Site icon Vistara News

Dinesh Karthik: ಟಿ20 ವಿಶ್ವಕಪ್​ ಆಡುವ ಇಂಗಿತ ವ್ಯಕ್ತಪಡಿಸಿದ ದಿನೇಶ್​ ಕಾರ್ತಿಕ್

Dinesh Karthik

ಬೆಂಗಳೂರು: ಈ ಬಾರಿಯ ಐಪಿಎಲ್‌ನಲ್ಲಿ(IPL 2024) ಪ್ರಚಂಡ ಬ್ಯಾಟಿಂಗ್‌ ಪ್ರದರ್ಶಿಸುವ ಮೂಲಕ ಸುದ್ದಿಯಾಗುತ್ತಿರುವ ಆರ್​ಸಿಬಿ ತಂಡದ ಹಿರಿಯ ಆಟಗಾರ ದಿನೇಶ್​ ಕಾರ್ತಿಕ್​(Dinesh Karthik) ಅವರಿಗೆ ಈಗಾಗಲೇ ಅನೇಕ ದಿಗ್ಗಜ ಕ್ರಿಕೆಟಿಗರು ಇದೇ ಜೂನ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ಭಾರತ ಪರ ಆಡುವ ಅವಕಾಶ ನೀಡಬೇಕೆಂದು ಹೇಳಿದ್ದರು. ಇದೀಗ ಕಾರ್ತಿಕ್​ ಅವರೇ ಸ್ವತಃ ವಿಶ್ವಕಪ್​ ಆಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಅವಕಾಶ ಸಿಕ್ಕರೆ ಶೇ.100ಕ್ಕೆ 100ರಷ್ಟು ಆಡುವೆ. ಜೀವನದ ಈ ಹಂತದಲ್ಲಿ ನಾನು ಅಂತಹದೊಂದು ಅವಕಾಶಕ್ಕಾಗಿ ಎದುರು ನೋಡುತ್ತಿರುವೆ ಎಂದು ಹೇಳಿದರು.

“ವಿದಾಯದ ಅಂಜಿನಲ್ಲಿರುವ ಕಾಲಘಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದು ಖಂಡಿತವಾಗಿಯೂ ನನ್ನ ಪಾಲಿನ ಹೆಮ್ಮೆ ಎನಿಸಲಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಆಡುವುದಕ್ಕಿಂತ ಮಿಗಿಲಾದ ಸಂಗತಿ ನನ್ನ ಬದುಕಿನಲ್ಲಿಲ್ಲ” ಎಂಬುದಾಗಿ ಕಾರ್ತಿಕ್‌ ಹೇಳಿದ್ದಾರೆ.

ಕೆಕೆಆರ್​ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ತಿಕ್​, ‘ಟೀಮ್​ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್​ ಏನೇ ನಿರ್ಧಾರ ಕೈಗೊಂಡರೂ ನಾನು ಗೌರವಿಸುತ್ತೇನೆ. ಒಂದೊಮ್ಮೆ ಟಿ20 ಆಡುವ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಶ್ರೇಷ್ಠ ಪ್ರದರ್ಶನ ನೀಡುವ ವಿಶ್ವಾಸ ನನ್ನಲ್ಲಿದೆ. ಅವಕಾಶ ಸಿಕ್ಕದಿದ್ದರೂ ಬೇಸರವಿಲ್ಲ ಎಂದರು.

ಇದನ್ನೂ ಓದಿ IPL 2024: ಇಂದು ಐಪಿಎಲ್​ನಲ್ಲಿ 2 ಪಂದ್ಯ; ಆರ್​ಸಿಬಿ-ಕೆಕೆಆರ್​ ಮೊದಲ ಮುಖಾಮುಖಿ

2022ರ ಹರಾಜಿನಲ್ಲಿ ಕಾರ್ತಿಕ್​ ಅವರು ಬರೋಬ್ಬರಿ 5.5 ಕೋಟಿ ರೂ. ಪಡೆದು ಆರ್​ಸಿಬಿ ಕ್ಯಾಂಪ್ ಸೇರಿದ್ದರು. ಆ ಆವೃತ್ತಿಯಲ್ಲಿ ಕಾರ್ತಿಕ್ 14 ಇನ್ನಿಂಗ್ಸ್ ಗಳಲ್ಲಿ 287 ರನ್ ಬಾರಿಸಿದ್ದರು. ಜತೆಗೆ ತಂಡದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದರು. ಇದೇ ಪ್ರದರ್ಶನ ಕಂಡು 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ಅಚ್ಚರಿ ಎಂಬಂತೆ ಕಾರ್ತಿಗೆ ಅವಕಾಶ ನೀಡಲಾಗಿತ್ತು. ಆದರೆ ಅಲ್ಲಿ ನಿರೀಕ್ಷಿತಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು.

250ನೇ ಐಪಿಎಲ್​ ಪಂದ್ಯವನ್ನಾಡಲು ಸಜ್ಜು


ಇಂದು ನಡೆಯುವ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ದಿನೇಶ್​ ಕಾರ್ತಿಕ್​ ಅವರು 250ನೇ ಐಪಿಎಲ್​ ಪಂದ್ಯವನ್ನಾಡಿದ ಸಾಧನೆ ಮಾಡಲಿದ್ದಾರೆ. ಈ ಸಾಧನೆ ಮಾಡಿದ ಮೂರನೇ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಲಿದ್ದಾರೆ. ಧೋನಿ ಮತ್ತು ರೋಹಿತ್​ ಮೊದಲಿಗರು. 249* ಪಂದ್ಯಗಳನ್ನು ಆಡಿರುವ ದಿನೇಶ್​ ಕಾರ್ತಿಕ್ 4742 ರನ್​ ಬಾರಿಸಿದ್ದಾರೆ. 22 ಅರ್ಧಶತಕ ಗಳಿಸಿದ್ದಾರೆ. 97 ರನ್​ ಗರಿಷ್ಠ ಮೊತ್ತವಾಗಿದೆ.

Exit mobile version