Site icon Vistara News

Hanuma Vihari: 2 ತಿಂಗಳ ಬಳಿಕ ನಿರಾಕ್ಷೇಪಣಾ ಪತ್ರ ಪಡೆದ ಹನುಮ ವಿಹಾರಿ

Hanuma Vihari

Hanuma Vihari: After two-month delay, Hanuma Vihari receives NOC from Andhra Cricket Association

ಆಂಧ್ರ ಪ್ರದೇಶ: ಟೀಮ್​ ಇಂಡಿಯಾದ ಟೆಸ್ಟ್‌ ಸ್ಪೆಷಲಿಸ್ಟ್‌ ಹನುಮ ವಿಹಾರಿ(Hanuma Vihari) ಕೊನೆಗೂ 2 ತಿಂಗಳ ಬಳಿಕ ಆಂಧ್ರ ಕ್ರಿಕೆಟ್‌ ಸಂಸ್ಥೆಯಿಂದ(Andhra Cricket Association) ನಿರಾಕ್ಷೇಪಣಾ ಪತ್ರವನ್ನು (NOC ) ಪಡೆದಿದ್ದಾರೆ. ಈ ವಿಚಾರವನ್ನು ವಿಹಾರಿ ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ.

2023-24ರ ಸಾಲಿನ ರಣಜಿ ಟ್ರೋಫಿ ಟೂರ್ನಿ ಸಂದರ್ಭದಲ್ಲಿ ನಾಯಕತ್ವದಿಂದ ಕೆಳಗಿಳಿಸಿದ ವಿಚಾರವಾಗಿ ವಿಹಾರಿ ಎಸಿಎ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ತನ್ನನ್ನು ನಿರ್ದಾಕ್ಷಿಣ್ಯವಾಗಿ ನಾಯಕತ್ವದಿಂದ ಕೆಳಗಿಳಿಸಿ ಅವಮಾನಿಸಿದೆ. ಮುಂದೆಂದೂ ನಾನು ಆಂಧ್ರ ತಂಡಕ್ಕೆ ಆಡುವುದಿಲ್ಲ ಎಂದು ಹೇಳಿದ್ದರು. ಈ ಸಂಬಂಧ ವಿಹಾರಿ ಅವರಿಗೆ ಎಸಿಎ ನೋಟಿಸ್ ನೀಡಿತ್ತು.‌

ಅವಮಾನಿಸಿದ ಕ್ರಿಕೆಟ್​ ಬೋರ್ಡ್​ ತೊರೆದು ಬೇರೆ ರಾಜ್ಯದ ಪರ ಆಡಲು ನಿರಾಕ್ಷೇಪಣಾ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಪತ್ರವನ್ನು ನೀಡಲು ಎಸಿಎ ತಡ ಮಾಡಿತ್ತು. ಇದೀಗ ಕೊನೆಗೂ 2 ತಿಂಗಳ ಬಳಿಕ ವಿಹಾರಿಗೆ ನಿರಾಕ್ಷೇಪಣಾ ಪತ್ರ ನೀಡಿದೆ(Vihari receives NOC from ACA). ಹೀಗಾಗಿ ಮುಂದಿನ ಆವೃತ್ತಿಯಲ್ಲಿ ವಿಹಾರಿ ಬೇರೆ ರಾಜ್ಯದ ಪರ ಕ್ರಿಕೆಟ್​ ಆಡಬಹುದಾಗಿದೆ.

‘ಎರಡು ತಿಂಗಳಿಂದ ನಾನು ಎನ್‌ಒಸಿ ಕೇಳುತ್ತಿದ್ದೆ. ಎಸಿಎಗೆ ನಾಲ್ಕು ಬಾರಿ ಮೇಲ್ ಮಾಡಿದ್ದೇನೆ. ಆದರೂ ನೀಡಿರಲಿಲ್ಲ. ಈಗ ರಾಜ್ಯದಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಹೀಗಾಗಿ, ತಕ್ಷಣ ಎನ್‌ಒಸಿ ನೀಡಿದ್ದಾರೆ’ ಎಂದು ವಿಹಾರಿ ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವಿಹಾರಿ ಅವರು 2024-25ರ ಋತುವಿನಲ್ಲಿ ಬಿಸಿಸಿಐಗೆ ಸಂಯೋಜಿತವಾಗಿರುವ ಯಾವುದೇ ತಂಡವನ್ನು ಪ್ರತಿನಿಧಿಸಲು ಆಂಧ್ರ ಕ್ರಿಕೆಟ್ ಸಂಸ್ಥೆಯಿಂದ ಯಾವುದೇ ಅಡೆ ತಡೆಗಳಿಲ್ಲ ಎಂದು ಎಸಿಎ ಕಾರ್ಯದರ್ಶಿ ಗೋಪಿನಾಥ್‌ ರೆಡ್ಡಿ ಎನ್‌ಒಸಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ Hanuma Vihari: ಹನುಮ ವಿಹಾರಿಗೆ ಶೋಕಾಸ್‌ ನೋಟಿಸ್‌ ನೀಡಿದ ಎಸಿಎ

ಹನುಮ ವಿಹಾರಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡಿ, ಬಂಗಾಳ ವಿರುದ್ಧದ ಮೊದಲ ಪಂದ್ಯದಲ್ಲಿ ನಾನು ತಂಡದ ನಾಯಕನಾಗಿದ್ದೆ. ಆಟದ ಸಮಯದಲ್ಲಿ ನಾನು 17 ನೇ ಆಟಗಾರನ ಮೇಲೆ ಕೂಗಾಡಿದ್ದೆ. ಅವನು ತನ್ನ ತಂದೆಗೆ (ರಾಜಕಾರಣಿಯಾಗಿದ್ದ) ದೂರು ನೀಡಿದ್ದ, ಪ್ರತಿಯಾಗಿ ಅವರ ತಂದೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಸೋಸಿಯೇಷನ್​ಗೆ ಕೇಳಿದರು. ಬಂಗಾಳ ವಿರುದ್ದದ ಪಂದ್ಯದಲ್ಲಿ ನಾವು ಗೆದ್ದರೂ, ನನ್ನ ಯಾವುದೇ ತಪ್ಪು ಇಲ್ಲದ ಹೊರತಾಗಿಯೂ ರಾಜೀನಾಮೆ ಕೊಡಲು ನನ್ನಲ್ಲಿ ಅಸೋಸಿಯೇಶನ್​ ಕೇಳಿಕೊಂಡಿತು. ನಾನು ವೈಯಕ್ತಿಕವಾಗಿ ಆ ಆಟಗಾರನಿಗೆ ಏನೂ ಹೇಳಿರಲಿಲ್ಲ. ಆದರೆ ಕಳೆದ ಏಳು ವರ್ಷಗಳಲ್ಲಿ ಐದು ಬಾರಿ ತಂಡವನ್ನು ನಾಕೌಟ್​ಗೆ ತಲುಪಿಸಿದ, ತಂಡಕ್ಕೆ ಎಲ್ಲವನ್ನೂ ಕೊಟ್ಟ ಆಟಗಾರನಿಗಿಂತ ಆ ಆಟಗಾರನೇ ಮಂಡಳಿಗೆ ಪ್ರಿಯವಾದ. ನಾನು ಮುಜುಗರ ಅನುಭವಿಸಿದೆ. ಇನ್ನೆಂದೂ ನಾನು ಆಂಧ್ರಪ್ರದೇಶದ ಪರ ಆಡಲಾರೆ ಎಂದು ಹೇಳಿದ್ದರು. ಇದೇ ವಿಚಾರವಾಗಿ ವಿಹಾರಿ ವಿರುದ್ಧ ಎಸಿಎ ನೋಟಿಸ್‌ ಜಾರಿ ಮಾಡಿತ್ತು.

ವಿಹಾರಿ ಮಾಡಿದ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಎಸಿಎ, ವಿಹಾರಿ ನಾಯಕತ್ವದ ನಿರ್ಗಮನವು ವೃತ್ತಿಪರ ಪರಿಗಣನೆಯ ಪರಿಣಾಮವಾಗಿದೆಯೇ ಹೊರತು ರಾಜಕೀಯ ಹಸ್ತಕ್ಷೇಪವಲ್ಲ, ವಿಹಾರಿ ಆಟಗಾರರನ್ನು ಬೆದರಿಸಿ ಸಹಿ ಮಾಡಿಸಿದ್ದಾರೆ ಎಂದು ಆಂಧ್ರ ಕ್ರಿಕೆಟ್ ಸಂಸ್ಥೆ ಆರೋಪ ಮಾಡಿತ್ತು. 

Exit mobile version