ಬೆಂಗಳೂರು: ಕೊರೊನಾ ಸೋಂಕಿನ ಕಾರಣಕ್ಕೆ ಕಳೆದ ವರ್ಷ ಸ್ಥಗಿತಗೊಂಡಿದ್ದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೇ ಪಂದ್ಯಕ್ಕೆ ಮತ್ತೆ covid-19 ಕಾಟ ಎದುರಾಗಿದೆ. ಇಂಗ್ಲೆಂಡ್‌ಗೆ ತೆರಳಿರುವ ಟೀಮ್ ಇಂಡಿಯಾದ ಹಿರಿಯ ಆಟಗಾರ ವಿರಾಟ್ ಕೊಹ್ಲಿಗೂ ಸೋಂಕು ತಗುಲಿದೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಅವರು ಇಂಗ್ಲೆಂಡ್ ವಿಮಾನ ಏರುವ ಮೊದಲೇ ಸೋಂಕಿಗೆ ಒಳಗಾಗಿದ್ದ ಕಾರಣ ಅವರಿಗೆ ಪ್ರಯಾಣ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರು ಜೂನ್ ೧೬ರಂದು ಇಂಗ್ಲೆಂಡ್‌ಗೆ ತೆರಳಿದ ಹಿರಿಯ ಆಟಗಾರರ ನಿಯೋಗದಲ್ಲಿ ಇರಲಿಲ್ಲ. ಹೀಗಾಗಿ ಅವರಿಗೆ ಲೈಸೆಸ್ಟರ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡುವ ಅವಕಾಶವೂ ನಷ್ಟವಾಗಿದೆ. ಇದೀಗ ವಿರಾಟ್ ಕೊಹ್ಲಿಯೂ ಸೋಂಕಿಗೆ ಒಳಗಾಗಿರುವ ಕಾರಣ ಕ್ವಾರಂಟೈನ್‌ಗೆ ಒಳಗಾಗುವುದು ಅನಿವಾರ್ಯ ಎನಿಸಿದೆ. ಇದರಿಂದ ಅವರು ಪಂದ್ಯಕ್ಕೆ ಲಭ್ಯರಾಗುವರೇ ಎಂಬ ಅನುಮಾನ ಸೃಷ್ಟಿಯಾಗಿದೆ. ಆದರೆ ಮೂಲಗಳು ಪ್ರಕಾರ ವಿರಾಟ್ ಕೊಹ್ಲಿ ಗುಣಮುಖರಾಗಿದ್ದು, ಜುಲೈ ೧ರಂದು ಆರಂಭವಾಗಲಿರುವ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.
“ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿಯಿಂದ ರಜೆ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ ಮಾಲ್ಡೀವ್ಸ್‌ಗೆ ಪ್ರವಾಸ ಹೋಗಿದ್ದರು. ಅಲ್ಲಿಂದ ಬಂದ ಬಳಿಕ ಅವರಿಗೆ ಕೊರೊನಾ ಸೋಂಕು ತಗುಲಿದೆ. ಕಳೆದ ವಾರ ಇಂಗ್ಲೆಂಡ್‌ನಲ್ಲಿ ಇಳಿದ ತಕ್ಷಣ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ಇದೀಗ ಅವರು ಗುಣಮುಖರಾಗಿದ್ದಾರೆ,ʼ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.
ಜೂನ್ ೨೬ರಂದು ಲೈಸೆಸ್ಟರ್‌ಶೈರ್ ವಿರುದ್ಧ ಅಭ್ಯಾಸ ಪಂದ್ಯ ಆರಂಭಗೊಳ್ಳಲಿದೆ. ಕೊರೊನಾ ಸೋಂಕಿಗೆ ಒಳಗಾದ ಆಟಗಾರರು ಈ ಪಂದ್ಯದಲ್ಲಿ ಆಡುವ ಸಾಧ್ಯತೆಗಳು ಕಡಿಮೆ. ತಂಡದ ವೈದ್ಯಕೀಯ ವಿಭಾಗದ ಅಭಿಪ್ರಾಯದ ಪ್ರಕಾರ ಒಂದು ಬಾರಿ ಕೊರೊನಾ ಸೋಂಕಿಗೆ ಒಳಗಾದ ಆಟಗಾರರಿಗೆ ತಕ್ಷಣದಲ್ಲೇ ಹೆಚ್ಚು ಒತ್ತಡ ಹೇರುವಂತಿಲ್ಲ. ಹೀಗಾಗಿ ಕೊಹ್ಲಿ ಸೇರಿದಂತೆ ಸೋಂಕಿಗೆ ಒಳಗಾದ ಆಟಗಾರರು ಅಭ್ಯಾಸ ಪಂದ್ಯದಲ್ಲಿ ಆಡುವ ಸಾಧ್ಯತೆಗಳು ಇಲ್ಲʼʼ ಎಂದು ಮೂಲಗಳು ತಿಳಿಸಿವೆ.
ಇಂಗ್ಲೆಂಡ್ ತಲುಪಿದ ಆಟಗಾರರು ಮಂಗಳವಾರ ಮೊದಲ ದಿನದ ಅಭ್ಯಾಸಕ್ಕಾಗಿ ಮೈದಾನಕ್ಕೆ ಇಳಿದಿದ್ದಾರೆ. ಸ್ಟ್ರೆ ಂಥ್ ಮತ್ತು ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ಅವರೊಂದಿಗೆ ರೋಹಿತ್ ಶರ್ಮ, ರವೀಂದ್ರ ಜಡೇಜಾ, ಉಮೇಶ್ ಯಾದವ್ ಸೇರಿದಂತೆ ಪ್ರಮುಖ ಆಟಗಾರರು ಮೈದಾನಕ್ಕೆ ಇಳಿದು ದೈಹಿಕ ಕಸರತ್ತು ಆರಂಭಿಸಿದರು.
ಇದನ್ನೂ ಓದಿ| Ireland Tour | ಟೀಮ್ ಇಂಡಿಯಾಕ್ಕೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್