ಚೆನ್ನೈ: 2021ರ ಐಪಿಎಲ್ ಟೂರ್ನಿಯಲ್ಲಿ ಸ್ಟಾರ್ ಆಟಗಾರರನ್ನು ತಮ್ಮ ಯಾರ್ಕರ್ ಅಸ್ತ್ರದ ಮೂಲಕ ಪೆವಿಲಿಯನ್‌ಗೆ ಅಟ್ಟಿ ಎಲ್ಲರ ಹುಬ್ಬೇರುವಂತೆ ಮಾಡಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಟಿ. ನಟರಾಜನ್(T. Natarajan) ಅವರ ಕನಸೊಂದು ನನಸಾಗಿದೆ. ತಮ್ಮ ಊರಿನಲ್ಲಿ ಕ್ರಿಕೆಟ್ ಮೈದಾನವೊಂದನ್ನು ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದ ಅವರು ಇದೀಗ ಈ ಮೈದಾನ ಉದ್ಘಾಟನೆಗೊಂಡಿದೆ.
ತಮಿಳುನಾಡಿನ ಸೇಲಂ ಬಳಿಯ ಚಿನ್ನಂಪಟ್ಟಿ ಗ್ರಾಮದಲ್ಲಿ ನಟರಾಜನ್ ಈ ಕ್ರಿಕೆಟ್ ಮೈದಾನ ನಿರ್ಮಿಸಿದ್ದಾರೆ. ಊರಿನ ಯುವ ಕ್ರಿಕೆಟ್ ಪ್ರತಿಭೆಗಳ ತರಬೇತಿಗೆ ಸೂಕ್ತ ವೇದಿಕೆ ಒದಗಿಸುವುವ ಉದ್ದೇಶದಿಂದ ಹಳ್ಳಿಯಲ್ಲಿ ಎಲ್ಲ ಸೌಲಭ್ಯವುಳ್ಳ ಒಂದು ಸುಸಜ್ಜಿತ ಕ್ರಿಕೆಟ್ ಮೈದಾನವನ್ನು ನಿರ್ಮಿಸುವುದು ನಟರಾಜನ್ ಅವರ ಕನಸಾಗಿತ್ತು. ಇದನ್ನೀಗ ಸಾಕಾರಗೊಳಿಸಿದ್ದಾರೆ. ಈ ಮೈದಾನದ ಉದ್ಘಾಟನೆಯನ್ನು ಚೆನ್ನೈ ಮೂಲಕ ಭಾರತ ಕ್ರಿಕೆಟ್ ತಂಡದ ಆಟಗಾರ ದಿನೇಶ್ ಕಾರ್ತಿಕ್(Dinesh Karthik) ಅವರು ಲೋಕಾರ್ಪಣೆ ಮಾಡಿದರು.
ಮೈದಾನ ಉದ್ಘಾಟನೆ ವೇಳೆ ಕ್ರಿಕೆಟಿಗರಾದ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಪಿ. ಅಶೋಕ್ ಸಿಗಮಣಿ, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ಸೇಲಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶಿವಕುಮಾರ್ ಸೇರಿದಂತೆ ತಮಿಳು ಚಿತ್ರರಂಗದ ಯೋಗಿ ಬಾಬು ಮತ್ತು ಅನೇಕ ಗಣ್ಯರು ಹಾಜರಿದ್ದರು.
ಇದನ್ನೂ ಓದಿ IPL 2023: ಟಿ.ನಟರಾಜನ್ ಮಗಳೊಂದಿಗೆ ಕುಶಲೋಪರಿ ನಡೆಸಿದ ಧೋನಿ; ವಿಡಿಯೊ ವೈರಲ್
ನನ್ನ ಹಳ್ಳಿಯಲ್ಲಿ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡ ಕ್ರಿಕೆಟ್ ಮೈದಾನವೊಂದನ್ನು ನಿರ್ಮಿಸಿರುವುದನ್ನು ನಿಮ್ಮ ಜತೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ನಟರಾಜನ್ ಕ್ರಿಕೆಟ್ ಗ್ರೌಂಡ್ (ಎನ್‌ಸಿಜಿ)(natarajan cricket ground) ಎಂಬುದಾಗಿ ಇದು ಕರೆಯಲ್ಪಡಲಿದೆ. ಭಾರತ ತಂಡದ ಪರ ಆಡುವ ನನ್ನ ದೊಡ್ಡ ಕನಸೊಂದು ನನಸಾಗಿತ್ತು. ಇದೀಗ ನಾನು ಬಡ ಪ್ರತಿಭೆಗಳಿಗೆ ಕ್ರಿಕೆಟ್ನಲ್ಲಿ ಬದುಕು ಕಟ್ಟಿಕೊಳ್ಳಲು ಕ್ರಿಕೆಟ್ ಮೈದನವೊಂದನ್ನು ನಿರ್ಮಿಸಿದ್ದೇನೆ. ದೇವರಿಗೆ ಧನ್ಯವಾದಗಳು ಎಂದು ನಟರಾಜನ್ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ.
Wishing to witness many more inspiring stories from the Natarajan Cricket Ground 🧡 pic.twitter.com/72xWAEuPeL
— SunRisers Hyderabad (@SunRisers) June 24, 2023
ಗಾಯಾಳಾಗಿ ಭಾರತ ತಂಡದಿಂದ ಹೊರಬಿದ್ದ ನಟರಾಜನ್ ಆ ಬಳಿಕ ತಂಡಕ್ಕೆ ಕಮ್ಬ್ಯಾಕ್ ಮಾಡಲೇ ಇಲ್ಲ. ಐಪಿಎಲ್ನಲ್ಲಿಯೂ ಅವರು ಹಿಂದಿನ ಬೌಲಿಂಗ್ ಪ್ರದರ್ಶನವನ್ನು ತೋರ್ಪಡಿಸುವಲ್ಲಿಯೂ ವಿಫಲರಾಗಿದ್ದರು. ಮುಂದಿನ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಮತ್ತೆ ಟೀಮ್ ಇಂಡಿಯಾಕ್ಕೆ ಮರಳಲು ಎದುರು ನೋಡುತ್ತಿದ್ದಾರೆ.