ನ್ಯೂಯಾರ್ಕ್: ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿರುವ ಜೂನ್ 9ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಟಿ20 ವಿಶ್ವಕಪ್ನ(T20 World Cup 2024) ಹೈವೋಲ್ಟೇಜ್ ಪಂದ್ಯಕ್ಕೆ ಈ ಬಾರಿ ಪ್ರೇಕ್ಷಕರು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಇನ್ನೂ ಮಾರಾಟವಾಗಿಲ್ಲ. ಈ ಪಂದ್ಯದ ಟಿಕೆಟ್‌ಗಳು ಇನ್ನೂ ಐಸಿಸಿ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಇನ್ನೂ ಕೂಡ ಮಾರಾಟವಾಗದಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.
ಭಾರತ ಮತ್ತು ಪಾಕ್ ಪಂದ್ಯದ ಟಿಕೆಟ್ ಸಿಗುವುದೇ ಒಂದು ಅದೃಷ್ಟ. ಮ್ಯಾಚ್ನ ಟಿಕೆಟ್‌ಗಳು ಘೋಷಣೆಯಾದ ಕ್ಷಣಾರ್ಧದಲ್ಲೇ ಮಾರಾಟವಾಗುತ್ತಿದ್ದವು. ಆದರೆ ಈ ಬಾರಿ ಯಾರಿಗೂ ಕೂಡ ಟಿಕೆಟ್ ಕೊಳ್ಳಲು ಆಸಕ್ತಿಯೇ ಇಲ್ಲದಂತಾಗಿದೆ. ಇದಕ್ಕೆ ಕಾರಣ ಟಿಕೆಟ್ ಬೆಲೆ ದುಬಾರಿಯಾಗಿರುವುದು. ಈ ಪಂದ್ಯಕ್ಕಾಗಿ ಐಸಿಸಿ ಮೂರು ಪ್ಯಾಕೇಜ್‌ಗಳಲ್ಲಿ ಟಿಕೆಟ್‌ಗಳನ್ನು ಇರಿಸಿದೆ. ಇದರಲ್ಲಿ ಡೈಮಂಡ್ ಕ್ಲಬ್, ಪ್ರೀಮಿಯಂ ಕ್ಲಬ್ ಲಾಂಜ್ ಮತ್ತು ಕಾರ್ನರ್ ಕ್ಲಬ್ಗಳನ್ನು ಒಳಗೊಂಡಿವೆ.
ಡೈಮಂಡ್ ಕ್ಲಬ್ ಟಿಕೆಟ್ ಬೆಲೆ 8.34 ಲಕ್ಷ ರೂ. ಈ ಟಿಕೆಟ್ ಖರೀದಿಸುವ ಅಭಿಮಾನಿಗಳಿಗೆ ಅತ್ಯುತ್ತಮ ಸೌಲಭ್ಯಗಳು ಸಿಗುತ್ತವೆ. ಪ್ರೀಮಿಯಂ ಕ್ಲಬ್ ಲಾಂಜ್ ಟಿಕೆಟ್ ಬೆಲೆ 2 ಲಕ್ಷ ರೂ, ಮತ್ತು ಕಾರ್ನರ್ ಕ್ಲಬ್ ಟಿಕೆಟ್ ಬೆಲೆ 2.29 ಲಕ್ಷ ರೂ. ಆಗಿದೆ. ಭಾರತ-ಪಾಕಿಸ್ತಾನ ಪಂದ್ಯದ ದೃಷ್ಟಿಯಿಂದ ಐಸಿಸಿ ಟಿಕೆಟ್ ಬೆಲೆಯನ್ನು ಇಷ್ಟು ದುಬಾರಿ ಇರಿಸಿದೆ. ಇದಲ್ಲದೆ ಪಂದ್ಯಕ್ಕೆ ಉಗ್ರರು ಬಾಂಬ್ ಬೆದರಿಕೆ ಹಾಕಿದ್ದು ಕೂಡ ಅಭಿಮಾನಿಗಳ ಹಿಂದೇಟಿಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಹೆಚ್ಚಿನ ಟಿಕೆಟ್‌ಗಳು ಖರೀದಿಯಾಗದಿದ್ದಲ್ಲಿ ಐಸಿಸಿ ಮತ್ತೆ ಪರಿಷ್ಕೃತ ಟಿಕೆಟ್ ದರ ಹೊರಡಿಡುವ ಸಾಧ್ಯತೆ ಇದೆ.
ಇದನ್ನೂ ಓದಿ T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?
ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಪಂದ್ಯಕ್ಕೆ ಉಗ್ರರಿಂದ ದಾಳಿಯ ಬೆದರಿಕೆ ಬಂದಿರುವ ಕಾರಣ ಕ್ರೀಡಾಂಗಣದಲ್ಲಿ ಭಾರೀ ಭದ್ರತಾ ವ್ಯವಸ್ಥೆ ಕೈಗೊಳಲಾಗಿದೆ. ಐಸಿಸ್-ಕೆ ಹೆಸರಿನ ಭಯೋತ್ಪಾದಕ ಸಂಘಟನೆಯು “ಲೋನ್ ವುಲ್ಫ್” ದಾಳಿ ನಡೆಸುವುದಾಗಿ ಘೋಷಿಸಿತ್ತು. ಹೀಗಾಗಿ ಪಂದ್ಯಕ್ಕೆ ಸುಧಾರಿತ ಕಣ್ಗಾವಲು ಏರ್ಪಡಿಸಲಾಗಿದೆ.
ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಹೊರವಲಯದಲ್ಲಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಭಾರತ ಮತ್ತು ಪಾಕ್ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ಏರ್ಪಡಿಸಲಾಗಿದೆ ಎನ್ನಲಾಗಿದೆ.
ಟಿ20 ಮುಖಾಮುಖಿ
ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2021ರಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಎದುರಾಗಿತ್ತು. ಅದು ಕೂಡ 10 ವಿಕೆಟ್ ಅಂತರದ ಹೀನಾಯ ಸೋಲಾಗಿತ್ತು.