Site icon Vistara News

IND vs ENG: ಶತಕ ಬಾರಿಸುವ ನಿರೀಕ್ಷೆಯಲ್ಲಿ ಯಶಸ್ವಿ ಜೈಸ್ವಾಲ್​

Yashasvi Jaiswal gave India a bright start

ಹೈದರಾಬಾದ್​: ಇಂಗ್ಲೆಂಡ್ ವಿರುದ್ಧದ (IND vs ENG) ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal)​ ಶತಕ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ. ಜತೆಗೆ ಭಾರತ ಕೂಡ ಬೃಹತ್​ ಮೊತ್ತ ದಾಖಲಿಸಿ​ ಇನಿಂಗ್ಸ್​ ಲೀಡ್​ ಪಡೆಯುವ ಸಾಧ್ಯತೆ ಇದೆ.

ಮೊದಲ ದಿನದಾಟದಲ್ಲಿ ಭಾರತ 1 ವಿಕೆಟ್​ಗೆ 119 ರನ್ ಬಾರಿಸಿತ್ತು. ಇಂದು 127ರನ್​ಗಳ ಹಿನ್ನಡೆಯಿಂದ ಬ್ಯಾಟಿಂಗ್​ ಆರಂಭಿಸಲಿದೆ. ಸದ್ಯ ಜೈಸ್ವಾಲ್​ 76 ಮತ್ತು ಶುಭಮನ್​ ಗಿಲ್​ 14ರನ್ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಜೈಸ್ವಾಲ್​ಗೆ ಶತಕ ಬಾರಿಸಲು ಇನ್ನು ಕೇವಲ 24 ರನ್ ಬೇಕಿದೆ. ಶತಕ ಬಾರಿಸಿದರೆ ಇದು ಅವರ 2ನೇ ಟೆಸ್ಟ್​ ಶತಕ ಹಾಗೂ ಭಾರತದಲ್ಲಿ ಮೊದಲ ಶತಕವಾಗಲಿದೆ. ಮೊದಲ ಶತಕವನ್ನು ಅವರು ವಿಂಡೀಸ್​ನಲ್ಲಿ ಬಾರಿಸಿದ್ದರು. ಅದು ಅವರ ಚೊಚ್ಚಲ ಪಂದ್ಯ ಕೂಡ ಆಗಿತ್ತು.

ಇಲ್ಲಿನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ(Rajiv Gandhi International Stadium) ಗುರುವಾರ ಆರಂಭಗೊಂಡ ಈ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಇಂಗ್ಲೆಂಡ್ ಉತ್ತಮ ಆರಂಭ ಪಡೆದರೂ ಕೂಡ ಆ ಬಳಿಕ ನಾಟಕೀಯ ಕುಸಿತ ಕಂಡು 64.3 ಓವರ್​ಗಳಲ್ಲಿ 246ರನ್​ ಗಳಿಸಿ ಆಲೌಟ್​ ಆಯಿತು.

ಬ್ಯಾಟಿಂಗ್​ ಇನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ಗೆ ಜಾಕ್‌ ಕ್ರಾಲಿ(20) ಮತ್ತು ಬೆನ್‌ ಡಕೆಟ್‌(35) ಉತ್ತಮ ಆರಂಭ ಒದಗಿಸಿದರು. ಇನ್ನೇನು ಅಪಾಯಕಾರಿಯಾಗುವ ಹಂತದಲ್ಲಿಯೇ ಇವರ ಬ್ಯಾಟಿಂಗ್​ ಅಬ್ಬರಕ್ಕೆ ಅನುಭವಿ ಅಶ್ವಿನ್​ ಬ್ರೇಕ್​ ಹಾಕಿದರು. ಉಭಯ ಆಟಗಾರರ ವಿಕೆಟ್​ ಕಿತ್ತು ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಬಳಿಕ ಬಂದ ಓಲಿ ಪೋಪ್​ಗೆ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಿಕೊಳ್ಳಲು ಜಡೇಜಾ ಅನುವು ನೀಡಲಿಲ್ಲ. 1 ರನ್​ಗೆ ಸೀಮಿತಗೊಳಿಸಿ ಅವರನ್ನು ಪೆವಿಲಿಯನ್​ಗೆ ಅಟ್ಟಿದರು. ಇಂಗ್ಲೆಂಡ್​ 60 ರನ್​ಗೆ 3 ವಿಕೆಟ್​ ಕಳೆದುಕೊಂಡಿತು.

ಇದನ್ನೂ ಓದಿ IND vs ENG: ಟೆಸ್ಟ್​ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಜಡೇಜಾ-ಅಶ್ವಿನ್ ಜೋಡಿ

ನಾಲ್ಕನೇ ವಿಕೆಟ್​ಗೆ ಜತೆಯಾದ ಜಾನಿ ಬೇರ್​ಸ್ಟೊ ಮತ್ತು ಅನುಭವಿ ಜೋ ರೂಟ್​ ಸೇರಿಕೊಂಡು ಸಣ್ಣ ಹೋರಾಟವೊಂದನ್ನು ಜಾರಿಯಲ್ಲಿರಿಸಿ ರನ್​ ಒಟ್ಟುಗೂಡಿಸಲಾರಂಭಿಸಿದರು. ಇನ್ನೇನು ರೂಟ್​ ಕ್ರೀಸ್​ನಲ್ಲಿ ನೆಲೆಯಾಗುತ್ತಾರೆ ಎನ್ನುವಷ್ಟರಲ್ಲಿ ಜಡೇಜಾ ಇವರಿಗೆ ಪೆವಿಲಿಯನ್​ ದಾರಿ ತೋರಿಸಿದರು. ರೂಟ್​ 29 ರನ್​ ಬಾರಿಸಿದರು. ಬೇರ್​ ಸ್ಟೋ 37 ರನ್​ ಗಳಿಸಿ ಅಕ್ಷರ್​ ಪಟೇಲ್​ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆದರು.

ಸ್ಟೋಕ್ಸ್​ ಏಕಾಂಗಿ ಹೋರಾಟ


ಕುಸಿದ ಇಂಗ್ಲೆಂಡ್​ ತಂಡಕ್ಕೆ ಆಸರೆಯಾದದ್ದು ನಾಯಕ ಬೆನ್​ ಸ್ಟೋಕ್ಸ್​. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಳಿದ ಅವರು ಭಾರತದ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ಬಾರಿಸಿದರು. ಕೊನೆಯ ತನಕ ಬ್ಯಾಟಿಂಗ್​ ನಡೆಸಿದ ಅವರು 70 ರನ್​ ಗಳಿಸಿ ಬುಮ್ರಾ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆದರು. ಇವರ ವಿಕೆಟ್​ ಪತನದೊಂದಿಗೆ ಇಂಗ್ಲೆಂಡ್​ ಬ್ಯಾಟಿಂಗ್​ ಇನಿಂಗ್ಸ್​ ಕೂಡ ಅಂತ್ಯಗೊಂಡಿತು. ಸ್ಟೋಕ್ಸ್​ 88 ಎಸೆತ ಎದುರಿಸಿ 6 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 70 ರನ್​ ಬಾರಿಸಿದರು. ಭಾರತ ಪರ ಜಡೇಜಾ ಮತ್ತು ಅಶ್ವಿನ್​ ತಲಾ ಮೂರು ವಿಕೆಟ್​ ಉರುಳಿಸಿದರು.

Exit mobile version