ಸಿಡ್ನಿ: ಮಾರ್ಚ್‌ನಲ್ಲಿ ನಿಗದಿಯಾಗಿದ್ದ ಅಫಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಿಂದ ಆಸ್ಟ್ರೇಲಿಯಾ ದಿಢೀರ್ ಹಿಂದೆ ಸರಿದಿದೆ. ಈ ವಿಚಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ(Cricket Australia) ಗುರುವಾರ (ಜನವರಿ 12) ಅಧಿಕೃತ ಹೇಳಿಕೆ ಮೂಲಕ ಖಚಿತಪಡಿಸಿದೆ.
ಸರ್ಕಾರ ಸೇರಿದಂತೆ ಪ್ರಮುಖ ಪಾಲುದಾರರೊಂದಿಗೆ ಚರ್ಚಿಸಿದ ಬಳಿಕ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಅಫಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಶಿಕ್ಷಣದ ಹಕ್ಕಿನ ಜತೆಯಲ್ಲಿ ಚಿಕಿತ್ಸೆಯ ಹಕ್ಕನ್ನೂ ಕಿತ್ತುಕೊಂಡು ಮತ್ತಷ್ಟು ನಿರ್ಬಂಧ ಹೇರಿದ ಆಡಳಿತಾರೂಢ ತಾಲಿಬಾನ್ ಸರ್ಕಾರ್ ನಿಲುವನ್ನು ಖಂಡಿಸಿ ಕ್ರಿಕೆಟ್ ಆಸ್ಟ್ರೇಲಿಯಾ ಈ ಕ್ರಮ ಕೈಗೊಂಡಿದೆ ಎಂದು ತನ್ನ ಹೇಳಿಕೆಯಲ್ಲಿ ಬಹಿರಂಗಪಡಿಸಿದೆ.
ಕ್ರಿಕೆಟ್ ಆಸ್ಟ್ರೇಲಿಯಾವು ಅಫಘಾನಿಸ್ತಾನ ಸರ್ಕಾರದ ನೀತಿಗಳ ವಿರುದ್ಧ ಖಂಡನೆ ವ್ಯಕ್ತಪಡಿಸುತ್ತಿರುವುದು ಇದೇ ಮೊದಲೇನಲ್ಲ. 2021ರ ಸೆಪ್ಟೆಂಬರ್ನಲ್ಲಿಯೂ ಅಫ್ಘಾನ್ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡು ಹೆಣ್ಣುಮಕ್ಕಳ ಸ್ವಾತಂತ್ರ್ಯಕ್ಕೆ ವಿರೋಧ ವ್ಯಕ್ತಪಡಿಸಿದಾಗಲೂ ಕ್ರಿಕೆಟ್ ಆಸ್ಟ್ರೇಲಿಯಾ ಖಂಡನೆ ವ್ಯಕ್ತಪಡಿಸಿತ್ತು.
ಇದನ್ನೂ ಓದಿ | Rafael Nadal | ರಾಫೆಲ್ ನಡಾಲ್ ಗ್ರ್ಯಾನ್ ಸ್ಲಾಮ್ ಸಾಧನೆ