Site icon Vistara News

World Cup | ಪಾಕಿಸ್ತಾನ ತಂಡಕ್ಕೆ ವೀಸಾ ನಿರಾಕರಿಸಿದ ಭಾರತದ ವಿದೇಶಾಂಗ ಸಚಿವಾಲಯ!

world cup

ನವ ದೆಹಲಿ : ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಅಂಧರ ಕ್ರಿಕೆಟ್‌ ತಂಡಗಳ ವಿಶ್ವ ಕಪ್‌ನಲ್ಲಿ (world Cup)ಪಾಲ್ಗೊಳ್ಳಲು ಮುಂದಾಗಿದ್ದ ಪಾಕಿಸ್ತಾನ ತಂಡದ ವೀಸಾ ಅರ್ಜಿಯನ್ನು ಭಾರತದ ವಿದೇಶಾಂಗ ಸಚಿವಾಲಯ ತಳ್ಳಿ ಹಾಕಿದೆ. ಡಿಸೆಂಬರ್‌ ೫ರಂದು ಆರಂಭಗೊಂಡಿರುವ ಟೂರ್ನಿ ೧೭ರವರೆಗೆ ನಡೆಯಲಿದೆ. ನಮಗೆ ಭಾರತದ ವೀಸಾ ಸಿಕ್ಕಿಲ್ಲ ಎಂಬುದಾಗಿ ಪಾಕಿಸ್ತಾನ ಅಂಧರ ಕ್ರಿಕೆಟ್‌ ತಂಡದ ಮ್ಯಾನೇಜ್ಮೆಂಟ್‌ ಮಾಹಿತಿ ನೀಡಿದೆ.

ಮಂಗಳವಾರ ಪಾಕಿಸ್ತಾನ ಅಂಧರ ಕ್ರಿಕೆಟ್ ತಂಡ ಈ ಕುರಿತು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, ಭಾರತದ ವಿದೇಶಾಂಗ ಸಚಿವಾಲಯದ ಅನುಮತಿ ಸಿಗದ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಹೇಳಿದೆ.

“ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಪಾಕಿಸ್ತಾನ ತಂಡಕ್ಕೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರುವುದು ಬೇಸರದ ಸಂಗತಿ,” ಎಂದು ಹೇಳಿದೆ.

“ಹಾಲಿ ವಿಶ್ವ ಕಪ್‌ನಲ್ಲಿ ಪಾಕಿಸ್ತಾನ ತಂಡ ಫೈನಲ್‌ಗೇರುವ ಎಲ್ಲ ಅವಕಾಶಗಳನ್ನು ಹೊಂದಿತ್ತು. ಆದರೆ ವೀಸಾ ನಿರಾಕರಣೆಯಿಂದಾಗಿ ಆಡಲು ಸಾಧ್ಯವಾಗುತ್ತಿಲ್ಲ,” ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

“ಭಾರತದ ಈ ನೀತಿಯನ್ನು ನಾವು ಖಂಡಿಸುತ್ತೇವೆ. ರಾಜಕೀಯ ಹಾಗೂ ಧರ್ಮವನ್ನು ಮೀರಿದ್ದು ಕ್ರೀಡೆ. ಭಾರತದ ಅಂಧರ ಕ್ರಿಕೆಟ್‌ ಸಂಸ್ಥೆಯು ನಮಗೆ ವೀಸಾ ಒದಗಿಸಲು ಸರಕಾರಕ್ಕೆ ಮನವಿ ಮಾಡಿತ್ತು. ಆದರೆ, ವಿದೇಶಾಂಗ ಸಚಿವಾಲಯ ನಿರಾಕರಿಸಿತು,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಳೆದ ಬಾರಿಯ ವಿಶ್ವ ಕಪ್‌ನಲ್ಲಿ ಪಾಕಿಸ್ತಾನ ತಂಡ ರನ್ನರ್‌ ಅಪ್‌ ಸ್ಥಾನ ಪಡೆದುಕೊಂಡಿತ್ತು.

ಭಾರತೀಯ ಅಂಧರ ಕ್ರಿಕೆಟ್‌ ಸಂಸ್ಥೆಯೂ ಮಾಹಿತಿಯನ್ನು ಖಚಿತಪಡಿಸಿದೆ. ಪಾಕಿಸ್ತಾನ ತಂಡ ಆಡಲು ಬರದಿರುವ ಕಾರಣ ಟೂರ್ನಿಯ ಬದಲಿ ವೇಳಾಪಟ್ಟಿಯನ್ನು ಪ್ರಕಟಿಸುವುದಾಗಿ ಹೇಳಿದೆ.

ಇದನ್ನೂ ಓದಿ ವ| ODI World Cup | ನಾವು ಬರದಿದ್ದರೆ ನಿಮ್ಮ ವಿಶ್ವ ಕಪ್ ಯಾರು ನೋಡುತ್ತಾರೆ; ಬಿಸಿಸಿಐಗೆ ರಮೀಜ್‌ ಪ್ರಶ್ನೆ

Exit mobile version