Site icon Vistara News

IND vs ENG: ಪಿಚ್‌ ಯಾವುದೇ ಆಗಿರಲಿ, ನಮ್ಮ ತಂಡಕ್ಕೆ ಗೆಲ್ಲುವ ಸಾಮರ್ಥ್ಯವಿದೆ ಎಂದ ರೋಹಿತ್​

Rohit Sharma press conference

ರಾಜ್​ಕೋಟ್​: ಇಂಗ್ಲೆಂಡ್​(IND vs ENG) ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಗೆದ್ದು ಸರಣಿಯಲ್ಲಿ ಭಾರತ 2-1 ಮುನ್ನಡೆ ಕಾಯ್ದುಕೊಂಡಿದೆ. ಮೂರನೇ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್​ ಶರ್ಮ(Rohit Sharma), ಪಿಚ್‌ ಯಾವುದೇ ಆಗಿರಲಿ, ನಮ್ಮ ತಂಡಕ್ಕೆ ಗೆಲ್ಲುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌, ‘ಸ್ಪಿನ್‌ ಸ್ನೇಹಿ ಪಿಚ್‌ ಸೇರಿ ಯಾವುದೇ ಪಿಚ್‌ಗಳಲ್ಲೂ ನಮ್ಮ ತಂಡ ಗೆಲ್ಲಲಿದೆ. ಹಲವು ವರ್ಷಗಳಿಂದ ನಾವು ಎದುರಾದ ಸವಾಲುಗಳನ್ನು ಮೆಟ್ಟಿನಿಂತು ಗೆದ್ದಿದ್ದೇವೆ. ಮುಂದೆಯೂ ಗೆಲ್ಲುತ್ತೇವೆ’ ಎಂದು ಹೇಳಿದರು. ಇದೇ ವೇಳೆ ನಾವು ಯಾವುದೇ ಕ್ರೀಡಾಂಗಣದ ಪಿಚ್‌ ಕ್ಯುರೇಟರ್​ಗಳ ಬಳಿ ಪಿಚ್‌ ಬಗ್ಗೆ ಚರ್ಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಂದ್ಯದ ಗೆಲುವಿನ ಶ್ರೇಯವನ್ನು ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ರವೀಂದ್ರ ಜಡೇಜಾಗೆ (Ravindra Jadeja) ನೀಡಿದರು. ಉಭಯ ಆಟಗಾರರ ಪ್ರದರ್ಶನ ಉತ್ತಮವಾಗಿತ್ತು ಎಂದು ರೋಹಿತ್ ಹೇಳಿದರು. ಪದಾರ್ಪಣೆ ಪಂದ್ಯವಾಡಿದ ಸರ್ಫರಾಜ್​ ಖಾನ್​ ಮತ್ತು ಜುರೆಲ್​ ಅವರ ಕೊಡುಗೆಯನ್ನು ಕೂಡ ರೋಹಿತ್​ ಕೊಂಡಾಡಿದರು. ಪ್ರಮುಖ ಅನುಭವಿ ಆಟಗಾರ ಅನುಪಸ್ಥಿತಿಯಲ್ಲಿಯೂ ಈ ಪ್ರದರ್ಶನ ಮೂಡಿಬಂದದ್ದು ನಿಜ್ಜಕೂ ತಂಡ ಆತ್ಮವಿಶ್ವಾಸ ಹೆಚ್ಚಿಸಿದ್ದು ಉಳಿದಿರುವ 2 ಪಂದ್ಯಗಳಲ್ಲಿಯೂ ಯಾವುದೇ ಭಯವಿಲ್ಲದೆ ಆಡಬಹುದು ಎಂದು ಅವರು ಹೇಳಿದರು.

ರೋಹಿತ್​ ಶರ್ಮ ಅವರು ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಶತಕ ಬಾರಿಸಿ ಮಿಂಚಿದ್ದರು. 33ರನ್​ಗೆ ಮೂರು ವಿಕೆಟ್​ ಕುಸಿದಿದ್ದ ವೇಳೆ ರವೀಂದ್ರ ಜಡೇಜಾ ಜತೆಗೂಡಿ ಉತ್ತಮ ಇನಿಂಗ್ಸ್​ ಕಟ್ಟುವ ಮೂಲಕ ತಂಡವನ್ನು ಆಘಾತದಿಂದ ಪಾರು ಮಾಡಿದ್ದರು. 14 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿ 131 ರನ್​ ಬಾರಿಸಿದ್ದರು. ದ್ವಿತೀಯ ಇನಿಂಗ್ಸ್​ನಲ್ಲಿ 19 ರನ್​ಗೆ ವಿಕೆಟ್​ ಒಪ್ಪಿಸಿದ್ದರು.

ಇದನ್ನೂ ಓದಿ Ravindra Jadeja: ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಪಿಸಿದ್ದು ಪತ್ನಿಗೋ, ತಂದೆಗೋ?

ಪಂದ್ಯದ ನಾಲ್ಕನೇ ದಿನವಾದ ಭಾನುವಾರ 2 ವಿಕೆಟ್ ನಷ್ಟಕ್ಕೆ 196 ಗಳಿಸಿದ್ದಲ್ಲಿಂದ ಬ್ಯಾಟಿಂಗ್​ ಮುಂದುವರಿಸಿದ ಭಾರತ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(214*) ಅವರ ಎರಡನೇ ದ್ವಿಶತಕ ಹಾಗೂ ಶುಭಮನ್ ಗಿಲ್(91) ಮತ್ತು ಸರ್ಫರಾಜ್ ಖಾನ್‌ (68*) ಅವರ ಅರ್ಧಶತಕದ ನೆರವಿನಿಂದ ದ್ವಿತೀಯ ಇನಿಂಗ್ಸ್​ನಲ್ಲಿ 4 ವಿಕೆಟ್​ಗೆ 430 ರನ್​ ಬಾರಿಸಿ ಡಿಕ್ಲೇರ್‌ ಮಾಡಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್​ ನಾಟಕೀಯ ಕುಸಿತ ಕಂಡು 122 ರನ್​ಗೆ ಸರ್ವಪತನ ಕಂಡಿತು. ಸರಣಿಯ ನಾಲ್ಕನೇ ಪಂದ್ಯ ಫೆ.23ರಿಂದ ರಾಂಚಿಯಲ್ಲಿ ಆರಂಭಗೊಳ್ಳಲಿದೆ.

Exit mobile version