ಬೆಂಗಳೂರು: ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಮದುವೆ(Athiya Shetty)ಯ ದಿನಾಂಕವನ್ನು ನಿಗದಿ ಮಾಡಲಾಗಿದ್ದು, ಜನವರಿ 23ಕ್ಕೆ ಇವರಿಬ್ಬರೂ ಹಸೆಮಣೆ ಏರಲಿದ್ದಾರೆಂದು ಹೇಳಲಾಗುತ್ತಿದೆ. ಎರಡೂ ಕುಟುಂಬಗಳು ಮದುವೆ ದಿನಾಂಕವನ್ನು ಅಂತಿಮಗೊಳಿಸಿವೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ, ರಾಹುಲ್ ಅವರ ಬಹುಕಾಲದ ಗೆಳತಿಯಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಇವರಿಬ್ಬರ ವಿವಾಹ ಕುರಿತಾದ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದವು.
ಸುನಿಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ‘ತಡಪ್’ನ ಪ್ರಥಮ ಪ್ರದರ್ಶನದ ವೇಳೆ, ರಾಹುಲ್-ಅಥಿಯಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಈ ಮೊದಲು ಡಿಸೆಂಬರ್ ಅಂತ್ಯಕ್ಕೆ ಮದುವೆ ನಡೆಯಲಿದೆ ಎಂಬ ಸುದ್ದಿ ಇತ್ತು. ಆದರೆ ಈಗ 2023 ಜನವರಿ 23ರಂದು ಮದುವೆ ನಡೆಯುವುದು ಪಕ್ಕಾ ಎನ್ನಲಾಗುತ್ತಿದೆ.
ಇದನ್ನೂ ಓದಿ | Athiya Shetty and KL Rahul | ನಟಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಕಲ್ಯಾಣವಂತೆ : ಸುನೀಲ್ ಶೆಟ್ಟಿ ಹೇಳಿದ್ದೇನು?
ಸುನೀಲ್ ಶೆಟ್ಟಿ ಅವರ ಖಂಡಾಲ ಬಂಗಲೆ ಜಹಾನ್ನಲ್ಲೇ ಮದವೆ ನಡೆಯಲಿದೆ. ಜನವರಿ 21ರಿಂದಲೇ ಮದುವೆ ಶಾಸ್ತ್ರಗಳು ಶುರುವಾಗಲಿವೆ. ಮೂರು ದಿನ ನಡೆಯುವ ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಮೆಹಂದಿ, ಹಳದಿ, ಸಂಗೀತ ಸಮಾರಂಭ ಸೇರಿದಂತೆ ಎಲ್ಲಾ ಶಾಸ್ತ್ರಗಳು ಮತ್ತು ಸಂಪ್ರದಾಯ ಬದ್ಧವಾಗಿ ಮದುವೆ ಮಾಡಲು ಎರಡೂ ಕುಟುಂಬಗಳು ನಿರ್ಧರಿಸಿದೆ. ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆಯು ದಕ್ಷಿಣ ಭಾರತದ ಶೈಲಿಯಲ್ಲೇ ನಡೆಯಲಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ, ಕೆ.ಎಲ್ ರಾಹುಲ್ ಅವರು ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆಗ ಅಥಿಯಾ ಖುದ್ದಾಗಿ ಮುಂದೆ ನಿಂತು ರಾಹುಲ್ ಅವರ ಆರೈಕೆ ಮಾಡಿದ್ದರು. ಆಗಿನಿಂದಲೇ ಇವರ ಮದುವೆಯ ಬಗ್ಗೆ ಸುದ್ದಿಗಳಿದ್ದವು. ಅಲ್ಲದೇ, ಕಳೆದ ಮೇ ತಿಂಗಳಲ್ಲಿ ಸಹೋದರ ಅಹಾನ್ ಅವರು ಅಥಿಯಾ-ರಾಹುಲ್ ಮದುವೆಯ ಬಗ್ಗೆ ಸುಳಿವು ನೀಡಿದ್ದರು.
ಇದಕ್ಕೂ ಮುನ್ನ ಸುನೀಲ್ ಶೆಟ್ಟಿ ಅವರು ರಾಹುಲ್ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದರು. ಕೆ ಎಲ್ ರಾಹುಲ್ ತಮಗೆ ಇಷ್ಟ ಎಂಬುದಾಗಿಯೂ ಹೇಳಿದ್ದರು. “ಕಾಲ ಬದಲಾಗಿದೆ. ಏನು ಮಾಡಬೇಕೆಂಬುದನ್ನು ಅವರೇ(ಮಕ್ಕಳು) ನಿರ್ಧರಿಸುತ್ತಾರೆ. ನನ್ನ ಮಗಳು ಮತ್ತು ಮಗ ಇಬ್ಬರೂ ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರಿಗೆ ನನ್ನ ಆಶೀರ್ವಾದ ಸದಾ ಇರುತ್ತದೆ,” ಎಂದು ನಟ ಸುನೀಲ್ ಶೆಟ್ಟಿ ಹೇಳಿಕೊಂಡಿದ್ದರು.
ಇದನ್ನೂ ಓದಿ | Sunil Shetty | ಮಗಳು ಅಥಿಯಾ ಶೆಟ್ಟಿ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ ನಟ ಸುನೀಲ್ ಶೆಟ್ಟಿ