ನವದೆಹಲಿ: ಒಂದೆಡೆ ದೇಶದ ಪ್ರಧಾನಿಯಾಗಿ ಮೂರನೇ ಬಾರಿ(Modi 3.0 Cabinet) ಗದ್ದುಗೆ ಏರಲಿರುವ ನರೇಂದ್ರ ಮೋದಿ (Narendra Modi) ಇಂದು (ಜೂನ್ 9) ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ (Modi 3.0 Cabinet). ಈ ಕಾರ್ಯಕ್ರಮಕ್ಕೆ ದೇಶ ವಿದೇಶಗಳ ನಾಯಕರು ಭಾಗಿಯಾಗಲಿದ್ದಾರೆ. ಮತ್ತೊಂದೆಡೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಕಾದಾಟ ನಡೆಸಲಿದೆ. ಇದೀಗ ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಅವರು ತಾನು ಮೋದಿ ಅವರ ಪದಗ್ರಹಣ ಸಮಾರಂಭದ ಬದಲು ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ನೋಡಲು ಕಾತರಗೊಂಡಿದ್ದೇನೆ ಎಂದು ಲೇವಡಿ ಮಾಡಿದ್ದಾರೆ.
ನವದೆಹಲಿಯಲ್ಲಿ ಈ ಕುರಿತು ಮಾತನಾಡಿದ ಸಂಸದ ಶಶಿ ತರೂರ್, ನನ್ನನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಿಲ್ಲ. ಹೀಗಾಗಿ ನಾನು ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯವನ್ನು ವೀಕ್ಷಿಸುತ್ತೇನೆ. ಪ್ರಧಾನಿ ಪ್ರಮಾಣವಚನ ಸಮಾರಂಭಕ್ಕೆ ಬೇರೆ ರಾಷ್ಟ್ರದ ಅದರಲ್ಲೂ ಭಾರತ ವಿರೋಧಿ ಮನಸ್ಥಿತಿಯ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರನ್ನು ಆಹ್ವಾನಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳುವ ಮೂಲಕ ಮೋದಿಗೆ ಟಾಂಗ್ ಕೊಟ್ಟಿದ್ದಾರೆ.
ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ದೇಶದ ವಿದೇಶಾಂಗ ನೀತಿಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳನ್ನು ಹೊಂದಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಸಂಸತ್ನಲ್ಲಿ ಚರ್ಚಿಸಲಾಗುವುದು ಎಂದು ಶಶಿ ತರೂರ್ ಹೇಳಿದ್ದಾರೆ. ತರೂರ್ ಹೇಳಿಕೆಗೆ ಪರ-ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ Modi 3.0 Cabinet: ಪ್ರಮಾಣ ವಚನಕ್ಕೂ ಮುನ್ನ ಗಾಂಧಿ, ಅಟಲ್ ಸಮಾಧಿಗೆ ಮೋದಿ ನಮನ
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. ಏಳು ವಿದೇಶಿ ನಾಯಕರು ಸೇರಿದಂತೆ ಒಟ್ಟು 8,000 ಗಣ್ಯರು ಉಪಸ್ಥಿತರಿರಲಿದ್ದಾರೆ. ಇನ್ನು ಗಣ್ಯರಲ್ಲಿ ವಿವಿಧ ವೃತ್ತಿಪರರು, ಸಾಂಸ್ಕೃತಿಕ ಕಲಾವಿದರು ಸೇರಿದ್ದಾರೆ. ಸಂಜೆ 7:31ರ ಹೊತ್ತಿಗೆ ನರೇಂದ್ರ ಮೋದಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.
ರಾಜಘಾಟ್ ಗೆ ತೆರಳಿ, ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಗೌರವ ವಂದನೆ ಸಲ್ಲಿಸಿದ ಮೋದಿ, ತದನಂತರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿಗೆ ತೆರಳಿ ಗೌರವ ವಂದನೆ ಸಲ್ಲಿಸಿದರು. ರಾಷ್ಯ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಮೋದಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಮೂರು ಸೇನಾಪಡೆಗಳು ಮುಖ್ಯಸ್ಥರು ಮೋದಿ ಅವರಿಗೆ ಸಾಥ್ ನೀಡಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂನಲ್ಲಿ ಯುಡಿಎಫ್ (ಕಾಂಗ್ರೆಸ್) ಅಭ್ಯರ್ಥಿ ಶಶಿ ತರೂರ್ (Shashi Tharoor) ಅವರಿಗೆ ಬಿಜೆಪಿಯ ರಾಜೀವ್ ಚಂದ್ರಶೇಖರ್ (Rajeev Chandrasekhar) ಪ್ರಬಲ ಸ್ಪರ್ಧೆ ಒಡ್ಡಿದ್ದರು. ಒಂದು ಹಂತದಲ್ಲಿ ತರೂರ್ ಸೋಲಿನ ಭೀತಿಗೂ ಒಳಗಾಗಿದ್ದರು. ಆರಂಭದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮುನ್ನಡೆ ಸಾಧಿಸಿದ್ದರು. ಒಂದು ಹಂತದಲ್ಲಿ ಅವರು ಜಯ ಗಳಿಸುತ್ತಾರೆ ಎಂದೂ ಭಾವಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಫೀನಿಕ್ಸ್‌ನಂತೆ ಎದ್ದು ಬಂದ ಶಶಿ ತರೂರು ಅಂತಿಮವಾಗಿ ಕೇವಲ 16,077 ಮತಗಳ ಅಲ್ಪ ಅಂತರದಿಂದ ಜಯ ಗಳಿಸಿದ್ದರು.