ಕರಾಚಿ: ಪಾಕಿಸ್ತಾನ(IND vs PAK) ಆತಿಥ್ಯದಲ್ಲಿ ಮುಂದಿನ ವರ್ಷ(2025) ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy 2025) ಕ್ರಿಕೆಟ್ ಪಂದ್ಯಾವಳಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಟೂರ್ನಮೆಂಟ್ ನಡೆಯಲಿದೆ ಎಂದು ವರದಿಯಾಗಿದೆ. ಭಾರತ ತಂಡ ಟೂರ್ನಿಯಲ್ಲಿ ಆಡಲು ಪಾಕಿಸ್ತಾನಕ್ಕೆ ತೆರಳುವುದು ಇನ್ನೂ ಖಚಿತಗೊಂಡಿಲ್ಲ. ಈ ಮಧ್ಯೆ ಭಾರತದ ಪಂದ್ಯಗಳನ್ನು ಲಾಹೋರ್‌ನಲ್ಲಿ(Lahore) ಆಯೋಜಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(PCB) ಐಸಿಸಿಗೆ ಸಲಹೆ ನೀಡಿದೆ.
ಟೂರ್ನಿ ನಡೆಸಲು ಎಲ್ಲ ಸಿದ್ಧತೆ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೆಚ್ಚಿನ ಪ್ರಯಾಣ ತಪ್ಪಿಸಲು ಭಾರತದ ಎಲ್ಲಾ ಪಂದ್ಯ ಗಳನ್ನು ಲಾಹೋರ್ ಕ್ರೀಡಾಂಗಣದಲ್ಲೇ ನಿಗದಿಪಡಿಸಿ ಎಂದು ಐಸಿಸಿಗೆ ತಿಳಿಸಿದೆ. ಟೂರ್ನಿಯ ಅಧಿಕೃತ ವೇಳಾ ಪಟ್ಟಿ, ಆತಿಥ್ಯ ನಗರ ಇನ್ನಷ್ಟೇ ಅಧಿಕೃತಗೊಳ್ಳಬೇಕಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೂಡ ಭಾರತ ಈ ಬಾರಿ ಪಾಕ್ನಲ್ಲಿ ಕ್ರಿಕೆಟ್ ಆಡಲಿದೆ ಎಂದು ಬಲವಾದ ಹೇಳಿಕೆಯನ್ನು ಕೂಡ ನೀಡಿದ್ದಾರೆ.
ಇದನ್ನೂ ಓದಿ IND vs PAK: ಟ್ರ್ಯಾಕ್ಟರ್ ಮಾರಿ ಭಾರತ-ಪಾಕ್ ಪಂದ್ಯ ವೀಕ್ಷಿಸಿ ಕಣ್ಣೀರು ಹಾಕಿದ ಅಭಿಮಾನಿ
2014ರಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನೆರೆಯ ರಾಷ್ಟ್ರದೊಂದಿಗೆ ಯಾವುದೇ ಸ್ನೇಹಪರ ರೀತಿಯಲ್ಲಿ ಸಂಬಂಧ ಹೊಂದಿಲ್ಲ. ಶತ್ರು ದೇಶದ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪುಲ್ವಾಮಾ ಮತ್ತು ಉರಿ ದಾಳಿಯ ನಂತರ ಎರಡೂ ದೇಶಗಳ ಸಂಬಂಧ ಹದಗೆಟ್ಟಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯು ಎನ್ಡಿಎ ಜತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದರೂ ಕೂಡ ಈ ಸರ್ಕಾರದ ವಿದೇಶಾಂಗ ನೀತಿ ಬದಲಾಗುವ ಸಾಧ್ಯತೆಗಳು ಇಲ್ಲದ ಕಾರಣ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದು ಖಚಿತವಲ್ಲ ಎಂದು ಕ್ರಿಕ್ಬಜ್ ವರದಿ ಮಾಡಿದೆ. ಆದರೆ, ಪಾಕ್ ಕ್ರಿಕೆಟ್ ಮಂಡಳಿ ಮಾತ್ರ ಭಾರತ ಕೂಡ ಪಾಕ್ನಲ್ಲಿಯೇ ಆಡಲಿದೆ ಎಂದು ಬಲವಾಗಿ ನಂಬಿದೆ.
ಕಳೆದ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಪಾಕ್ಗೆ ಹೋಗಲು ಒಪ್ಪದ ಕಾರಣ ಹೈಬ್ರೀಡ್ ಮಾದರಿಯಲ್ಲಿ ಪಾಕ್ ಮತ್ತು ಶ್ರೀಲಂಕಾದಲ್ಲಿ ಆಡಿಸಲಾಗಿತ್ತು. ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತದಲ್ಲಿ ಡಿಸೆಂಬರ್ 2012 ರಿಂದ ಜನವರಿ 2013 ರವರೆಗಿನ ದ್ವಿಪಕ್ಷೀಯ ಸರಣಿಯು ಎರಡು ರಾಷ್ಟ್ರಗಳ ನಡುವಿನ ಅಂತಿಮ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ಬಳಿಕ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತವೆ.
ಒಂದು ತಿಂಗಳ ಹಿಂದಷ್ಟೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಅವರು ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮಾತ್ರ ಭಾರತ(India Travelling To Pakistan) ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ಹೇಳಿದ್ದರು. ಎಎನ್‌ಐ ಜತೆ ಮಾತನಾಡಿದ್ದ ಶುಕ್ಲಾ, “ಚಾಂಪಿಯನ್ ಟ್ರೋಫಿಯ ಸಂದರ್ಭದಲ್ಲಿ, ಭಾರತ ಸರ್ಕಾರ ನಮಗೆ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ಭಾರತ ಸರ್ಕಾರ ನಮಗೆ ಅನುಮತಿ ನೀಡಿದಾಗ ಮಾತ್ರ ನಾವು ನಮ್ಮ ತಂಡವನ್ನು ಕಳುಹಿಸುತ್ತೇವೆ. ಹಾಗಾಗಿ ಭಾರತ ಸರ್ಕಾರದ ನಿರ್ಧಾರದ ಮೇಲೆ ತಂಡದ ಪ್ರಯಾಣದ ಭವಿಷ್ಯ ಅಡಗಿದೆ” ಎಂದು ಶುಕ್ಲಾ ಹೇಳಿದ್ದರು.