ನವ ದೆಹಲಿ: ಜಗತ್ತಿನಾದ್ಯಂತ ಕ್ರಿಕೆಟ್ ಟಿ20 ಲೀಗ್ಗಳು ನಾಯಿಕೊಡೆಗಳಂತೆ ಎದ್ದೇಳುತ್ತಿವೆ. ಅಟಗಾರರು ಕೂಡ ರಾಷ್ಟ್ರೀಯ ತಂಡದ ಪರವಾಗಿ ಆಡುವುದನ್ನು ಬಿಟ್ಟು ಕಡಿಮೆ ಅವಧಿಯಲ್ಲಿ ಹೆಚ್ಚು ದುಡ್ಡು ಹಾಗೂ ಖ್ಯಾತಿ ತಂದುಕೊಡುವ ಲೀಗ್ಗಳ ಕಡೆಗೆ ಗಮನ ಹರಿಸುತ್ತಿದ್ದಾರೆ. ದೇಶಿಯ ಕ್ರಿಕೆಟ್ ಆಟಗಾರರು ಕೂಡ ಲೀಗ್ ಹಾಗೂ ರಾಷ್ಟ್ರೀಯ ತಂಡದ ಪರವಾಗಿ ಆಡುವಾಗಿ ಒತ್ತಡ ನಿಭಾಯಿಸಲು ಒದ್ದಾಡುತ್ತಿದ್ದಾರೆ. ಇವೆಲ್ಲವೂ ಜಾಗತಿಕ ಕ್ರಿಕೆಟ್ ಕಾರಿಡಾರ್ನ ಆತಂಕ ವಿಷಯವಾಗಿದೆ. ಈ ರೀತಿಯಾಗಿ ದಿನವೊಂದಕ್ಕೆ ಉದಯಿಸುತ್ತಿರುವ ಲೀಗ್ಗಳು ಕ್ರಿಕೆಟ್ನ ಪತನಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಲಾಗುತ್ತಿದೆ. ಆದರೆ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಪ್ರಕಾರ ಎಲ್ಲ ಲೀಗ್ಗಳು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ.
ಸ್ಟಾರ್ಸ್ಪೋರ್ಟ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಗಂಗೂಲಿ, ನಾವೆಲ್ಲೂ ಲೀಗ್ ಕ್ರಿಕೆಟ್ ಕುರಿತು ಮಾತನಾಡಲು ಆರಂಭಿಸಿದ್ದೇವೆ. ಐಪಿಎಲ್ ಬಗ್ಗೆ ಹೇಳುವುದಾದರೆ ಉತ್ತಮ ಕ್ರಿಕೆಟ್ ವ್ಯವಸ್ಥೆಗೆ ಒಳಪಟ್ಟಿದೆ. ಬಿಗ್ ಬ್ಯಾಶ್ ಲೀಗ್ ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಇಂಗ್ಲೆಂಡ್ನಲ್ಲಿ ನಡೆಯುವ ಹಂಡ್ರೆಡ್ ಹಾಗೂ ದಕ್ಷಿಣ ಅಫ್ರಿಕಾದಲ್ಲಿ ನಡೆಯುವ ಲೀಗ್ ಕೂಡ ಉತ್ತಮವಾಗಿದೆ.
ಈ ಎಲ್ಲ ಕ್ರಿಕೆಟ್ ಲೀಗ್ಗಳು ನಡೆಯುವ ದೇಶದಲ್ಲಿ ಕ್ರಿಕೆಟ್ ಹೆಚ್ಚು ಜನಪ್ರಿಯವಾಗಿದೆ. ಇಂಥ ದೇಶಗಳಲ್ಲಿ ಮಾತ್ರ ಕ್ರಿಕೆಟ್ ಲೀಗ್ಗಳು ಉಳಿಯುತ್ತವೆ. ಮುಂದಿನ ಐದು, ಆರು ವರ್ಷಗಳಲ್ಲಿ ಕ್ರಿಕೆಟ್ಗೆ ಭದ್ರ ಬುನಾದಿ ಹೊಂದಿರುವ ದೇಶಗಳಲ್ಲಿ ಮಾತ್ರ ಲೀಗ್ಗಳು ಉಳಿಯುತ್ತವೆ. ಉಳಿದ ಕಡೆ ಜನಪ್ರಿಯತೆ ಗಿಟ್ಟಿಸುವುದಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಇದನ್ನೂ ಓದಿ : MS Dhoni-Sourav Ganguly: 16ನೇ ಆವೃತ್ತಿಯ ಐಪಿಎಲ್ಗೂ ಮುನ್ನ ಧೋನಿ ಭೇಟಿಯಾದ ಗಂಗೂಲಿ
ಕೆಲವೊಂದು ಲೀಗ್ಗಳು ಹೆಚ್ಚು ಜನಪ್ರಿಯವಾಗಿರುವ ಕಾರಣ ಅಲ್ಲಿ ಮಾತ್ರ ಆಡಲು ಕ್ರಿಕೆಟಿಗರು ಆಡಲು ಹೋಗುತ್ತಾರೆ. ಉಳಿದ ಕಡೆಗೆ ಹೋಗಲು ಇಷ್ಟ ಪಡುವುದಿಲ್ಲ. ಅಂಥ ಲೀಗ್ಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಗಂಗೂಲಿ ಭವಿಷ್ಯ ನುಡಿದಿದ್ದಾರೆ.