ಮುಂಬಯಿ: ಟೀಮ್ ಇಂಡಿಯಾದ ಪ್ರಧಾನ ಕೋಚ್ ಆಗಿ ಮಾಜಿ ಆಟಗಾರ ಗೌತಮ್ ಗಂಭೀರ್(Gautam Gambhir) ಈಗಾಗಲೇ ನೇಮಕಗೊಂಡಿದ್ದಾರೆ. ಇನ್ನುಳಿದ ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಮತ್ತು ಸಹಾಯಕ ಕೋಚ್ಗಳ ಆಯ್ಕೆಯಾಗಬೇಕಿದೆ. ಈ ಹುದ್ದೆಗಾಗಿ ಸ್ವತಃ ಗಂಭೀರ್ ಸೂಚಿಸಿರುವ ಐವರ ಹೆಸರನ್ನು ಬಿಸಿಸಿಐ(BCCI) ತಿರಸ್ಕರಿಸಿದೆ ಎಂದು ತಿಳಿದುಬಂದಿದೆ. ಕೇವಲ ಒಂದು ಹೆಸರನ್ನು ಮಾತ್ರ ಅನುಮೋದಿಸಿದೆ ಎನ್ನಲಾಗಿದೆ.
ಗಂಭೀರ್ ಅವರು ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ಆರ್. ವಿನಯ್ ಕುಮಾರ್, ಲಕ್ಷ್ಮೀಪತಿ ಬಾಲಾಜಿ(Lakshmipathy Balaji) ಮೋರ್ನೆ ಮೊರ್ಕಲ್ ಹೆಸರು ಸೂಚಿಸಿದ್ದರು. ಬ್ಯಾಟಿಂಗ್ ಕೋಚ್ ಆಗಿ ಅಭಿಷೇಕ್ ನಾಯರ್, ಫೀಲ್ಡಿಂಗ್ ಕೋಚ್ ಆಗಿ ಜಾಂಟಿ ರೋಡ್ಸ್ ಹೆಸರನ್ನು ಸೂಚಿಸಿದ್ದರು. ಆದರೆ ಮಂಡಳಿಯು ಈ ಎಲ್ಲ ಆಟಗಾರರ ಪೈಕಿ ಒಬ್ಬರ ಆಯ್ಕೆಗೆ ಮಾತ್ರ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಐಪಿಎಲ್ನಲ್ಲಿ ಕೆಕೆಆರ್ ಪರ ಗೌತಮ್ ಗಂಭೀರ್ ಜತೆ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಅಭಿಷೇಕ್ ನಾಯರ್ ಅವರನ್ನು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿಕೊಳ್ಳಲು ಬಿಸಿಸಿಐ ಸಹಮತ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
ಟೀಮ್ ಇಂಡಿಯಾದ ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಈ ಹಿಂದೆ ಇದ್ದ ಟಿ.ದಿಲಿಪ್ ಅವರನ್ನೇ ಮತ್ತೆ ಮುಂದುವರಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಈ ಹಿಂದೆ ರವಿಶಾಸ್ತ್ರಿ ಹಾಗೂ ರಾಹುಲ್ ದ್ರಾವಿಡ್ಗೆ ತಮ್ಮ ಕೋಚಿಂಚ್ ಸಿಬ್ಬಂದಿ ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಲಾಗಿತ್ತು. ಆದರೆ ಗಂಭೀರ್ಗೆ ಈ ಸ್ವತಂತ್ರ ನೀಡಲಾಗಿಲ್ಲ ಎನ್ನಲಾಗಿದೆ. ಇದಕ್ಕೆ ನಿರ್ದಿಷ್ಟ ಕಾರಣ ಏನೆಂಬಹುವುದು ತಿಳಿದಿಲ್ಲ.
ಇದನ್ನೂ ಓದಿ SL vs IND: ಇಂದು ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ; ಯಾರಿಗೆ ಒಲಿಯಲಿದೆ ನಾಯಕತ್ವ?
ಮೂಲಗಳ ಪ್ರಕಾರ ಬಿಸಿಸಿಐ ಬೌಲಿಂಗ್ ಕೋಚ್ ಆಗಿ ಜಹೀರ್ ಖಾನ್(Zaheer Khan) ಅವರನ್ನು ನೇಮಕ ಮಾಡಲಿದೆ ಎನ್ನಲಾಗಿದೆ. ಭಾರತ ಕ್ರಿಕೆಟ್ ತಂಡವು ಕಂಡ ಅತ್ಯಂತ ಯಶಸ್ವಿ ಎಡಗೈ ವೇಗದ ಬೌಲರ್ ಎನಿಸಿಕೊಂಡಿರುವ ಜಹೀರ್ ಖಾನ್, ಭಾರತ ಪರ 309 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 610 ವಿಕೆಟ್ ಕಬಳಿಸಿದ್ದಾರೆ.
ಕೋಚ್ ಹುದ್ದೆಗೆ ಗಂಭೀರ್ ಅವರನ್ನು ಆಯ್ಕೆ ಮಾಡುವ ಮುನ್ನ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(virat kohli) ಜತೆ ಬಿಸಿಸಿಐ ಅಭಿಪ್ರಾಯ ಕೇಳಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಹೌದು ವಿರಾಟ್ ಕೊಹ್ಲಿ ಮತ್ತು ಗಂಭೀರ್ ಐಪಿಎಲ್ ವೇಳೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕಳೆದ ವರ್ಷದ ಐಪಿಎಲ್ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೂ ಇಬರಿಬ್ಬರ ಜಗಳ ಮುಂದುವರಿದಿತ್ತು. ಕೊಹ್ಲಿಯ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಮುನಿಸನ್ನು ಪ್ರದರ್ಶಿಸಿದ್ದರು. ಹೀಗಿರುವಾಗ ಬಿಸಿಸಿಐ ಗಂಭೀರ್ ಅವರನ್ನು ಕೋಚ್ ಆಗಿ ನೇಮಕ ಮಾಡುವಾಗ ಕೊಹ್ಲಿಯನ್ನು ಒಂದು ಮಾತು ಕೂಡ ಕೇಳದೇ ಇರುವುದು ಕೊಹ್ಲಿ ಮತ್ತು ಟೀಮ್ ಇಂಡಿಯಾ ಅಭಿಮಾನಿಗಳಿಗೆ ಅಸಮಾಧಾನ ಉಂಟುಮಾಡಿದೆ. ಇವರಿಬ್ಬರ ಜಗಳ ಮತ್ತೆ ಮುಂದುವರಿದರೆ ತಂಡದ ಒಗ್ಗಟ್ಟು ಇಲ್ಲದಂತಾಗಬಹುದೆಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.