ನ್ಯೂಯಾರ್ಕ್: ಕಳೆದ ವರ್ಷ ನಡೆದಿದ್ದ ಏಕದಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮ್ಯಾನೆಜ್ಮೆಂಟ್ ಆಟಗಾರರಲ್ಲಿ ಹೆಚ್ಚಿನ ಸ್ಫೂರ್ತಿ ತುಂಬವ ನಿಟ್ಟಿನಲ್ಲಿ, ಪಂದ್ಯವೊಂದರಲ್ಲಿ ಉತ್ತಮ ಫೀಲ್ಡಿಂಗ್(Best Fielder Award) ನಡೆಸಿದರೆ ಆತನನ್ನು ಗುರುತಿಸಿ ಚಿನ್ನದ ಪದಕ ನೀಡುವ ಕಾರ್ಯವನ್ನು ಜಾರಿಗೆ ತಂದಿತ್ತು. ಇದೀಗ ಟಿ20 ವಿಶ್ವಕಪ್ನಲ್ಲಿಯೂ(T20 World Cup 2024) ಈ ಪ್ರಕ್ರಿಯೆ ಮುಂದುವರಿದಿದೆ. ಐರ್ಲೆಂಡ್(India vs Ireland) ವಿರುದ್ಧದ ಪಂದ್ಯದಲ್ಲಿ ಈ ಪ್ರಶಸ್ತಿ ಮೊಹಮ್ಮದ್ ಸಿರಾಜ್ಗೆ ಲಭಿಸಿದೆ. ಪುಟ್ಟ ಅಭಿಮಾನಿ ಡ್ರೆಸ್ಸಿಂಗ್ ರೋಮ್ಗೆ ಬಂದು ಸಿರಾಜ್ಗೆ(Siraj Wins Best Fielder Award) ಚಿನ್ನದ ಪದಕ ನೀಡಿದ್ದು ವಿಶೇಷವಾಗಿತ್ತು. ತಂಡದ ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅವರು ಈ ಪ್ರಶಸ್ತಿ ಘೋಷಣೆ ಮಾಡಿದರು.
ಐರ್ಲೆಂಡ್ ಬ್ಯಾಟರ್ ಡೆಲಾನಿಯನ್ನು ರನೌಟ್ ಮಾಡುವಲ್ಲಿ ಮೊಹಮ್ಮದ್ ಸಿರಾಜ್ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಫೀಲ್ಡಿಂಗ್ ಕೋಚ್ ಟಿ ದಿಲೀಪ್, ಸಿರಾಜ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಡೆಲಾನಿ 26 ರನ್ ಬಾರಿಸಿದರು. ಪಂದ್ಯದ ವೇಳೆ ರಾಷ್ಟ್ರೀಯ ಗೀತೆಯ ಹಾಡುವ ವೇಳೆ ಕಾಣಿಸಿಕೊಂಡಿದ್ದ ಪಂಜಾಬಿ ಬಾಲಕನನ್ನು ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್ ಡ್ರೆಸ್ಸಿಂಗ್ ರೂಮ್ಗೆ ಆಹ್ವಾನಿಸಿ ಪ್ರಶಸ್ತಿ ಪ್ರಧಾನ ಮಾಡಿಸಿದರು. ಕಳೆದ ಬಾರಿ ಏಕದಿನ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಮೊದಲ ಚಿನ್ನದ ಪದಕ ಜಯಿಸಿದ್ದರು. ಇದೀಗ ಟಿ20 ವಿಶ್ವಕಪ್ನಲ್ಲಿ ಮೊದಲ ಚಿನ್ನದ ಪದಕ ಸಿರಾಜ್ಗೆ ಒಲಿದಿದೆ.
ಇದನ್ನೂ ಓದಿ India vs Ireland: ರೋಹಿತ್ ಅರ್ಧಶತಕ; ಐರ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
ಭಾರತಕ್ಕೆ ಗೆಲುವು
ಇಲ್ಲಿನ ನಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನಾಯಕ ರೋಹಿತ್ ಶರ್ಮಾ ಅವರ ಆಯ್ಕೆಯನ್ನು ಬೌಲರ್ಗಳು ಸಮರ್ಥಿಸಿಕೊಂಡರು. ಹಾರ್ದಿಕ್ ಪಾಂಡ್ಯ, ಅರ್ಶದೀಪ್, ಜಸ್ಪ್ರೀತ್ ಬುಮ್ರಾ, ಸಿರಾಜ್ ಮತ್ತು ಅಕ್ಷರ್ ಜಿದ್ದಿಗೆ ಬಿದ್ದವರಂತೆ ಬೌಲಿಂಗ್ ದಾಳಿ ನಡೆಸಿ ವಿಕೆಟ್ ಕಿತ್ತು ಪಾರಮ್ಯ ಮೆರೆದರು. ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದ ಐರ್ಲೆಂಡ್ ಕೇವಲ 96 ರನ್ಗಳಿಗೆ ಸರ್ವಪತನ ಕಂಡಿತು. ಜವಾಬಿತ್ತ ಭಾರತ, ಈ ಸಣ್ಣ ಮೊತ್ತವನ್ನು 12.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 97 ರನ್ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಅಕ್ಷರ್ ಪಟೇಲ್ ಅವರು ಒಂದು ವಿಕೆಟ್ ಕೀಳುವ ಮೂಲಕ ಟಿ20 ಕ್ರಿಕೆಟ್ನಲ್ಲಿ 50 ವಿಕೆಟ್ ಪೂರ್ತಿಗೊಳಿಸಿದ ಮೈಲುಗಲ್ಲು ತಲುಪಿದರು.