Site icon Vistara News

Darius Visser: ಒಂದೇ ಓವರ್​ನಲ್ಲಿ 39 ರನ್​ ಚಚ್ಚಿ ಯುವರಾಜ್​ ಸಿಂಗ್​ ದಾಖಲೆ ಮುರಿದ ಡೇರಿಯಸ್ ವಿಸ್ಸರ್

Darius Visser

Darius Visser: This cricketer breaks Yuvraj Singh's record, scores these many runs in an over

ಮುಂಬಯಿ: ಸಮೋವಾದ (Samoa) 28 ವರ್ಷದ ಡೇರಿಯಸ್ ವಿಸ್ಸರ್ (Darius Visser) ಟಿ20 ಕ್ರಿಕೆಟ್​ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಒಂದೇ ಓವರ್​ನಲ್ಲಿ 39 ರನ್​ ಸಿಡಿಸುವ ಮೂಲಕ ಯುವರಾಜ್​ ಸಿಂಗ್(Yuvraj Singh),​ ಕೈರನ್​ ಪೊಲಾರ್ಡ್​, ದೀಪೇಂದ್ರ ಸಿಂಗ್ ಐರಿ ಮತ್ತು ನಿಕೋಲಸ್ ಪೂರನ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಮಂಗಳವಾರ ನಡೆದ 2026ರ ಟಿ20 ವಿಶ್ವಕಪ್(ICC Men’s T20 World Cup) ಪ್ರಾದೇಶಿಕ ಅರ್ಹತಾ (2026 World Cup regional qualifier) ಸುತ್ತಿನ ವನುವಾಟು (Vanuatu) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ವಿಸ್ಸರ್‌ ಈ ದಾಖಲೆಯನ್ನು ನಿರ್ಮಿಸಿದ್ದಾರೆ. ಯುವರಾಜ್​ ಸಿಂಗ್​ ಅವರು 2007ರಲ್ಲಿ ನಡೆದಿದ್ದ ಚೊಚ್ಚಲ ಟಿ20 ವಿಶ್ವಕಪ್​ ಟೂರ್ನಿಯ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಅವರ ಓವರ್​ನಲ್ಲಿ 6 ಎಸೆತಗಳಿಗೆ 6 ಸಿಕ್ಸರ್​ ಬಾರಿಸಿ 36 ರನ್​ ಕಲೆ ಹಾಕಿದ್ದರು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 6 ಎಸೆತಗಳಿಗೆ 6 ಸಿಕ್ಸರ್​ ಸಿಡಿಸಿದ್ದ ಮೊದಲ ನಿದರ್ಶನ ಇದಾಗಿತ್ತು. ಇದಾದ ಬಳಿಕ ಹಲವು ಆಟಗಾರು ಈ ಸಾಧನೆ ಮಾಡಿದ್ದರು.

ಇದೀಗ ಡೇರಿಯಸ್ ವಿಸ್ಸರ್ ಒಂದೇ ಓವರ್​ನಲ್ಲಿ 39 ರನ್​ ಗಳಿಸುವ ಮೂಲಕ ದಿಗ್ಗಜ ಆಟಗಾರರ ದಾಖಲೆಯನ್ನು ಮುರಿದಿದ್ದಾರೆ. ಸದ್ಯ ಸಿಕ್ಸರ್​ಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಆಟಗಾರನ ಈ ಸಾಧನೆಗೆ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ Yuvraj Singh : ಅಂಗವಿಕಲರಂತೆ ರೀಲ್ಸ್​ ಮಾಡಿದ ಯುವರಾಜ್​, ಹರ್ಭಜನ್​ ಸಿಂಗ್ ವಿರುದ್ಧ ದೂರು ದಾಖಲು

ಅಪಿಯಾದ ಗಾರ್ಡನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಸಮೋವ ತಂಡ ಕೇವಲ 10 ರನ್​ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸಿಗಿಳಿದ ಡೇರಿಯಸ್ ವಿಸ್ಸರ್ ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ ಕೇವಲ 62 ಎಸೆತಗಳಲ್ಲಿ 132 ರನ್​ ಚಚ್ಚಿದರು. ಅವರ ಈ ಸ್ಫೋಟಕ ಬ್ಯಾಟಿಂಗ್ ಇನಿಂಗ್ಸ್​ ವೇಳೆ ಬರೋಬ್ಬರಿ 14 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಯಿತು.​

ಎದುರಾಳಿ ತಂಡದ ನಲಿನ್ ನಿಪಿಕೊ ಎಸೆದ 15ನೇ ಓವರ್​ನಲ್ಲಿ ಸಿಡಿದು ನಿಂತ ವಿಸ್ಸರ್ 39 ರನ್​ ಕಲೆ ಹಾಕುವ ಮೂಲಕ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಓವರ್​ನ ಮೊದಲ ಮೂರು ಎಸೆತಗಳನ್ನು ಸಿಕ್ಸರ್​ಗಟ್ಟಿದ ವಿಸ್ಸರ್, 4ನೇ ಎಸೆತವನ್ನು ಕೂಡ ಸಿಕ್ಸರ್​ಗಟ್ಟಿದ್ದರು. ಆ ಎಸೆತ ನೋಬಾಲ್​ ಆಗಿದ್ದರಿಂದ ಅದರ ಲಾಭ ಪಡೆದ ವಿಸ್ಸೆರ್​ ಮರು ಎಸೆತದಲ್ಲಿ ಮತ್ತೊಂದು ಸಿಕ್ಸರ್​ ಬಾರಿಸಿದರು. 5ನೇ ಎಸೆತದಲ್ಲಿ ಯಾವುದೇ ರನ್ ಬಾರದಿದ್ದರೂ ಅಂತಿಮ ಎಸೆತದಲ್ಲಿ ಮತ್ತೆ ಸಿಕ್ಸರ್​ ಬಾರಿಸಿದರು. ಈ ಎಸೆತ ಕೂಡ ನೋ ಬಾಲ್ ಆಗಿದ್ದರಿಂದ ಮುಂದಿನ ಎಸೆತದಲ್ಲಿ ಮತ್ತೊಂದು ಸಿಕ್ಸರ್​ ದಾಖಲಾಯಿತು. ಇದು ಕೂಡ ನೋ ಬಾಲ್​ ಆದ ಕಾರಣ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸುದರೊಂದಿಗೆ ಒಟ್ಟು 39 ರನ್​ ಕಲೆಹಾಕಿದ್ದರು. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಡೇರಿಯಸ್ ವಿಸ್ಸರ್ ಪಾಲಾಗಿದೆ.

Exit mobile version