Site icon Vistara News

IND vs PAK T20 Match: 10 ಸೆಕೆಂಡ್‌ ಜಾಹೀರಾತಿಗೆ ಕನಿಷ್ಠ 50 ಲಕ್ಷ ನಿಗದಿ!

IND vs PAK T20 Match

India Vs Pakistan T20 Match: 50 Lakhs For 10 Secs

ಮುಂಬಯಿ: ಭಾರತ-ಪಾಕ್‌(IND vs PAK T20 Match) ನಡುವೆ ಪಂದ್ಯ ನಡೆದರೆ, ಜಾಹೀರಾತು ಕಂಪನಿಗಳಿಂದ ಬಿಸಿಸಿಐ, ಪಿಸಿಬಿ ಮತ್ತು ಐಸಿಸಿಗಳಿಗೆ ಹಣ ಹೊಳೆಯೇ ಹರಿದುಹೋಗುತ್ತದೆ. ಎರಡೂ ದೇಶಗಳ ನಡುವೆ ಎಂದಿಗೂ ಮುಗಿಯದಂತೆ ಕಾಣುತ್ತಿರುವ ದ್ವೇಷಗಳ ಜತೆಗೆ ಹಣಕಾಸಿನ ಲೆಕ್ಕಾಚಾರವೂ ಅಲ್ಲಿರುತ್ತವೆ. ಇದೀಗ ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ಉಭಯ ತಂಡಗಳ ಪಂದ್ಯದ ವೇಳೆ ಪ್ರಸಾರಗೊಳ್ಳುವ 10 ಸೆಕೆಂಡ್‌ಗಳ ಜಾಹೀರಾತಿಗೆ ಕನಿಷ್ಠ 50 ಲಕ್ಷ ನಿಗದಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಭಾರತ ಮತ್ತು ಪಾಕ್​ ಪಂದ್ಯ ಜೂನ್​ 9ರಂದು ನಡೆಯಲಿದೆ.

ವರದಿಗಳ ಪ್ರಕಾರ ಈ ವಿಶ್ವಕಪ್‌ನ ಸಾಮಾನ್ಯ ಪಂದ್ಯಗಳ ಜಾಹೀರಾತು ಶುಲ್ಕ 10 ಸೆಕೆಂಡ್‌ಗೆ 6 ಲಕ್ಷ ಇದ್ದು, ಇನ್ನುಳಿದ ಪ್ರಮುಖ ಪಂದ್ಯಗಳಿಗೆ 12ರಿಂದ 15 ಲಕ್ಷದ ವರೆಗೆ ಶುಲ್ಕ ನಿಗದಿಪಡಿಸಲಾಗಿದೆ. ಭಾರತ ನಾಕೌಟ್‌ ಹಂತಕ್ಕೇರಿದರೆ, ಆ ಪಂದ್ಯಗಳ ಜಾಹೀರಾತಿಗೆ ಕನಿಷ್ಠ 26 ಲಕ್ಷ ನಿಗದಿಯಾಗಬಹುದು ಎನ್ನಲಾಗಿದೆ. ವೆಸ್ಟ್​ ಇಂಡೀಸ್​ ಮತ್ತು ಅಮೆರಿಕದಲ್ಲಿ ಪಂದ್ಯಗಳು ಹಗಲು ಮತ್ತು ಬೆಳಗಿನ ಜಾವ ನಡೆಯುವ ಕಾರಣ ಹೆಚ್ಚಿನ ಸಂಖ್ಯೆಯ ಪ್ರೇಕ್ಷರು ಬರುತ್ತಿಲ್ಲ. ಈ ನಷ್ಟವನ್ನೆಲ್ಲ ಆಯೋಜಕರು ಭಾರತ-ಪಾಕ್‌ ಪಂದ್ಯದ ಮೂಲಕ ಭರಿಸುವ ಯೋಜನೆಯಲ್ಲಿದ್ದಾರೆ.

ಪಂದ್ಯ ನೋಡಲು ಅಭಿಮಾನಿಗಳ ನಿರಾಸಕ್ತಿ


ಭಾರತ-ಪಾಕ್​ ಹೈವೋಲ್ಟೇಜ್ ಪಂದ್ಯಕ್ಕೆ ಈ ಬಾರಿ ಪ್ರೇಕ್ಷಕರು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ವಿಚಾರ ಕೂಡ ಹೊರಬಿದ್ದಿದೆ. ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಇನ್ನೂ ಮಾರಾಟವಾಗಿಲ್ಲ. ಈ ಪಂದ್ಯದ ಟಿಕೆಟ್‌ಗಳು ಇನ್ನೂ ಐಸಿಸಿ ವೆಬ್​ಸೈಟ್​ನಲ್ಲಿ ಲಭ್ಯವಿದೆ. ಇದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ IND vs PAK: ಭಾರತ ವಿರುದ್ಧ ಶಾಂತ ಚಿತ್ತರಾಗಿ ಆಡುವ ಉಪಾಯ ಮಾಡಿದ ಕುತಂತ್ರಿ ಪಾಕ್​

ಭಾರತ ಮತ್ತು ಪಾಕ್​ ಪಂದ್ಯದ ಟಿಕೆಟ್​ ಸಿಗುವುದೇ ಒಂದು ಅದೃಷ್ಟ. ಮ್ಯಾಚ್​ನ ಟಿಕೆಟ್​ಗಳು ಘೋಷಣೆಯಾದ ಕ್ಷಣಾರ್ಧದಲ್ಲೇ ಮಾರಾಟವಾಗುತ್ತಿದ್ದವು. ಆದರೆ ಈ ಬಾರಿ ಯಾರಿಗೂ ಕೂಡ ಟಿಕೆಟ್​ ಕೊಳ್ಳಲು ಆಸಕ್ತಿಯೇ ಇಲ್ಲದಂತಾಗಿದೆ. ಇದಕ್ಕೆ ಕಾರಣ ಟಿಕೆಟ್​ ಬೆಲೆ ದುಬಾರಿಯಾಗಿರುವುದು. ಈ ಪಂದ್ಯಕ್ಕಾಗಿ ಐಸಿಸಿ ಮೂರು ಪ್ಯಾಕೇಜ್‌ಗಳಲ್ಲಿ ಟಿಕೆಟ್‌ಗಳನ್ನು ಇರಿಸಿದೆ. ಇದರಲ್ಲಿ ಡೈಮಂಡ್ ಕ್ಲಬ್, ಪ್ರೀಮಿಯಂ ಕ್ಲಬ್ ಲಾಂಜ್​​ ಮತ್ತು ಕಾರ್ನರ್ ಕ್ಲಬ್​​ಗಳನ್ನು ಒಳಗೊಂಡಿವೆ. ಡೈಮಂಡ್ ಕ್ಲಬ್ ಟಿಕೆಟ್ ಬೆಲೆ 8.34 ಲಕ್ಷ ರೂ. ಈ ಟಿಕೆಟ್​ ಖರೀದಿಸುವ ಅಭಿಮಾನಿಗಳಿಗೆ ಅತ್ಯುತ್ತಮ ಸೌಲಭ್ಯಗಳು ಸಿಗುತ್ತವೆ. ಪ್ರೀಮಿಯಂ ಕ್ಲಬ್ ಲಾಂಜ್​ ಟಿಕೆಟ್ ಬೆಲೆ 2 ಲಕ್ಷ ರೂ, ಮತ್ತು ಕಾರ್ನರ್ ಕ್ಲಬ್ ಟಿಕೆಟ್ ಬೆಲೆ 2.29 ಲಕ್ಷ ರೂ. ಆಗಿದೆ. ಇದಲ್ಲದೆ ಪಂದ್ಯಕ್ಕೆ ಉಗ್ರರು ಬಾಂಬ್​ ಬೆದರಿಕೆ ಹಾಕಿದ್ದು ಕೂಡ ಅಭಿಮಾನಿಗಳ ಹಿಂದೇಟಿಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. 

ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಹೊರವಲಯದಲ್ಲಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ಏರ್ಪಡಿಸಲಾಗಿದೆ ಎನ್ನಲಾಗಿದೆ.

Exit mobile version