ಮುಂಬಯಿ: ಭಾರತ ಕ್ರಿಕೆಟ್ ತಂಡದ ಪಾಂಡ್ಯ ಸಹೋದರರಾದ ಹಾರ್ದಿಕ್(Hardik Pandya) ಮತ್ತು ಕೃನಾಲ್(Krunal Pandya) ಅವರಿಗೆ ಮಲ ಸಹೋದರನಿಂದಲೇ 4.3 ಕೋಟಿ ರೂಪಾಯಿ ವಂಚನೆ ಉಂಟಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ವೈಭವ್ ಪಾಂಡ್ಯರನ್ನು(Vaibhav Pandya) ಮುಂಬೈ ಪೊಲೀಸರು ಬಂಧಿಸಿದ್ದಾರೆ.
37 ವರ್ಷದ ವೈಭವ್ ಪಾಲುದಾರಿಕೆ ಸಂಸ್ಥೆಯಿಂದ ಸುಮಾರು 4.3 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾಗಿ ಆರೋಪಿಸಲಾಗಿದೆ. ವೈಭವ್ ವಂಚನೆಯಿಂದಾಗಿ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಮುಂಬೈನ ಆರ್ಥಿಕ ಕಚೇರಿ ವಿಭಾಗದಲ್ಲಿ ಪಾಂಡ್ಯ ಬ್ರದರ್ಸ್ ದೂರು ದಾಖಲಿಸಿದ ಬಳಿಕ ವೈಭವ್ ಅವರನ್ನು ಬಂಧಿಸಲಾಗಿದೆ.
2021ರಲ್ಲಿ ಹಾರ್ದಿಕ್, ಕೃನಾಲ್ ಮತ್ತು ವೈಭವ್ ಮೂವರು ಸೇರಿಕೊಂಡು ಕೆಲವು ಷರತ್ತುಗಳೊಂದಿಗೆ ಪಾಲಿಮರ್ ವ್ಯವಹಾರವನ್ನು ಪ್ರಾರಂಭಿಸಿದ್ದರು. ಈ ಷರತ್ತಿನ ಪ್ರಕಾರ ಹಾರ್ದಿಕ್ ಮತ್ತು ಕೃನಾಲ್ ಬಂಡವಾಳದ ಶೇಕಡ 40ರಷ್ಟು ಹೂಡಿಕೆ ಮಾಡಬೇಕಾಗಿತ್ತು. ವೈಭವ್ ಶೇಕಡ 20ರಷ್ಟು ಕೊಡುಗೆ ನೀಡಬೇಕಿತ್ತು. ದೈನಂದಿನ ಕಾರ್ಯಾಚರಣೆಗಳನ್ನು ನಿರ್ವಹಿಸಬೇಕಿತ್ತು. ಈ ಷೇರುಗಳ ಪ್ರಕಾರ ಲಾಭವನ್ನು ವಿತರಿಸಬೇಕಾಗಿತ್ತು. ಆದಾಗ್ಯೂ, ವೈಭವ್ ತನ್ನ ಪಾಲುದಾರರಿಗೆ ತಿಳಿಸದೆ ಅದೇ ವ್ಯವಹಾರದಲ್ಲಿ ಮತ್ತೊಂದು ಸಂಸ್ಥೆಯನ್ನು ಸ್ಥಾಪಿಸಿ ಪಾಲುದಾರಿಕೆ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ. ಇದರ ಪರಿಣಾಮ ವ್ಯಾಪಾರದಲ್ಲಿ 3 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ.
ವೈಭವ್ ತನ್ನ ಲಾಭದ ಪಾಲನ್ನು ಯಾರಿಗೂ ತಿಳಿಸದೆ ಶೇಕಡ 20ರಿಂದ ಶೇ33.3ರಷ್ಟು ಹೆಚ್ಚಿಸಿಕೊಂಡಿದ್ದರು. ಇದು ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅವರ ಆರ್ಥಿಕ ಹಿತಾಸಕ್ತಿಗಳ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ ಎಂದು ಆರೋಪಿಸಲಾಗಿದೆ. ಐಪಿಎಲ್ನಲ್ಲಿ ಕೃನಾಲ್ ಲಕ್ನೋ ತಂಡ ಆಟಗಾರನಾಗಿದ್ದರೆ, ಹಾರ್ದಿಕ್ ಮುಂಬೈ ತಂಡದ ನಾಯಕನಾಗಿದ್ದಾರೆ. ಮುಂಬೈ ಆಡಿದ 4 ಪಂದ್ಯಗಳಲ್ಲಿ ಕೇವಲ ಒಂದು ಮಾತ್ರ ಗೆದ್ದಿದೆ. 5ನೇ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಕಣಕ್ಕಿಳಿದಿದೆ.
ಇದನ್ನೂ ಓದಿ IPL 2024: ಸೋಲಿನ ಆಘಾತದ ಮಧ್ಯೆ ಸಂಜುಗೆ ಬಿತ್ತು 12 ಲಕ್ಷ ರೂ. ದಂಡ
ಧೋನಿಗೆ 15 ಕೋಟಿ ವಂಚಿಸಿದ ಮಾಜಿ ಬಿಸಿನೆಸ್ ಪಾರ್ಟ್ನರ್ ಬಂಧನ
ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ(MS Dhoni) ಅವರ ಮಾಜಿ ಉದ್ಯಮಿ ಮಿಹಿರ್ ದಿವಾಕರ್(Mihir Diwakar) ಅವರನ್ನು ವಂಚನೆ ಆರೋಪದ ಮೇಲೆ ಬಂಧಿಸಲಾಗಿದೆ. ರಾಂಚಿಯ ಜಿಲ್ಲಾ ನ್ಯಾಯಾಲಯದಲ್ಲಿ ಸೌಮ್ಯಾ ದಾಸ್ ಜತೆಗೆ ದಿವಾಕರ್ ವಿರುದ್ಧ ಧೋನಿ ದೂರು ದಾಖಲಿಸಿದ್ದರು. ಅರ್ಕಾ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿರುವ ದಿವಾಕರ್ ಅವರನ್ನು ಜೈಪುರ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಧೋನಿ ಹೆಸರನ್ನು ಅನಧಿಕೃತವಾಗಿ ಬಳಸಿಕೊಂಡ ಆರೋಪಕ್ಕೆ ಸಂಬಂಧಿಸಿ ಅವರನ್ನು ಬಂಧಿಸಲಾಗಿದೆ.
ಮಿಹಿರ್ ದಿವಾಕರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406, 420, 467, 468, 471 ಮತ್ತು 120 ಬಿ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಆರ್ಕಾ ಕ್ರಿಕೆಟ್ ಅಕಾಡೆಮಿ(Aarka Sports and Management Limited) 15 ಕೋಟಿ ವಂಚಿಸಿದೆ ಎಂದು ಆರೋಪಿಸಿ ಧೋನಿ ಇದೇ ವರ್ಷದ ಜನವರಿಯಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲದೆ ಕ್ರಿಮಿನಲ್ ಪ್ರಕರಣ(criminal case) ಕೂಡ ದಾಖಲಿಸಿದ್ದರು. 2017ರಲ್ಲಿ ದಿವಾಕರ್ ಅವರು ಧೋನಿಯೊಂದಿಗೆ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ದಿವಾಕರ್ ಒಪ್ಪಂದದಲ್ಲಿ ವಿವರಿಸಿರುವ ಷರತ್ತುಗಳನ್ನು ಪಾಲಿಸಲು ವಿಫಲರಾಗಿದ್ದು 15 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಧೋನಿ ದೂರಿನಲ್ಲಿ ಉಲ್ಲೇಖಿಸಿದ್ದರು.