Site icon Vistara News

ICC Women’s T20 World Cup: ಯುಎಇಗೆ ಸ್ಥಳಾಂತರಗೊಂಡ ಮಹಿಳಾ ಟಿ20 ವಿಶ್ವಕಪ್

ICC Women’s T20 World Cup

ICC Women’s T20 World Cup: New venue confirmed for ICC Women’s T20 World Cup 2024

ದುಬಾೖ: ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯ ದಂಗೆಯಿಂದಾಗಿ ಮಹಿಳಾ ಟಿ20 ವಿಶ್ವಕಪ್‌ ಪಂದ್ಯಾವಳಿಯ(ICC Women’s T20 World Cup) ಆತಿಥ್ಯ ತೂಗುಯ್ನಾಲೆಯಲ್ಲಿ ಸಿಲುಕಿತ್ತು. ಇದೇ ಕಾರಣದಿಂದ ಐಸಿಸಿ, ಟೂರ್ನಿ ನಡೆಸಲು ಪರ್ಯಾಯ ತಾಣವೊಂದರ ಹುಡುಕಾಟದಲ್ಲಿತ್ತು. ಇದೀಗ ಅಂತಿಮವಾಗಿ ಯುಎಇ(UAE )ಯನ್ನು ಆಯ್ಕೆ ಮಾಡಲಾಗಿದೆ. ಈ ವಿಚಾರವನ್ನು ಐಸಿಸಿ ಮಂಗಳವಾರ ಅಧಿಕೃತ ಪ್ರಕಟನೆ ಮೂಲಕ ತಿಳಿಸಿದೆ.

ಪಂದ್ಯಾವಳಿಯು ಯುಎಇಯ ಎರಡು ಸ್ಥಳಗಳಾದ ದುಬೈ ಮತ್ತು ಶಾರ್ಜಾದಲ್ಲಿ ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿದೆ. “ಬಾಂಗ್ಲಾದೇಶ ಮಹಿಳಾ ಟಿ20 ವಿಶ್ವಕಪ್ ಆಯೋಜಿಸದಿರುವುದು ನಾಚಿಕೆಗೇಡಿನ ಸಂಗತಿ” ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲ್ಲಾರ್ಡಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜತೆಗೆ ಆತಿಥ್ಯ ವಹಿಸಿದ್ದಕ್ಕಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಧನ್ಯವಾದ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ಸೇನಾ ಮುಖ್ಯಸ್ಥ ಜನರಲ್‌ ವಕಾರ್‌ ಜಮಾನ್‌ ಅವರಿಗೆ ಪತ್ರ ಬರೆದು, ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನು ನಡೆಸಿಕೊಡಲು ಸಹಾಯ ಮಾಡಬೇಕು ಎಂದು ಕೋರಿತ್ತು. ಆದರೆ ಸದ್ಯಕ್ಕೆ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸುವಂತೆ ಕಾಣುತ್ತಿಲ್ಲ ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ಟೂರ್ನಿಯನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿತ್ತು. ಹೀಗಾಗಿ ಐಸಿಸಿ ಯುಎಇಗೆ ಆತಿಥ್ಯ ನೀಡಿದೆ.

ಇದನ್ನೂ ಓದಿ Scott Boland: ಬಾರ್ಡರ್-ಗವಾಸ್ಕರ್ ಟ್ರೋಫಿ ಆರಂಭಕ್ಕೂ ಮುನ್ನವೇ ಕೊಹ್ಲಿಗೆ ಎಚ್ಚರಿಕೆ ನೀಡಿದ ಆಸೀಸ್​ ವೇಗಿ

ಮಹಿಳಾ ಟಿ20 ವಿಶ್ವಕಪ್‌ ಆಯೋಜನೆಗೆ ಐಸಿಸಿ ನಮ್ಮನ್ನು ಸಂಪರ್ಕಿಸಿದರೆ ನಾನು ಇದನ್ನು ನಿರಾಕರಿಸುತ್ತೇನೆ ಎಂದು ಕೆಲ ದಿನಗಳ ಹಿಂದೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಹೇಳಿಕೆ ನೀಡಿದ್ದರು. ಮುಂದಿನ ವರ್ಷ ನಾವು ಮಹಿಳಾ ಏಕದಿನ ವಿಶ್ವಕಪ್‌ ಆಯೋಜನೆ ಮಾಡುತ್ತಿದ್ದೇವೆ. ಎರಡು ವಿಶ್ವಕಪ್‌ ಕೂಟಗಳನ್ನೂ ಭಾರತ ನಡೆಸುತ್ತಿದೆ ಎಂಬ ಅಭಿಪ್ರಾಯ ಮೂಡಲು ಬಿಡುವುದಿಲ್ಲ ಎಂದು ಹೇಳಿದ್ದರು.

ಶೇಕ್‌ ಹಸೀನಾ ಅವರು ರಾಜೀನಾಮೆ ನೀಡಿ ಪಲಾಯನ ಮಾಡಿದ ಬಳಿಕ ನಡೆದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮನೆಗಳು, ವ್ಯವಹಾರಗಳು ಮತ್ತು ದೇವಾಲಯಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರದಲ್ಲಿ ಶಾಲಾ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ಕನಿಷ್ಠ 45 ಜನರು ಗಾಯಗೊಂಡಿದ್ದಾರೆ. ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯ ಸುಮಾರು 8 ಪ್ರತಿಶತ ಹಿಂದೂಗಳಿದ್ದಾರೆ. ಇವರು ಸಾಂಪ್ರದಾಯಿಕವಾಗಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು. ಹೀಗಾಗಿ ಇವರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತದೆ ಎನ್ನಲಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಅರ್ಥ ಶಾಸ್ತ್ರಜ್ಞ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ನೇಮಿಸಲಾಯಿತು. ಸಂವಿಧಾನದ ಅಡಿಯಲ್ಲಿ, 90 ದಿನಗಳಲ್ಲಿ ಚುನಾವಣೆಯನ್ನು ನಡೆಸಬೇಕಾಗಿದೆ. ಆದರೆ ಯೂನಸ್ ಹಾಗೂ ಮಿಲಿಟರಿ ಮತ್ತು ಅಧ್ಯಕ್ಷರು, ಚುನಾವಣೆಗಳು ಯಾವಾಗ ನಡೆಯುತ್ತವೆ ಎಂಬುದರ ಕುರಿತು ಪ್ರತಿಕ್ರಿಯಿಸಿಲ್ಲ.

Exit mobile version