Site icon Vistara News

ICC Player Of The Month: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಯಶಸ್ವಿ ಜೈಸ್ವಾಲ್‌

Yashasvi Jaiswal

ದುಬೈ: ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಯುವ ಆಟಗಾರ ಯಶಸ್ವಿ ಜೈಸ್ವಾಲ್‌(Yashasvi Jaiswal) ಅವರು ಐಸಿಸಿಯ ಫೆಬ್ರವರಿ ತಿಂಗಳ ಆಟಗಾರರ ಪ್ರಶಸ್ತಿ(ICC Player Of The Month) ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಜತೆ ರೇಸ್​ನಲ್ಲಿದ್ದ ನ್ಯೂಜಿಲ್ಯಾಂಡ್​ನ ಕೇನ್​ ವಿಲಿಯಮ್ಸನ್(Kane Williamson)​ ಮತ್ತು ಶ್ರೀಲಂಕಾದ ಪಾಥುಮ್ ನಿಸ್ಸಾಂಕ(Pathum Nissanka) ನಿರಾಸೆ ಅನುಭವಿಸಿದ್ದಾರೆ.

ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ತವರಿನ ಟೆಸ್ಟ್​ ಸರಣಿಯಲ್ಲಿ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರಿದ್ದ ಯಶಸ್ವಿ ಜೈಸ್ವಾಲ್‌ ಸರಣಿಯಲ್ಲಿ 2 ದ್ವಿಶತಕ ಸೇರಿದಂತೆ 712 ರನ್‌ ಬಾರಿಸಿ ಭಾರತದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಶಸ್ತಿ ಪಡೆದ ಸಂತಸದಲ್ಲಿ ಪ್ರತಿಕ್ರಿಯಿಸಿದ ಜೈಸ್ವಾಲ್​, ಐಸಿಸಿ ಪ್ರಶಸ್ತಿ ಸಿಕ್ಕದ್ದಕ್ಕೆ ಬಹಳ ಖುಷಿಯಾಗಿದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಪ್ರಶಸ್ತಿಗಳಿಗೆ ಪಾತ್ರರಾಗಬೇಕಿದೆ ಎಂದು ಹೇಳಿದರು.

ಮಹಿಳಾ ಆಟಗಾರ್ತಿಯರ ಪೈಕಿ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಅನ್ನಾಬೆಲ್‌ ಸದರ್ಲೆಂಡ್‌(Annabel Sutherland) ಅವರು ಐಸಿಸಿ ತಿಂಗಳ ಪ್ರಶಸ್ತಿಗೆ ಭಾಜನರಾದರು. ಜತೆಗೆ ಈ ಪ್ರಶಸ್ತಿ ಪಡೆದ ಆಸ್ಟ್ರೇಲಿಯಾದ 5ನೇ ಆಟಗಾರ್ತಿ ಎನಿಸಿಕೊಂಡರು. ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಾದ ಟೆಸ್ಟ್‌ ಪಂದ್ಯಗಳಲ್ಲಿ ಸದರ್ಲೆಂಡ್‌ 229 ರನ್‌ ಜತೆಗೆ 7 ವಿಕೆಟ್‌ ಕಿತ್ತು ಮಿಂಚಿದ್ದರು. ಯುಎಇಯ ಇಶಾ ಓಝಾ ಮತ್ತು ಕವಿಶಾ ಎಗೊಡೇಜ್‌ ಪ್ರಶಸ್ತಿ ರೇಸ್‌ನಲ್ಲಿದ್ದ ಉಳಿದಿಬ್ಬರು ಆಟಗಾರ್ತಿರು.

ಇದನ್ನೂ ಓದಿ WPL 2024: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ದಾಖಲೆ ಬರೆದ ಆರ್​ಸಿಬಿಯ ಎಲ್ಲಿಸ್ ಪೆರ್ರಿ

ಇಂಗ್ಲೆಂಡ್​ ಸರಣಿಯಲ್ಲಿ ಜೈಸ್ವಾಲ್​ ಬರೆದ ದಾಖಲೆಗಳ ಪಟ್ಟಿ


ಭಾರತ ಕ್ರಿಕೆಟ್​ ತಂಡದ ಭವಿಷ್ಯದ ಧ್ರುವತಾರೆ ಎಂದು ಗುರುತಿಸಲ್ಪಟ್ಟ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹಲವು ದಾಖಲೆಗಳನ್ನು ಬರೆದಿದ್ದರು. ಧರ್ಮಶಾಲಾದಲ್ಲಿ ನಡೆದ ಅಂತಿಮ ಟೆಸ್ಟ್​ನಲ್ಲಿ 28 ರನ್​ ಗಳಿಸುತ್ತಿದ್ದಂತೆ ಜೈಸ್ವಾಲ್​(22 ವರ್ಷ 70 ದಿನ) ಟೆಸ್ಟ್‌ನಲ್ಲಿ 1000 ರನ್‌ಗಳನ್ನು ಪೂರೈಸಿದ 4ನೇ ಅತ್ಯಂತ ಕಿರಿಯ ಭಾರತೀಯ ಆಟಗಾರನಾಗಿ ಮೂಡಿ ಬಂದಿದ್ದರು. ಕಡಿಮೆ ಇನಿಂಗ್ಸ್​ನಲ್ಲಿ ಸಾವಿರ ರನ್​ ಪೂರೈಸಿದ ಸಾಧಕರ ಪಟ್ಟಿಯಲ್ಲಿ ಜೈಸ್ವಾಲ್​ ಅವರು ಚೇತೇಶ್ವರ ಪೂಜಾರ ಅವರ ದಾಖಲೆಯನ್ನು ಮುರಿದಿದ್ದರು. ಪೂಜಾರ ಸಾವಿರ ರನ್​ ಗಳಿಸಲು 18 ಇನಿಂಗ್ಸ್ ​ತೆಗೆದುಕೊಂಡರೆ, ಜೈಸ್ವಾಲ್​ ಕೇವಲ 16 ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದರು. ವಿನೋದ್​ ಕಾಂಬ್ಲಿ ಮೊದಲಿಗ. ಅವರು 14 ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದಾರೆ.​

ಸಚಿನ್ ಸಿಕ್ಸರ್​​ ದಾಖಲೆ ಪತನ


ಜೈಸ್ವಾಲ್​ ಅವರು ಶೋಯೆಬ್ ಬಶೀರ್ ಅವರ ಓವರ್​ನಲ್ಲಿ ಮೂರು ಸಿಕ್ಸರ್​ ಬಾರಿಸುತ್ತಿದ್ದಂತೆ ಕ್ರಿಕೆಟ್​ ದೇವರು, ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರ ಸಿಕ್ಸರ್​ ದಾಖಲೆಯೊಂದು ಪತನಗೊಂಡಿತ್ತು. ತಂಡವೊಂದರ ವಿರುದ್ಧ ಅತಿ ಹೆಚ್ಚು ಟೆಸ್ಟ್​ ಸಿಕ್ಸರ್​ ಬಾರಿಸಿದ ಭಾರತೀಯ ದಾಖಲೆ ಇದುವರೆಗೆ ಸಚಿನ್​ ಹೆಸರಿನಲ್ಲಿತ್ತು. ಸಚಿನ್​ ಅವರು ಆಸ್ಟ್ರೇಲಿಯಾ ವಿರುದ್ಧ 74 ಇನಿಂಗ್ಸ್​ ಆಡಿ ​25 ಸಿಕ್ಸರ್​ ಬಾರಿಸಿದ್ದರು. ಆದರೆ ಜೈಸ್ವಾಲ್​ ಕೇವಲ 9 ಇನಿಂಗ್ಸ್​ ಮೂಲಕ ಇಂಗ್ಲೆಂಡ್​ ವಿರುದ್ಧ 26* ಸಿಕ್ಸರ್​ ಬಾರಿಸಿ ಸಚಿನ್​ ದಾಖಲೆಯನ್ನು ಮುರಿದಿದ್ದಾರೆ. ರೋಹಿತ್​ ಶರ್ಮ ಅವರು 22* ಸಿಕ್ಸರ್​ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಒಂದೊಮ್ಮೆ ರೋಹಿತ್​ ನಾಲ್ಕು ಸಿಕ್ಸರ್​ ಬಾರಿಸಿದರೆ ಸಚಿನ್​ ಹಿಂದಿಕ್ಕಿ ದ್ವಿತೀಯ ಸ್ಥಾನಕೇರಲಿದ್ದಾರೆ.

Exit mobile version