ಲಂಡನ್: ಹಾಲಿ ಆವೃತ್ತಿಯ wimbeldon ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶವೊಂದು ಮೂಡಿ ಬಂದಿದ್ದು, ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವದ ನಂಬರ್ ೧ ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಮೂರನೇ ಸುತ್ತಿನಲ್ಲಿ ಸೋತು ನಿರಾಸೆ ಎದುರಿಸಿದ್ದಾರೆ. ಅಚ್ಚರಿಯೆಂದರೆ ಅವರು ಸೋತಿರುವುದು ೩೭ನೇ ರ‍್ಯಾಂಕ್‌ನ ಆಟಗಾರ್ತಿ ಫ್ರಾನ್ಸ್‌ನ ಅಲೈಜ್ ಕಾರ್ನೆಟ್ ವಿರುದ್ಧ!
ಶನಿವಾರ ನಡೆದ ಹಣಾಹಣಿಯಲ್ಲಿ ಸ್ವಿಯಾಟೆಕ್, ಫ್ರಾನ್ಸ್‌ನ ಆಟಗಾರ್ತಿ ವಿರುದ್ಧ 6-4, 6-2 ನೇರ ಸೆಟ್‌ಗಳಿಂದ ಸೋತರು. ಇದರೊಂದಿಗೆ ಪೋಲೆಂಡ್‌ನ ̄೨೧ ವರ್ಷದ ಆಟಗಾರ್ತಿಯ ಸತತ ೩೭ ಪಂದ್ಯಗಳ ಗೆಲುವಿನ ಅಭಿಯಾನ ಕೊನೆಗೊಂಡಿತು. ೧ ಗಂಟೆ ೩೩ ನಿಮಿಷ ನಡೆದ ಹಣಾಹಣಿಯಲ್ಲಿ ೩೭ ಸ್ವಯಂಪ್ರೇರಿತ ತಪ್ಪುಗಳು (ಅನ್‌ಫೋರ್ಸ್ಡ್ ಎರರ್) ಎಸಗುವ ಮೂಲಕ ತಮ್ಮ ಸೋಲಿಗೆ ತಾವೇ ಮುನ್ನುಡಿ ಬರೆದರು. ಇದೇ ವೇಳೆ ಫ್ರೆಂಚ್ ತರುಣಿ ಕೇವಲ ೭ ಸ್ವಯಂಪ್ರೇರಿತ ತಪ್ಪುಗಳೊಂದಿಗೆ ವಿಶ್ವದ ನಂಬರ್ ಒನ್ ಆಟಗಾರ್ತಿಯೇ ತಮ್ಮೆದುರಿಗೆ ಮಂಡಿಯೂರುವಂತೆ ಮಾಡಿದರು.
ಪ್ರಶಸ್ತಿ ಫೇವರಿಟ್ ಹೊರಕ್ಕೆ
ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಹಾಲಿ ಅವೃತ್ತಿಯ ವಿಂಬಲ್ಡನ್‌ನ ಪ್ರಶಸ್ತಿ ಫೇವರಿಟ್ ಎಂದೇ ಹೇಳಲಾಗಿತ್ತು. ಫ್ರೆಂಚ್ ಓಪನ್ ಸೇರಿದಂತೆ ಕಳೆದ ಫೆಬ್ರವರಿಯಿಂದ ಅವರು ಆರು ಟೂರ್ನಮೆಂಟ್‌ಗಳನ್ನು ಗೆದ್ದಿದ್ದರು. ಜತೆಗೆ ಆಸ್ಟ್ರೇಲಿಯಾದ ಆಶ್ಲೀ ಬಾರ್ಟಿ ನಿವೃತ್ತಿ ಹೇಳಿದ ಬಳಿಕ ನಂಬರ್ ಒನ್ ಸ್ಥಾನವನ್ನೂ ತಮ್ಮದಾಗಿಸಿಕೊಂಡಿದ್ದರು. ಇಷ್ಟೆಲ್ಲ ಪೂರಕ ಅಂಶಗಳು ಹೊಂದಿರುವ ಹೊರತಾಗಿಯೂ ಅವರು ಸೋಲಿಗೆ ಒಳಗಾಗಿರುವುದು ಅಭಿಮಾನಿಗಳ ಪಾಲಿಗೆ ಅರಗಿಸಿಕೊಳ್ಳಲಾಗದ ವಿಷಯವಾಗಿದೆ.
ದೊಡ್ಡ ಪ್ರತಿಭೆಗಳನ್ನು ಶಾಕ್ ಕೊಡುವ ಅಲೈಜ್
೩೨ ವರ್ಷದ ಅಲೈಜ್ ಕಾರ್ನೆಟ್ ವಿಂಬಲ್ಡನ್‌ನಲ್ಲಿ ನಾಲ್ಕನೇ ಸುತ್ತಿಗೇರುತ್ತಿರುವುದು ಇದು ಎರಡನೇ ಬಾರಿ. ಕೊನೇ ಬಾರಿ ಅವರು ೨೦೧೪ರಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆದಿದ್ದರು. ಆ ಆವೃತ್ತಿಯಲ್ಲಿ ಅವರು ಬಲಿಷ್ಠ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರನ್ನೇ ಹೊರಕ್ಕಟ್ಟಿದ್ದರು.
ಇದನ್ನೂ ಓದಿ : ಫ್ರೆಂಚ್ ಓಪನ್ ಬಳಿಕ ನಡಾಲ್ ಕಣ್ಣು ಈಗ ವಿಂಬಲ್ಡನ್ ಮೇಲೆ!