ಮುಂಬಯಿ: ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್(Dravid ) ಅವರು ಟೀಮ್ ಇಂಡಿಯಾದ ಕೋಚ್(India Head Coach) ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈಗಾಗಲೇ ಬಿಸಿಸಿಐ ನೂತನ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಮೇ 27 ಕೊನೆಯ ದಿನವಾಗಿದೆ. ಸದ್ಯ ಕೋಚ್ ಹುದ್ದೆ ಅಲಂಕರಿಸಲು ಮಾಜಿ ವಿದೇಶಿ ಆಟಗಾರರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮುಖ್ಯ ಕೋಚ್ ಹುದ್ದೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಹುಡುಕಾಟವನ್ನು ತೀವ್ರಗೊಳಿಸಿದೆ. ಇದರ ಬೆನ್ನಲ್ಲೇ ಗೌತಮ್ ಗಂಭೀರ್(Gautam Gambhir) ತಮ್ಮ ಒಂದು ಷರತ್ತು ಒಪ್ಪಿದರೆ ಕೋಚ್ ಆಗಲು ಸಿದ್ಧ ಎಂದು ಹೇಳಿದ್ದಾರೆ.
ದೈನಿಕ್ ಜಾಗರಣ್ ವರದಿ ಪ್ರಕಾರ, ಗೌತಮ್ ಗಂಭೀರ್ ಭಾರತದ ಮುಖ್ಯ ಕೋಚ್ ಆಗಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಆದರೆ, ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಭರ್ತಿ ಮಾಡುವ ಮುನ್ನ ‘ಒಂದು ಷರತ್ತು’ ಹೊಂದಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ. ‘ಆಯ್ಕೆಯ ಗ್ಯಾರಂಟಿ’ ನೀಡಿದರೆ ಮಾತ್ರ ಗಂಭೀರ್ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಿದ್ಧರಿದ್ದಾರೆ ಎಂದು ವರದಿಯಾಗಿದೆ.
ಕೋಚ್ ಹುದ್ದೆಗಾಗಿ ಎಷ್ಟು ಅರ್ಜಿಗಳು ಬಂದಿದೆ ಎಂಬುದರ ಬಗ್ಗೆ ಸದ್ಯ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಸಂಪರ್ಕಿಸಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗಾಗಲೇ ಹೇಳಿದ್ದಾರೆ. ಗೌತಮ್ ಗಂಭೀರ್ ಭಾರತದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಮತ್ತು ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡರೆ, ಕೋಲ್ಕತ್ತಾ ನೈಟ್ ರೈಡರ್ಸ್‌ನ ಮಾರ್ಗದರ್ಶಕ ಸ್ಥಾನವನ್ನು ತೊರೆಯಬೇಕಾಗುತ್ತದೆ.
ನೂತನ ಕೋಚ್ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯೂ ಈ ಕೋಚ್ಗೆ ಸಿಗಲಿದೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್ ಟಿ20 ವಿಶ್ವಕಪ್ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ತಿರುಗೇಟು ಕೊಟ್ಟ ಜಯ್ ಶಾ
ಆಸ್ಟ್ರೇಲಿಯಾದ ಮಾಜಿ ಆಟಗಾರರು ಭಾರತ ತಂಡದ ಕೋಚ್ ಹುದ್ದೆಯ ಬಗ್ಗೆ ನಿರಾಸಕ್ತಿಕ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಎಲ್ಲ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರ ಹುದ್ದೆಗೆ ನಾವು ಯಾವುದೇ ಆಸ್ಟ್ರೇಲಿಯಾದವರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕೋಚಿಂಗ್ ಹುದ್ದೆಯ ಬಗ್ಗೆ ನೀಡುತ್ತಿರುವ ವದಂತಿಗಳನ್ನು ನಂಬಬಾರದು ಎಂದು ತಿಳಿಸಿದ್ದಾರೆ.
“ನಾನು ಅಥವಾ ಬಿಸಿಸಿಐ ಯಾವುದೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಕೋಚಿಂಗ್ ಆಫರ್‌ನೊಂದಿಗೆ ಸಂಪರ್ಕಿಸಿಲ್ಲ. ಕೆಲವು ಮಾಧ್ಯಮ ವಿಭಾಗಗಳಲ್ಲಿ ಪ್ರಸಾರವಾಗುವ ವರದಿಗಳು ಸಂಪೂರ್ಣವಾಗಿ ತಪ್ಪಾಗಿದೆ. ನಮ್ಮ ರಾಷ್ಟ್ರೀಯ ತಂಡಕ್ಕೆ ಸರಿಯಾದ ತರಬೇತುದಾರನನ್ನು ಹುಡುಕುವುದು ಒಂದು ನಿಖರವಾದ ಮತ್ತು ಸಂಪೂರ್ಣ ಪ್ರಕ್ರಿಯೆಯಾಗಿದೆ” ಎಂದು ತಿಳಿಸಿದ್ದಾರೆ.