ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆರ್‌ಸಿಬಿ ಬೌಲರ್ಸ್ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದರು. ಬೆಂಗಳೂರು ಬಾಯ್ಸ್ ಬೆಂಕಿ ಬೌಲಿಂಗ್ಗೆ ತತ್ತರಿಸಿದ ಕೆಕೆಆರ್ 128 ರನ್ ಗಳಿಸಿತು. ಆರ್‌ಸಿಬಿ ತಂಡದ ಸ್ಪಿನ್ ಬೌಲರ್ ವನಿಂದು ಹಸರಂಗ ಕೆಕೆಆರ್ ವಿರುದ್ಧ ೪ ವಿಕೆಟ್ ಕಬಳಿಸಿ ಅಬ್ಬರಿಸಿದರು.
ಆರ್‌ಸಿಬಿ ತಂಡದ ಸ್ಟಾರ್ ಬೌಲರ್ ಹರ್ಷಲ್ ಪಟೇಲ್ 2 ಮೇಡನ್ ಓವರ್ ಮಾಡಿ ಹೊಸ ದಾಖಲೆ ಬರೆದರು. ಮತ್ತೊಬ್ಬ ವೇಗದ ಬೌಲರ್ ಆಕಾಶ್ ದೀಪ್ 3 ವಿಕೆಟ್ ಪಡೆಯುವ ಮೂಲಕ ಕೆಕೆಆರ್ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಕೆಕೆಆರ್ ಪರ ಬ್ಯಾಟಿಂಗ್ ಮಾಡಿದ ಆಂಡ್ರೆ ರಸೆಲ್ 25 ರನ್ ಗಳಿಸಿ ತಂಡದ ಟಾಪ್ ಸ್ಕೋರರ್ ಎನಿಸಿಕೊಂಡರು.
129 ರನ್ ಟಾರ್ಗೆಟ್ ಬೆನ್ನತ್ತಿದ ಆರ್‌ಸಿಬಿ ಮೊದಲ ಮೂರು ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡಿತು. ಆರಂಭದಿಂದಲೇ ಟಿಮ್ ಸೌಥಿ ಹಾಗೂ ಉಮೇಶ್ ಯಾದವ್ ಬೌಲಿಂಗ್ ದಾಳಿಗೆ ನಲುಗಿದ ಆರ್‌ಸಿಬಿ ಬ್ಯಾಟ್ಸ್ ಮನ್‌ಗಳು ರನ್ ಕದಿಯಲು ಪರದಾಡಿದರು. ಟಿಮ್ ಸೌಥಿ 3 ವಿಕೆಟ್ ಪಡೆಯುವ ಮೂಲಕ ಆರ್‌ಸಿಬಿ ತಂಡವನ್ನು ಸಂಕಷ್ಟಕ್ಕೆ ತಳ್ಳಿದರು.
ಆರ್‌ಸಿಬಿ ಆಟಗಾರರಾದ ಶೆರ್ಪೇನ್ ರುಥರ್ಫೋರ್ಡ್ ಹಾಗೂ ಶಹಬ್ಬಾಸ್ ಅಹ್ಮದ್ ತಲಾ 28 ರನ್ ಹಾಗೂ 27 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂದ್ಯದ ಕೊನೆಯಲ್ಲಿ ದಿನೇಶ್ ಕಾರ್ತಿಕ್ ರೋಚಕ ಆಟ ಪ್ರದರ್ಶಿಸಿದರು ಹಾಗೂ ಆರ್‌ಸಿಬಿ ತಂಡ ಜಯಭೇರಿ ಸಾಧಿಸಿತು.
ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಆರ್‌ಸಿಬಿ ತಂಡಕ್ಕೆ ಆಸರೆಯಾದ ಸ್ಪಿನ್ ಬೌಲರ್ ವನಿಂದು ಹಸರಂಗ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.