ನ್ಯೂಯಾರ್ಕ್: ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ನ್ಯೂಯಾರ್ಕ್ನಲ್ಲಿರುವ ಟೀಮ್ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal) ಅವರು ಬಿಡುವಿನ ವೇಳೆ ತಮ್ಮ ಪತ್ನಿ ಧನಶ್ರೀ ವರ್ಮಾ(Chahal-Dhanashree) ಜತೆ ನ್ಯೂಯಾರ್ಕ್ ಸಿಟಿ ಸುತ್ತಿದ್ದಾರೆ. ಈ ಜೋಡಿ ಇಲ್ಲಿನ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಿದ ಸುಂದರ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುತ್ತಿದ್ದ ನೆಟ್ಟಿಗರಿಗೆ ನಾವಿಬ್ಬರು ಚೆನ್ನಾಗಿಯೇ ಇದ್ದೇವೆ ಎನ್ನುವ ಪರೋಕ್ಷ ಸಂದೇಶವೊಂದನ್ನು ನೀಡಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಚಹಲ್ ಹಾಗೂ ಧನ ಶ್ರೀ(Dhanashree Verma) ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂಬುದಾಗಿ ಸುದ್ದಿ ಹರಡಿತ್ತು. ಧನಶ್ರಿ ತಮ್ಮ ಗೆಳೆಯರೊಂದಿಗೆ ಕಾಣಿಸಿಕೊಂಡಾಗಲೆಲ್ಲವೂ ಸಾಮಾಜಿ ಜಾಲತಾಣದಲ್ಲಿ ಈ ವಿಚಾರ ಆಗಾಗ ಮುನ್ನಲೆಗೆ ಬರುತ್ತಿತ್ತು. ಆದರೆ ಈ ಜೋಡಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಒಳ್ಳೆಯ ರೀತಿಯಲ್ಲೇ ಸಂಸಾರ ನಡೆಸುತ್ತಿದ್ದಾರೆ. ಇದೀಗ ನ್ಯೂಯಾರ್ಕ್ ಸಿಟಿಯಲ್ಲಿ ಎಂಜಾಯ್ ಮೂಡ್ನಲ್ಲಿರುವ ಫೋಟೊಗಳನ್ನು ಹಂಚಿಕೊಂಡು ತಮ್ಮ ಸಂಸಾರದ ಮಧ್ಯೆ ಹುಳಿ ಹಿಂಡುತ್ತಿರುವವರಿಗೆ ತಕ್ಕ ಉತ್ತರ ನೀಡಿದ್ದಾರೆ.
ತಂದೆಯಾಗಲಿದ್ದಾರಾ ಚಹಲ್?
ಚಹಲ್ ಮತ್ತು ಧನಶ್ರೀ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಧನಶ್ರೀ ಗರ್ಭಿಣಿಯರು ಧರಿಸುವ ಉಡುಗೆ ತೊಟ್ಟು(Dhanashree Verma Maternity Dress) ತನ್ನ ಗಂಡ ಚಹಲ್ ಜತೆಗಿರುವ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ಚಹಲ್ ತಂದೆಯಾಗುತ್ತಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಆದರೆ ಈ ಜೋಡಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇದು ಕೇವಲ ನೆಟ್ಟಿಗರ ಕಲ್ಪನೆಯಾಗಿದೆ. ಧನಶ್ರೀ ಡ್ಯಾನ್ಸರ್ ಮತ್ತು ಮಾಡೆಲ್ ಆಗಿರುವ ಕಾರಣ ಟ್ರೆಂಡ್ಗಾಗಿ ಈ ಉಡುಗೆಯನ್ನು ತೊಟ್ಟಿರುವ ಸಾಧ್ಯತೆಯೂ ಅಧಿಕವಾಗಿದೆ. 2020ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.
ಇದನ್ನೂ ಓದಿ Yuzvendra Chahal: ಸಿಕ್ಸರ್ ಹೊಡೆಸಿಕೊಂಡು ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಚಹಲ್
ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ನಲ್ಲಿ ಅವಕಾಶ ಸಿಗದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಐಪಿಎಲ್ ಪ್ರದರ್ಶನ ನೋಡಿ ಟಿ20ಯಲ್ಲಿ ಅವಕಾಶ ನೀಡಲಾಗಿದೆ. ಚಹಲ್ ಸದ್ಯ ಅಮೆರಿಕಕ್ಕೆ ತೆರಳಿದ್ದಾರೆ. ಇದುವರೆಗೆ ಭಾರತ ಪರ 72 ಏಕದಿನ ಪಂದ್ಯಗಳಿಂದ 121 ವಿಕೆಟ್, 80 ಟಿ20 ಆಡಿ 96 ವಿಕೆಟ್ ಕಡೆವಿದ್ದಾರೆ. ಇಂದು ನಡೆಯುವ ಕೆನಾಡ ವಿರುದ್ಧದ ಪಂದ್ಯದಲ್ಲಿ ಮತ್ತು ಸೂಪರ್-8 ಹಂತದ ಪಂದ್ಯದಲ್ಲಿ ಚಹಲ್ಗೆ ಆಡುವ ಅವಕಾಶ ಸಿಗುವ ಸಾಧ್ಯತೆ ಅಧಿಕವಾಗಿದೆ.
ಇತ್ತೀಚೆಗೆ 150ನೇ ಐಪಿಎಲ್ ಪಂದ್ಯವನ್ನಾಡಿದ ಚಹಲ್ಗೆ ಪತ್ನಿ ಭಾವುಕ ವಿಡಿಯೊ ಸಂದೇಶದ ಮೂಲಕ ಹಾರೈಸಿದ್ದರು. “ಹೇ ಯುಜಿ, ನಿಮ್ಮ 150ನೇ ಐಪಿಎಲ್ ಪಂದ್ಯಕ್ಕೆ ಅಭಿನಂದನೆಗಳು. ನಿವು ಈ ಹಿಂದೆ ಆಡಿದ ತಂಡಕ್ಕೆ ಮತ್ತು ಈಗ ಆಡುತ್ತಿರುವ ರಾಜಸ್ಥಾನ್ ರಾಯಲ್ಸ್‌ಗೆ ನೀವು ಅಪಾರ ಕೊಡುಗೆ ನೀಡಿದ್ದೀರಿ. ನಿಮ್ಮ ಬಗ್ಗೆ ನನಗೆ ಯಾವತ್ತೂ ಹೆಮ್ಮೆ ಇದೆ. ನೀವು ನಿಮ್ಮ ಆಟವನ್ನು ಹೇಗೆ ಆಡುತ್ತೀರಿ ಮತ್ತು ಪ್ರತಿ ಬಾರಿ ನೀವು ಕಮ್ಬ್ಯಾಕ್ ಮಾಡುವ ರೀತಿ ನಿಜಕ್ಕೂ ಮೆಚ್ಚಲೇ ಬೇಕು. ಯಾವುದೇ ಪಂದ್ಯ ಒತ್ತಡದಲ್ಲಿದ್ದಾಗಲೆಲ್ಲಾ ವಿಕೆಟ್ ತೆಗೆಯಬಲ್ಲ ಬೌಲರ್ ನೀವಾಗಿದ್ದೀರಿ. ನಾನು ನಿಮ್ಮ ದೊಡ್ಡ ಚೀರ್‌ಲೀಡರ್ ಮತ್ತು ನಾನು ಯಾವಾಗಲೂ 100 ಪ್ರತಿಶತದಷ್ಟು ನಿಮ್ಮನ್ನು ಬೆಂಬಲಿಸುತ್ತೇನೆ” ಎಂದು ಶುಭ ಹಾರೈಸಿದ್ದರು. ವಿಡಿಯೊವನ್ನು ರಾಜಸ್ಥಾನ್ ರಾಯಲ್ಸ್(Rajasthan Royals) ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿತ್ತು.