ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah) ಅವರು ಜೂನ್ ತಿಂಗಳ ಐಸಿಸಿ ಆಟಗಾರ(ICC Player Of The Month Award) ಗೌರವಕ್ಕೆ ಭಾಜನರಾಗಿದ್ದಾರೆ. ಇದೇ ವೇಳೆ ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana) ಐಸಿಸಿ ಮಹಿಳಾ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಜೂನ್ ತಿಂಗಳ ಐಸಿಸಿ ಆಟಗಾರ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಜತೆ ರೋಹಿತ್ ಶರ್ಮಾ ಹಾಗೂ ಅಫಘಾನಿಸ್ತಾನದ ಆರಂಭಿಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ ಕೂಡ ರೇಸ್ನಲ್ಲಿದ್ದರು. ಆದರೆ ಇವರನ್ನು ಬುಮ್ರಾ ಹಿಂದಿಕ್ಕಿ ಪ್ರಶಸ್ತಿ ಗೆದ್ದಿದ್ದಾರೆ.
30 ವರ್ಷದ ಬುಮ್ರಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ 8.26ರ ಸರಾಸರಿಯಲ್ಲಿ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದ್ದರು. ಅಲ್ಲದೆ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಕೂಡ ತಮ್ಮದಾಗಿಸಿಕೊಂಡಿದ್ದರು. ಐರ್ಲೆಂಡ್ (3/6), ಪಾಕಿಸ್ತಾನ (3/14), ಇಂಗ್ಲೆಂಡ್ (2/12), ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ (2/18) ವಿಕೆಟ್ ಕಿತ್ತಿದ್ದರು. ಫೈನಲ್ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರದೇ ಹೋಗಿದ್ದರೆ ಭಾರತ ಕಪ್ ಗೆಲ್ಲುವುದು ಕೂಡ ಅಸಾಧ್ಯ ಎನ್ನುವಂತಿತ್ತು. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಬುಮ್ರಾ ಬೆನ್ನು ನೋವಿನ ಕಾರಣದಿಂದ ಆಡಿರಲಿಲ್ಲ.
‘ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತ ತಂಡ ಟ್ರೋಫಿ ಗೆಲ್ಲಲು ಕೊಡುಗೆ ನೀಡಲು ಸಾಧ್ಯವಾಗಿರುವುದು ನಿಜಕ್ಕೂ ವಿಶೇಷವೆನಿಸಿದೆ. ಈ ನೆನಪುಗಳು ಶಾಶ್ವತವಾಗಿರುತ್ತವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ Jasprit Bumrah: ಟಿ20 ನಿವೃತ್ತಿ ಬಗ್ಗೆ ಸ್ಪಷ್ಟನೆ ಕೊಟ್ಟ ಜಸ್ಪ್ರೀತ್ ಬುಮ್ರಾ
ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್ 29ರಂದು ನಡೆದಿದ್ದ ಟಿ20 ವಿಶ್ವಕಪ್ ಫೈನಲ್(T20 World Cup 2024) ಪಂದ್ಯದಲ್ಲಿ ಭಾರತ ತಂಡ(Team India) ದಕ್ಷಿಣ ಆಫ್ರಿಕಾ(South Africa vs India) ವಿರುದ್ಧ 7 ರನ್ಗಳ ಸಾಧಿಸುವ ಮೂಲಕ 13 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರವೊಂದನ್ನು ನೀಗಿಸಿತ್ತು.
ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಸತತ 2 ಶತಕ ಸೇರಿ ಅರ್ಧಶತಕ ಬಾರಿಸಿ ಮಿಂಚಿದ ಸ್ಮೃತಿ ಮಂಧಾನ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಸ್ಮೃತಿ ಕ್ರಮವಾಗಿ 113, 136 ಹಾಗೂ 90 ರನ್ ಬಾರಿಸಿದ್ದರು. ಟೆಸ್ಟ್ನಲ್ಲಿಯೂ ಶತಕ ಬಾರಿಸಿ ಸಂಭ್ರಮಿಸಿದ್ದರು. ಮಂಧಾನ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ಗಳನ್ನು ಪೂರ್ತಿಗೊಳಿಸಿದ ಮೈಲುಗಲ್ಲು ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ್ತಿ ಎನ್ನುವ ಹಿರಿಗೆಮೆಯೂ ಅವರದ್ದಾಗಿದೆ.