ಗಯಾನಾ: ಈ ಬಾರಿಯ ಟಿ20 ವಿಶ್ವಕಪ್(T20 World Cup 2024) ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶಗಳು ದಾಖಲಾಗುತ್ತಿವೆ. 2 ದಿನಗಳ ಹಿಂದಷ್ಟೇ ಪಾಕಿಸ್ತಾನ ತಂಡ ಕ್ರಿಕೆಟ್ ಶಿಶು ಅಮೆರಿಕಾ ವಿರುದ್ಧ ಆಘಾತಕಾರಿ ಸೋಲು ಕಂಡಿತ್ತು. ಇದೀಗ ಶನಿವಾರ ನಡೆದ ಪಂದ್ಯದಲ್ಲಿ ಅನುಭವಿ ಹಾಗೂ ಬಲಿಷ್ಠ ತಂಡವಾದ ನ್ಯೂಜಿಲ್ಯಾಂಡ್ ತಂಡ ಅಫಘಾನಿಸ್ತಾನ(AFG vs NZ) ವಿರುದ್ಧ ಹೀನಾಯವಾಗಿ ಸೋಲು ಕಂಡಿದೆ.
ಇಲ್ಲಿನ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್(80) ಅವರ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ನಾಟಕೀಯ ಕುಸಿತ ಕಂಡು 15.2 ಓವರ್ ಗಳಲ್ಲಿ ಕೇವಲ 75 ರನ್ಗಳಿಗೆ ಸರ್ವಪತನ ಕಂಡು 84 ರನ್ಗಳ ಸೋಲಿನ ಅವಮಾನ ಎದುರಿಸಿತು.
ಚೇಸಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್ಗೆ ಫಜಲ್ಹಕ್ ಫಾರೂಕಿ ಮೊದಲ ಎಸೆತದಲ್ಲೇ ಫಿನ್ ಅಲೆನ್ ವಿಕೆಟ್ ಕಿತ್ತು ಆಘಾತವಿಕ್ಕಿದರು. ಖಾತೆ ತೆರೆಯುವ ಮುನ್ನವೇ ವಿಕೆಟ್ ಕಳೆದುಕೊಂಡ ಕಿವೀಸ್ ಈ ಆಫಾತದಿಂದ ಹೊರಬರುವ ಮುನ್ನವೇ ಡೆವೋನ್ ಕಾನ್ವೆ(8), ನಾಯಕ ಕೇನ್ ವಿಲಿಯಮ್ಸನ್(9), ಡ್ಯಾರಿಯಲ್ ಮಿಚೆಲ್(5) ವಿಕೆಟ್ ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಬಂದ ಬ್ಯಾಟರ್ಗಳು ಕೂಡ ತಂಡಕ್ಕೆ ಆಸರೆಯಾಗುವಲ್ಲಿ ಎಡವಿದರು. ಒಂದಕ್ಕೆ ಸೀಮಿತರಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಗ್ಲೆನ್ ಫಿಲಿಪ್ಸ್ 18 ರನ್ ಬಾರಿಸಿದ್ದೇ ತಂಡದ ಪರ ಅತ್ಯಧಿಕ ಗಳಿಕೆ. ಫಜಲ್ಹಕ್ ಫಾರೂಕಿ 3.2 ಓವರ್ ಬೌಲಿಂಗ್ ದಾಳಿ ನಡೆಸಿ ಕೇವಲ 17 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತು ಮಿಂಚಿದರು. ನಾಯಕ ರಶೀದ್ ಖಾನ್ ಕೂಡ ಸ್ಪಿನ್ನ ಜಾದು ನಡೆಸಿ 17 ರನ್ಗೆ 4 ವಿಕೆಟ್ ಉಡಾಯಿಸಿದರು. ಹಿರಿಯ ಆಟಗಾರ ಮೊಹಮ್ಮದ್ ನಬಿ 2 ವಿಕೆಟ್ ಪಡೆದರು.
ಇದನ್ನೂ ಓದಿ T20 World Cup 2024: ನಸೌ ಪಿಚ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಟೀಮ್ ಇಂಡಿಯಾ ಆಟಗಾರರು
ಉತ್ತಮ ಜತೆಯಾಟ
ಮೊದಲು ಬ್ಯಾಟಿಂಗ್ ನಡೆಸಿದ ಅಘಫಾನಿಸ್ತಾನ ಪರ ಆರಂಭಿಕ ಆಟಗಾರರಾದ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಆರಂಭದಿಂದಲೇ ಕಿವೀಸ್ ಬೌಲರ್ಗಳ ಮೇಲೆರಗಿ ಸರಾಗವಾಗಿ ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 103 ರನ್ಗಳನ್ನು ಒಟ್ಟು ಗೂಡಿಸಿತು. ರಹಮಾನುಲ್ಲಾ ಗುರ್ಬಾಜ್ 56 ಎಸೆತಗಳಿಂದ ಬರೋಬ್ಬರಿ 5 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿ 80 ರನ್ ಗಳಿಸಿದರು. ಇವರ ಜತೆಗಾರ ಇಬ್ರಾಹಿಂ ಜದ್ರಾನ್ 2 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 44 ರನ್ಗೆ ವಿಕೆಟ್ ಕಳೆದುಕೊಂಡು ಕೇವಲ 6 ರನ್ ಹಿನ್ನಡೆಯಿಂದ ಅರ್ಧಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಉಭಯ ಆಟಗಾರರ ವಿಕೆಟ್ ಪತನದ ಬಳಿಕ ಬಂದವರಲ್ಲಿ ನಿರೀಕ್ಷಿತ ಪ್ರದರ್ಶನ ತೋರಿದ್ದು ಅಜ್ಮತುಲ್ಲಾ ಒಮರ್ಜಾಯ್ ಮಾತ್ರ. ಇವರು 22 ರನ್ ಬಾರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಬಾಂಗ್ಲಾಗೆ ರೋಚಕ ಗೆಲುವು
ದಿನದ ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಶ್ರೀಲಂಕಾ ವಿರುದ್ಧ ರೋಚ್ಕ 2 ವಿಕೆಟ್ಗಳ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 9 ವಿಕೆಟ್ಗೆ 124 ಬಾರಿಸಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾ ಪರದಾಟಿ ಕೊನೆಗೂ 8 ವಿಕೆಟ್ಗೆ 125 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.