಯನ್ನು ನಾನಾ ತೀರ್ಥ ಕ್ಷೇತ್ರಗಳಿಗೆ ಕರೆದುಕೊಂಡು ಹೋಗಿದ್ದರು. ಅದರಲ್ಲೊಂದು ಉತ್ತರ ಪ್ರದೇಶದ ನೀಮ್​ ಕರೋಲಿ ಬಾಬಾ ಮಂದಿರ. ಅಲ್ಲಿಗೆ ಪುತ್ರಿ ವಾಮಿಕಾ ಜತೆಗೆ ಭೇಟಿ ನೀಡಿದ್ದ ದಂಪತಿ ಹರಕೆ ಸಲ್ಲಿಕೆ ಮಾಡಿದ್ದರು. ಅಲ್ಲಿನ ಸಂತರು ಕೊಹ್ಲಿ ಹಾಗೂ ಅನುಷ್ಕಾ ದಂಪತಿಗೆ ಪ್ರಸಾದ ನೀಡಿ ಹರಸಿದ್ದರು. ಅದರ ಪರಿಣಾಮ ಮೊದಲ ಪಂದ್ಯದಲ್ಲೇ ಕೊಹ್ಲಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ವಿರಾಟ್​ ಕೊಹ್ಲಿ ದಂಪತಿ ಕರೊಲಿ ಬಾಬಾ ಅಲ್ಲದೆ, ಉತ್ತರಾಖಂಡದ ಹಲವು ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ರಾಮ ಮತ್ತು ಸೀತಾ ಮಂದಿರಗಳಿಗೂ ಅವರು ಭೇಟಿ ನೀಡಿದ್ದರು. ಬ್ಯಾಟಿಂಗ್​ನಲ್ಲಿ ಫಾರ್ಮ್​ ಕಳೆದುಕೊಂಡು ಟೀಕೆಗಳನ್ನು ಎದುರಿಸಿದ್ದ ವಿರಾಟ್​ಗೆ ದೇವರ ದರ್ಶನದಿಂದ ಮಾನಸಿಕ ನೆಮ್ಮದಿ ಲಭಿಸಿತ್ತು. ಇದೀಗ ಲಂಕಾ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಲಂಕಾ ವಿರುದ್ಧದ ಶತಕ ವಿರಾಟ್​ ಕೊಹ್ಲಿಯ 73ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಇದರಲ್ಲಿ 45 ಏಕ ದಿನ ಮಾದರಿಯದ್ದಾದರೆ ಒಂದು ಟಿ20 ಮಾದರಿಯಲ್ಲಿನ ಶತಕ. ಟೆಸ್ಟ್​ ಕ್ರಿಕೆಟ್​ನಲ್ಲಿ 27 ಶತಕಗಳು ಸೇರಿಕೊಂಡಿವೆ. ಈ ಶತಕದೊಂದಿಗೆ ತವರು ನೆಲದಲ್ಲಿ 20 ಏಕ ದಿನ ಶತಕಗಳನ್ನು ಬಾರಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವಿರಾಟ್​ ಸರಿಗಟ್ಟಿದ್ದಾರೆ. ಅಲ್ಲೇ ಲಂಕಾ ವಿರುದ್ಧ 9ನೇ ಶತಕ ಬಾರಿಸುವ ಮೂಲಕ ದ್ವೀಪ ರಾಷ್ಟ್ರದ ತಂಡದ ವಿರುದ್ಧ ಗರಿಷ್ಠ ಏಕ ದಿನ ಶತಕ ಬಾರಿಸಿದ ದಾಖಲೆ ಮಾಡಿದ್ದಾರೆ.

ಇದನ್ನೂ ಓದಿ | IND VS SL | ಲಂಕಾ ವಿರುದ್ಧ ಶತಕ ಬಾರಿಸಿ ಸಚಿನ್​ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್​ ಕೊಹ್ಲಿ!

Exit mobile version