ಮೀರ್‌ಪುರ : ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ (INDvsBAN) ಮೊದಲ ಪಂದ್ಯದಲ್ಲಿ ಭಾರತ ತಂಡ ೧ ವಿಕೆಟ್ ವೀರೋಚಿತ ಸೋಲಿಗೆ ಒಳಗಾಗಿದೆ. ಫೀಲ್ಡಿಂಗ್ ವೈಫಲ್ಯದ ಕಾರಣಕ್ಕೆ ಗೆಲುವಿನ ಅವಕಾಶವನ್ನು ಭಾರತ ತಂಡ ಕಳೆದುಕೊಂಡಿತ್ತು. ಇವೆಲ್ಲದರ ನಡುವೆ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚೊಂದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಭಾರತ ನೀಡಿದ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಬಾಂಗ್ಲಾದೇಶ ತಂಡ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಅಂತೆಯೇ ಆಲ್‌ರೌಂಡರ್ ಶಕಿಬ್ ಅಲ್ ಹಸನ್ ೨೯ ಎಸೆತಗಳಿಗೆ ೩೭ ರನ್ ಬಾರಿಸಿ ಸುಭದ್ರ ಸ್ಥಿತಿಯಲ್ಲಿ ಇದ್ದರು. ಈ ವೇಳೆ ಶಕಿಬ್ ಅಲ್ ಹಸನ್ ವಾಷಿಂಗ್ಟನ್ ಸುಂದರ್ ಎಸೆತಕ್ಕೆ ಕವರ್ ಕಡೆ ಜೋರಾಗಿ ಹೊಡೆದಿದ್ದಾರೆ. ಈ ವೇಳೆ ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಬಲಗಡೆಗೆ ಜೋರಾಗಿ ಜಿಗಿದು ಕ್ಯಾಚ್ ಹಿಡಿದಿರು. ಈ ಕ್ಯಾಚ್ ಮೂಲಕ ಚೇತರಿಸಿಕೊಂಡ ಭಾರತ ತಂಡ ಬಾಂಗ್ಲಾದೇಶದ ವಿಕೆಟ್‌ಗಳನ್ನು ಉರುಳಿಸಿತು. ಆದರೆ, ಕೊನೇ ವಿಕೆಟ್ ಉರುಳಿಸಲು ಸಾಧ್ಯವಾಗದೇ ಸೋಲೊಪ್ಪಿಕೊಂಡಿತು.
ಅಚ್ಚರಿಯೆಂದರೆ ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ವಿರಾಟ್ ಕೊಹ್ಲಿಯೂ ಅದೇ ಮಾದರಿಯಲ್ಲಿ ಔಟಾದರು. ಅವರನ್ನು ಬಾಂಗ್ಲಾದೇಶದ ನಾಯಕ ಲಿಟನ್ ದಾಸ್ ಅದ್ಭುತವಾದ ಕ್ಯಾಚ್ ಹಿಡಿಯುವ ಮೂಲಕ ಔಟ್ ಮಾಡಿದ್ದರು. ಹೀಗಾಗಿ ಕೊಹ್ಲಿ ಕೇವಲ ೯ ರನ್‌ಗಳಿಗೆ ಔಟಾಗಿ ನಿರಾಸೆಯಿಂದ ಪೆವಿಲಿಯನ್‌ಗೆ ಮರಳುವಂತಾಯಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಸಂಪೂರ್ಣವಾಗಿ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಘಟಾನುಘಟಿ ಬ್ಯಾಟರ್‌ಗಳು ಕಡಿಮೆ ಮೊತ್ತಕ್ಕೆ ಪೆವಿಲಿಯನ್ ಸೇರುವ ಮೂಲಕ ಭಾರತ ತಂಡಕ್ಕೆ ಹಿನ್ನಡೆ ಉಂಟಾಯಿತು. ಇವೆಲ್ಲದರ ನಡುವೆಯೂ ಕೆ. ಎಲ್ ರಾಹುಲ್ ೭೦ ಎಸೆತಗಳಲ್ಲಿ ೭೩ ರನ್ ಬಾರಿಸುವುದರೊಂದಿಗೆ ತಂಡಕ್ಕೆ ಚೈತನ್ಯ ಒದಗಿಸಿದರು. ಆದಾಗ್ಯೂ ಭಾರತ ೧೮೬ ರನ್‌ಗಳಿಗೆ ಸರ್ವಪತನಗೊಳ್ಳಬೇಕಾಯಿತು.
ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಆರಂಭದಲ್ಲಿ ಉತ್ತಮ ರೀತಿಯಲ್ಲಿ ಬ್ಯಾಟ್ ಮಾಡುವ ಮೂಲಕ ಸುಲಭ ಗೆಲುವಿನ ಸೂಚನೆ ಕೊಟ್ಟಿತು. ಆದರೆ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಸೇನ್ ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಕಡಿವಾಣ ಹಾಕಿದರು. ಹೀಗಾಗಿ ೧೩೬ ರನ್‌ಗಳಿಗೆ ೯ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ವೇಳೆ ಭಾರತ ತಂಡ ಗೆಲ್ಲುವುದು ನಿಶ್ಚಿತ ಎಂಬ ಪರಿಸ್ಥಿತಿ ಸೃಷ್ಟಿಯಾಯಿತು. ಆದರೆ ೯ನೇ ವಿಕೆಟ್‌ಗೆ ಬಾಂಗ್ಲಾದೇಶ ೫೧ ರನ್ ಬಾರಿಸುವ ಮೂಲಕ ಗೆಲುವು ತನ್ನದಾಗಿಸಿಕೊಂಡಿತು. ಕ್ಯಾಚ್ ಹಿಡಿಯುವ ಅವಕಾಶಗಳನ್ನು ಕೈಚೆಲ್ಲುವ ಜತೆಗೆ ಕಳಪೆ ಫೀಲ್ಡಿಂಗ್ ಮಾಡಿದ ಭಾರತ ಸೋಲು ತಂದುಕೊಂಡಿತು.
ಇದನ್ನೂ ಓದಿ | INDvsBAN | ಅರ್ಧ ಶತಕ ಬಾರಿಸಿ ಮಿಂಚಿದರೂ, ಕ್ಯಾಚ್ ಬಿಟ್ಟು ಟ್ರೋಲ್ ಆದ ಕೆ. ಎಲ್ ರಾಹುಲ್!