ಧರ್ಮಶಾಲಾ: ಇಲ್ಲಿ ನಡೆಯುವ ಇಂಗ್ಲೆಂಡ್(IND vs ENG 5th Test) ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ಅವರು ಹಲವು ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಇದರಲ್ಲಿ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ(Virat Kohli) ಮತ್ತು ದಿಗ್ಗಜ ಆಟಗಾರ ಸುನೀಲ್ ಗವಾಸ್ಕರ್(Sunil Gavaskar) ದಾಖಲೆಯೂ ಕೂಡ ಒಳಗೊಂಡಿದೆ. ಮಾರ್ಚ್ 7ರಿಂದ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಭಾರತದ ಭವಿಷ್ಯದ ಕ್ರಿಕೆಟ್ ತಾರೆ ಎಂದು ಗುರುತಿಸಲ್ಪಟ್ಟಿರುವ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಈಗಾಗಲೇ ಆಡಿದ 4 ಪಂದ್ಯಗಳಲ್ಲಿ 2 ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಅಂತಿಮ ಟೆಸ್ಟ್ ಪಂದ್ಯದಲ್ಲಿ 120 ರನ್ ಬಾರಿಸಿದರೆ ಗವಾಸ್ಕರ್ ಅವರ ಸಾರ್ವಕಾಲಿಕ ದಾಖಲೆಯೊಂದು ಪತನಗೊಳ್ಳಲಿದೆ. ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ದಾಖಲೆ ಸುನೀಲ್ ಗವಾಸ್ಕರ್ ಹೆಸರಿನಲ್ಲಿದೆ. ಗವಾಸ್ಕರ್ ಅವರು 1970ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 774 ರನ್ ಬಾರಿಸಿದ್ದರು. ಇದು ಸದ್ಯ ದಾಖಲೆಯಾಗಿಯೇ ಉಳಿದಿದೆ. ಈ ದಾಖಲೆಯನ್ನು ಮುರಿಯಲು ಜೈಸ್ವಾಲ್ಗೆ ಸುವರ್ಣಾವಕಾಶವಿದೆ.
ಗವಾಸ್ಕರ್ ಮಾತ್ರವಲ್ಲದೆ ವಿರಾಟ್ ಕೊಹ್ಲಿಯ ದಾಖಲೆಯೂ ಕೂಡ ಪತನಗೊಳ್ಳಲಿದೆ. ವಿರಾಟ್ ಕೊಹ್ಲಿ 2014ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 692 ರನ್ ಬಾರಿಸಿದ್ದರು. ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಅವರಿಗೆ 2ನೇ ಸ್ಥಾನ. ಜೈಸ್ವಾಲ್ 38 ರನ್ ಬಾರಿಸಿದರೆ ಕೊಹ್ಲಿಯ ದಾಖಲೆ ಪತನಗೊಳ್ಳಲಿದೆ. ಸದ್ಯ ಜೈಸ್ವಾಲ್ ನಾಲ್ಕು ಟೆಸ್ಟ್ ಪಂದ್ಯ ಆಡಿ 655*ರನ್ ಬಾರಿಸಿದ್ದಾರೆ.
ಇದನ್ನೂ ಓದಿ IND vs ENG 5th Test: ಕೊಹ್ಲಿ ಟೆಸ್ಟ್ ಆಡದಿರುವುದು ನಾಚಿಕೆಗೇಡಿನ ಸಂಗತಿ; ಆ್ಯಂಡರ್ಸನ್
ಐಸಿಸಿ ಕಳೆದ ವಾರ ಪ್ರಕಟಿಸಿದ ನೂತನ ಟೆಸ್ಟ್ ಬ್ಯಾಟಿಂಗ್(ICC Test Rankings) ಶ್ರೇಯಾಂಕದಲ್ಲಿ ಜೈಸ್ವಾಲ್ ಮತ್ತೆ ಮೂರು ಸ್ಥಾನಗಳ ಜಿಗಿತ ಕಂಡು 12ನೇ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ ಅವರು 14 ಸ್ಥಾನಗಳ ಪ್ರಗತಿ ಸಾಧಿಸಿ 15ನೇ ಸ್ಥಾನ ಅಲಂಕರಿಸಿದ್ದರು. ಸದ್ಯ ಅವರು 727 ರೇಟಿಂಗ್ ಅಂಕದೊಂದಿಗೆ 12ನೇ ಸ್ಥಾನ ಪಡೆದಿದ್ದಾರೆ. ಅಂತಿಮ ಟೆಸ್ಟ್ನಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರೆ ಅಗ್ರ 10ರೊಳಗೆ ಸ್ಥಾನ ಪಡೆಯುವ ಅವಕಾಶವಿದೆ.
ಧರ್ಮಾಶಾಲಾ ತಲುಪಿದ ಇತ್ತಂಡಗಳು
ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಉಭಯ ತಂಡಗಳು ಕೂಡ ಭಾನುವಾರ ಧರ್ಮಶಾಲಾ ತಲುಪಿದೆ. ಇಲ್ಲಿ ನಡೆಯುತ್ತಿರುವ 2 ಟೆಸ್ಟ್ ಪಂದ್ಯ ಇದಾಗಿದೆ. ಇಲ್ಲಿ ಮೊದಲ ಟೆಸ್ಟ್ ನಡೆದದ್ದು 2017ರಲ್ಲಿ. ಭಾರತ-ಆಸ್ಟೇಲಿಯಾ ನಡುವೆ. ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿರುವ ಈ ಸ್ಟೇಡಿಯಂ ಪ್ರಕೃತಿಗೆ ತೆರೆದುಕೊಂಡಿರುವುದರಿಂದ ಇಲ್ಲಿ ಸದಾ ಗಾಳಿ ಬೀಸುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಇದು ಪೇಸ್ ಬೌಲಿಂಗ್ ಸ್ವರ್ಗವೆನಿಸಿದೆ.
ಉಭಯ ತಂಡಗಳ ಆಟಗಾರರು ಧರ್ಮಶಾಲಾ ತಲುಪಿದರೂ ಕೂಡ ಒಂದು ದಿನದ ವಿಶ್ರಾಂತಿ ಪಡೆದು ಸೋಮವಾರದಿಂದ ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಭಾರತ ತಂಡದ ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ಈ ಪಂದ್ಯ 100ನೇ ಟೆಸ್ಟ್ ಪಂದ್ಯವಾದ್ದರಿಂದ ಅವರ ಪಾಲಿಗೆ ಸ್ಮರಣೀಯ ಪಂದ್ಯವಾಗಲಿದೆ. ಈಗಾಗಲೇ ಅವರು 500 ವಿಕೆಟ್ಗಳ ಕ್ಲಬ್ಗೆ ಸೇರ್ಪಡೆಗೊಂಡಿದ್ದಾರೆ.