ಮುಂಬಯಿ : 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯುವ 2028 ಒಲಿಂಪಿಕ್ಸ್ನ ಪಟ್ಟಿಗೆ ಕ್ರಿಕೆಟ್ ಸೇರ್ಪಡೆಯಾಗಲಿದೆ. ಈ ರೀತಿಯ ಮಾತುಕತೆಯೊಂದು ಜೋರಾಗಿ ನಡೆಯುತ್ತಿದೆ. ಒಲಿಂಪಿಕ್ಸ್ ಸಮಿತಿ ಕ್ರಿಕೆಟ್ ಸೇರ್ಪಡೆಗೊಳಿಸುವುದಕ್ಕೆ ತನ್ನ ಪ್ರಯತ್ನಗಳನ್ನು ಮಾಡುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ಈ ಯೋಜನೆಗೆ ರೂಪ ದೊರೆಯುವುದಕ್ಕೆ ಮೂಲಕಾರಣ ಮುಂದಿನ ಅಕ್ಟೋಬರ್ 15ರಿಂದ ಅಕ್ಟೋಬರ್ 17 ರವರೆಗೆ ಮುಂಬೈನಲ್ಲಿ ನಡೆಯಲಿರುವ 141 ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧಿಕವೇಶನ. ಭಾರತದ ಕ್ರೀಡಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ಅಧಿವೇಶನ ನಡೆಯುತ್ತಿದೆ. ಹೀಗಾಗಿ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆಯಾಗು ವ ಬಗ್ಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಿವೆ. ಅಕ್ಟೋಬರ್ 14ರಂದು ಜಿಯೋ ವರ್ಲ್ಡ್ ಸೆಂಟರ್ (ಜೆಡಬ್ಲ್ಯೂಸಿ) ನಲ್ಲಿ ಉದ್ಘಾಟನಾ ಅಧಿವೇಶನದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಐಒಸಿ ವೆಬ್ಸೈಟ್ ಪ್ರಕಾರ, ಐಒಸಿ ಕಾರ್ಯನಿರ್ವಾಹಕ ಮಂಡಳಿ (ಇಬಿ) ಅಕ್ಟೋಬರ್ 12, 13 ಮತ್ತು 14ರಂದು ಐಒಸಿ ಅಧಿವೇಶನಕ್ಕೆ ಮುಂಚಿತವಾಗಿ ಸಭೆ ಸೇರಲಿದೆ. 2028ರ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರ್ಪಡೆಯಾದರೆ ಮುಂಬಯಿಯಲ್ಲಿ ನಡೆಯುವ ಐಒಸಿ ಅಧಿವೇಶನದಲ್ಲಿ ಔಪಚಾರಿಕ ಘೋಷಣೆಯಾಗುವ ಸಾಧ್ಯತೆಗಳಿವೆ. ಆ ವೇಳೆಗೆ ಕ್ರಿಕೆಟ್ನ ಒಲಿಂಪಿಕ್ಸ್ ಸೇರ್ಪಡೆ ಹಣೆಬರಹ ನಿರ್ಧಾರವಾಗಲಿದೆ ಎಂಬ ಮೂಲಗಳ ಹೇಳಿಕೆ ಆಧರಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬೇಸಿಗೆ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆಗೊಂಡರೆ ನೇರ ಪ್ರಸಾರ ಹಕ್ಕುಗಳ ಆದಾಯವು ಮೂರು ಪಟ್ಟು ಹೆಚ್ಚಾಗಬಹುದು. ಆಸ್ಟ್ರೇಲಿಯಾದ ಬ್ರಿಸ್ಬೇನ್ 2032ರ ಒಲಿಂಪಿಕ್ಸ್ ಆತಿಥ್ಯ ವಹಿಸಲಿದ್ದು, ಕ್ರಿಕೆಟ್ ಸೇರ್ಪಡೆಗೊಂಡರೆ 2036ರ ಒಲಿಂಪಿಕ್ಸ್ ಆತಿಥ್ಯದ ಹಕ್ಕಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗಬಹುದು.
6 ತಂಡಗಳ ಟೂರ್ನಿಗೆ ಐಸಿಸಿ ಸಲಹೆ
ಈ ಸಭೆಗೆ ಒಂದು ತಿಂಗಳ ಮೊದಲು ಐಒಸಿ ಲಾಸ್ ಏಂಜಲೀಸ್ ಸಂಘಟನಾ ಸಮಿತಿಯಿಂದ ಪ್ರಸ್ತಾಪಗಳನ್ನು ಸ್ವೀಕರಿಸಲಿದೆ. ಭಾಗವಹಿಸುವ ಕ್ರೀಡಾಪಟುಗಳ ಸಂಖ್ಯೆಯನ್ನು 10,500ಕ್ಕೆ ಸೀಮಿತಗೊಳಿಸಲು ಹಾಗೂ ಐಸಿಸಿ ಪುರುಷರು ಮತ್ತು ಮಹಿಳೆಯರಿಗೆ ಆರು ತಂಡಗಳ ಸ್ಪರ್ಧೆಯನ್ನು ಆಯೋಜಿಸಲು ಸೂಚಿಸಿದೆ. ತಲಾ ಮೂರು ಗಂಟೆಗಳ ಟಿ20 ಮಾದರಿಯ ಕ್ರಿಕೆಟ್ ಆಯೋಜನೆಗೊಳ್ಳಲಿದೆ.
ಅ1900ರಲ್ಲಿ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕೊನೆಯ ಬಾರಿ ಕ್ರಿಕೆಟ್ ಸೇರ್ಪಡೆಗೊಂಡಿತ್ತು. ಅದಾಗಿ 128 ವರ್ಷಗಳ ನಂತರ ಕ್ರಿಕೆಟ್ ಒಲಿಂಪಿಕ್ಸ್ಗೆ ಮರಳುವ ಬಗ್ಗೆ ಸೂಚನೆಗಳಿವ. ಭಾರತ ಉಪಖಂಡದಲ್ಲಿ, ಈ ಕ್ರೀಡೆಯನ್ನು 100 ಕೋಟಿ ಅಭಿಮಾನಿಗಳು ವೀಕ್ಷಿಸಲಿದ್ದಾರೆ. ಹೀಗಾಗಿ ಕ್ರಿಕೆಟ್ ಸೇರ್ಪಡೆಯಿಂದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಹೆಚ್ಚಿನ ಆದಾಯ ಲಭಿಸಲಿದೆ.
ಇದನ್ನೂ ಓದಿ: INDvsWI: ಭಾರತ-ವಿಂಡೀಸ್ ಕ್ರಿಕೆಟ್ ಸರಣಿಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಒಲಿಂಪಿಕ್ಸ್ನಲ್ಲಿ ಆಟಗಳಲ್ಲಿ ಕ್ರಿಕೆಟ್ ಸೇರಿಸಿದರೆ, ಅದರ ಮಾಧ್ಯಮ ಹಕ್ಕುಗಳ ಆದಾಯವು ಮೂರು ಪಟ್ಟು ಹೆಚ್ಚಾಗಬಹುದು. 2032ರ ಒಲಿಂಪಿಕ್ಸ್ನಲ್ಲಿ ಬ್ರಿಸ್ಬೇನ್ ಆತಿಥ್ಯ ವಹಿಸಲಿದ್ದು, 2036ರ ಒಲಿಂಪಿಕ್ಸ್ಗೆ ಭಾರತ ಬಿಡ್ ಸಲ್ಲಿಸಲಿದೆ. ಕ್ರಿಕೆಟ್ ಅನ್ನು ಒಲಿಂಪಿಕ್ಸ್ಗೆ ಸೇರಿಸುವ ಪ್ರಯತ್ನವನ್ನು ಬಿಸಿಸಿಐಯ ಬೆಂಬಲ ಕೂಡ ಸಿಗಲಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಐಸಿಸಿಯ ಒಲಿಂಪಿಕ್ಸ್ ಸಮಿತಿಯಲ್ಲೂ ಇದ್ದಾರೆ.