ಬೆಂಗಳೂರು : ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ (United States America) 2024ರ ಟಿ20 ವಿಶ್ವಕಪ್ ನ (T20 World cup 2024) ಹಲವಾರು ಪಂದ್ಯಗಳನ್ನು ಆಯೋಜಿಸಿದ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (International Cricket Council) 167 ಕೋಟಿ ರೂ. ನಷ್ಟ ಅನುಭವಿಸಿದೆ. ಜೂನ್ 9 ರಂದು ನ್ಯೂಯಾರ್ಕ್ನಲ್ಲಿ (New York) ಆಯೋಜಿಸಿದ್ದ ಭಾರತ ಮತ್ತು ಪಾಕಿಸ್ತಾನದ (INDvsPAK) ಪಂದ್ಯದ ಬಳಿಕ 20 ಮಿಲಿಯನ್ ಡಾಲರ್ ನಷ್ಟವಾಗಿದೆ ಎನ್ನಲಾಗಿದೆ.
ಯುಎಸ್ಎ ಒಟ್ಟು 16 ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಿದೆ ಮೊದಲ ಬಾರಿಗೆ ಅಮೆರಿಕದಲ್ಲಿ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು ಅತಿ ಹೆಚ್ಚು ಪಂದ್ಯಗಳು ನ್ಯೂಯಾರ್ಕ್ನಲ್ಲಿ ನಡೆದಿದೆ. ಒಟ್ಟು 8 ಪಂದ್ಯಗಳು, ಫ್ಲೋರಿಡಾ ಮತ್ತು ಟೆಕ್ಸಾಸ್ ತಲಾ 4 ಪಂದ್ಯಗಳು ನಡೆದಿವೆ. ಆದರೆ, ಇದಕ್ಕೆ ವಿನಿಯೋಗ ಮಾಡಿರುವ ದುಡ್ಡು ವಿಶ್ವ ಕಪ್ ಬಜೆಟ್ಗಿಂತಲೂ ಹೆಚ್ಚಾಗಿದೆ. ಪ್ರಮುಖವಾಗಿ ತಾತ್ಕಾಲಿಕ ಮೈದಾನ ತಯಾರಿ, ಕ್ರಿಕೆಟ್ ಪಿಚ್ ಇಲ್ಲದ ನ್ಯೂಯಾರ್ಕ್ನಲ್ಲಿ ಆಯೋಜನೆ ನಷ್ಟಕ್ಕೆ ಕಾರಣವಾಗಿದೆ. ಆಟಗಾರರ ಲಾಜಿಸ್ಟಿಕ್ ವ್ಯವಸ್ಥೆ (ಪ್ರಯಾಣ ಹಾಗೂ ವಸತಿ) ಮೂಲಕವೂ ಹೆಚ್ಚುವರಿ ಹೊರೆಯಾಗಿದೆ ಎನ್ನಲಾಗಿದೆ.
ಕೊಲಂಬೊದಲ್ಲಿ ಜುಲೈ 19ರಿಂದ ಪ್ರಾರಂಭವಾಗುವ ಐಸಿಸಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ನಷ್ಟದ ವಿಚಾರವೇ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ವಾರ್ಷಿಕ ಸಾಮಾನ್ಯ ಸಭೆಯ ಒಂಬತ್ತು ಅಂಶಗಳ ಕಾರ್ಯಸೂಚಿಯಲ್ಲಿ ನಷ್ಟದ ವಿವರ ಇಲ್ಲ. ಆದರೆ, ಅದನ್ನೂ ಚರ್ಚಿಸಲಾಗುವುದು ಎನ್ನಲಾಗಿದೆ.
ಐಸಿಸಿಯ ಹೊಸ ಲೆಕ್ಕಪರಿಶೋಧಕರ ನೇಮಕಾತಿಯು ಐಸಿಸಿ ಸದಸ್ಯತ್ವ, ಅಸೋಸಿಯೇಟ್ ಸದಸ್ಯರ ಸಭೆಯ ವರದಿಗಳು ಮತ್ತು ಐಸಿಸಿ ಅಭಿವೃದ್ಧಿ ಪ್ರಶಸ್ತಿಗಳ ಪ್ರಸ್ತುತಿಯ ಚರ್ಚೆಗಳೊಂದಿಗೆ ಕಾರ್ಯಸೂಚಿಯಲ್ಲಿದೆ. ಇನ್ನೊಂದು ಪ್ರಮುಖ ಅಂಶವೆಂದರೆ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸದಿರುವ ಬಗ್ಗೆಯೂ ಐಸಿಸಿ ಚರ್ಚೆ ನಡೆಯಲಿದೆ.
ಜಯ್ ಶಾ ಅಧ್ಯಕ್ಷರಾಗುತ್ತಾರೆಯೇ?
ಶ್ರೀಲಂಕಾದಲ್ಲಿ ಐಸಿಸಿ ವಾರ್ಷಿಕ ಸಮ್ಮೇಳನ ನಡೆಯುತ್ತಿರುವುದರಿಂದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ನ್ಯೂಜಿಲೆಂಡ್ ನ ಗ್ರೆಗ್ ಬಾರ್ಕ್ಲೇ ಬದಲಿಗೆ ಜಯ್ ಶಾ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾವಾಗ ಏರುತ್ತಾರೆ ಎಂಬುದರ ಕುರಿತು ಊಹಾಪೋಹಗಳು ಎದ್ದಿವೆ.
ಜಯ್ ಶಾ ಅವರ ಭವಿಷ್ಯ ನಿರ್ಣಯ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉನ್ನತ ಹುದ್ದೆಗೆ ಶಾ ಅವರ ಆಯ್ಕೆ ವಿಚಾರ ಸಮ್ಮೇಳನದಲ್ಲಿ ನಿರ್ಣಾಯಕ ವಿಷಯವಾಗಿದೆ ಎಂದು ಐಸಿಸಿ ಸದಸ್ಯರೇ ತಿಳಿಸಿದ್ದಾರೆ. ಮಂಡಳಿಯ ನಿಯಮಗಳ ಪ್ರಕಾರ ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಅವರಿಗೆ ಇನ್ನೂ ಒಂದು ವರ್ಷ ಉಳಿದಿದೆ. ಕಡ್ಡಾಯ ಕೂಲಿಂಗ್-ಆಫ್ ಅವಧಿ ಪ್ರಾರಂಭವಾಗುವ ಮೊದಲು ಅವರ ಅಧಿಕಾರಾವಧಿ 2025ರಲ್ಲಿ ಕೊನೆಗೊಳ್ಳುತ್ತದೆ. ಆದರೂ ಅಮಿತ್ ಶಾ ಅವರು 2025ರಲ್ಲಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಬಾರ್ಕ್ಲೇ ಅವರ ಎರಡು ವರ್ಷಗಳ ಅವಧಿ ಈ ವರ್ಷ ಕೊನೆಗೊಳ್ಳಲಿದೆ. ಅವರು ಮತ್ತೆ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.
ಅಧಿಕಾರಾವಧಿ ಬದಲಾಣೆ
ಐಸಿಸಿ ತನ್ನ ಅಧ್ಯಕ್ಷರ ಅಧಿಕಾರಾವಧಿಯನ್ನು ಸರಿಹೊಂದಿಸಬಹುದು ಎನ್ನುವ ಊಹೆಯೂ ಇದೆ. ಪ್ರಸ್ತುತ, ತಲಾ ಎರಡು ವರ್ಷಗಳ ಮೂರು ಅವಧಿಗಳಾಗಿ ರಚಿಸಲಾಗಿದೆ. ಇದನ್ನು ಪ್ರತಿ ಮೂರು ವರ್ಷಗಳ ಎರಡು ಅವಧಿಗಳಿಗೆ ಬದಲಾಯಿಸಲು ಪರಿಗಣಿಸಬಹುದು.
ಇದನ್ನೂ ಓದಿ: India Squad Announcement: ಶ್ರೀಲಂಕಾ ಸರಣಿಗೆ ಮರಳಿದ ಹಿಟ್ಮ್ಯಾನ್ ರೋಹಿತ್!
ಅಧಿಕಾರಾವಧಿ ಬದಲಾವಣೆಯ ಪರಿಣಾಮ
ಬಾರ್ಕ್ಲೇ ಅವರ ಪ್ರಸ್ತುತ ಅವಧಿಯನ್ನು ಮೂರು ವರ್ಷಗಳಿಗೆ ಮಾರ್ಪಡಿಸಿದರೆ ಐಸಿಸಿಯ ಅಧಿಕಾರ ವಹಿಸುವ ಮುನ್ನ ಶಾ ಅವರು ಬಿಸಿಸಿಐ ಕಾರ್ಯದರ್ಶಿಯಾಗಿ ತಮ್ಮ ಅವಧಿಯನ್ನು ಮುಗಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ಈ ಸಂದರ್ಭದಲ್ಲಿ ಶಾ ಅವರು 2025 ರಲ್ಲಿ ಐಸಿಸಿ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಬಹುದು. ಇದು ಬಿಸಿಸಿಐನಿಂದ ಅವರ ಕೂಲಿಂಗ್-ಆಫ್ ಅವಧಿಗೆ ಹೊಂದಿಕೆಯಾಗುತ್ತದೆ. 2028 ರ ವೇಳೆಗೆ ಶಾ ಅವರು ಮತ್ತೆ ಬಿಸಿಸಿಐ ಅಧ್ಯಕ್ಷರಾಗಲು ಮರಳಬಹುದು.