Site icon Vistara News

IPL 2024: ಮೊಹಮ್ಮದ್ ಶಮಿ ಬದಲಿಗೆ ಗುಜರಾತ್​ ಸೇರಿದ ಸಂದೀಪ್ ವಾರಿಯರ್

Sandeep Warrier

ಅಹಮದಾಬಾದ್​: ಗುಜರಾತ್ ಟೈಟಾನ್ಸ್(Gujarat Titans) ತಂಡವೂ ಗಾಯಗೊಂಡು ಐಪಿಎಲ್​ ಟೂರ್ನಿಯಿಂದ ಹೊರಬಿದ್ದಿರುವ ಮೊಹಮ್ಮದ್ ಶಮಿ(Mohammed Shami) ಬದಲಿಗೆ ಕೇರಳ ಮೂಲಕ ವೇಗದ ಬೌಲರ್ ಸಂದೀಪ್ ವಾರಿಯರ್(Sandeep Warrier) ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ.

ದೇಶೀಯ ಕ್ರಿಕೆಟ್​ನಲ್ಲಿ ಪ್ರಸ್ತುತ ತಮಿಳುನಾಡನ್ನು ಪ್ರತಿನಿಧಿಸುವ ಕೇರಳ ಮೂಲದ ಸಂದೀಪ್​ ವಾರಿಯರ್ ಕಳೆದ ವರ್ಷ ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಐಪಿಎಲ್​ನಿಂದ(IPL 2024) ಹೊರಬಿದ್ದಿದ್ದ ಜಸ್​ಪ್ರೀತ್​ ಬುಮ್ರಾ ಸ್ಥಾನಕ್ಕೆ  ಮುಂಬೈ ಇಂಡಿಯನ್ಸ್​ ತಂಡಕ್ಕೆ ಆಯ್ಕೆಯಾಗಿದ್ದರು. ಈ ಬಾರಿ ಕೂಡ ಅವರು ಬದಲಿ ಆಟಗಾರನಾಗಿ ಗುಜರಾತ್ ಟೈಟಾನ್ಸ್ ಸೇರಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ನಡೆದಿದ್ದ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದರೂ ಮತ್ತೆ ಅದೃಷ್ಟ ಖುಲಾಯಿಸಿದೆ. ಶಮಿ ಬದಲಿಗೆ ಆಯ್ಕೆಯಾದ ವಿಚಾರವನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸ್‌ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ತಿಳಿಸಿದೆ.

32 ವರ್ಷದ ಸಂದೀಪ್​ ವಾರಿಯರ್‌ ಅವರು ಇದುವರೆಗೆ ಐದು ಐಪಿಎಲ್ ಪಂದ್ಯಗಳನ್ನು ಆಡಿ ಕೇವಲ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ. ಮಾರ್ಚ್ 24ರಂದು ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್​ ಅಭಿಯಾನ ಆರಂಭಿಸಲಿದೆ. ತಂಡವನ್ನು ಟೀಮ್​ ಇಂಡಿಯಾದ ಯುವ ಸ್ಟಾರ್​ ಬ್ಯಾಟರ್​ ಶುಭಮನ್​ ಗಿಲ್​ ಮುನ್ನಡೆಸಲಿದ್ದಾರೆ.

ಇದನ್ನೂ ಓದಿ IPL 2024: ರೋಹಿತ್​ ಶರ್ಮರನ್ನು ಬಿಗಿದಪ್ಪಿಕೊಂಡ ಹಾರ್ದಿಕ್​ ಪಾಂಡ್ಯ; ವಿಡಿಯೊ ವೈರಲ್​

ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಟೀಮ್​ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ(Mohammed Shami) ಅವರು ಜೂನ್​ನಲ್ಲಿ ನಡೆಯಲಿರುವ ಪ್ರತಿಷ್ಠಿತ ಟಿ20 ವಿಶ್ವಕಪ್​(T20 World Cup) ಟೂರ್ನಿಯಲ್ಲಿ ಆಡುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿದೆ. ಅವರು ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿ ವೇಳೆಗೆ ತಂಡಕ್ಕೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ತಿಂಗಳು ಶಮಿ ಲಂಡನ್​ನಲ್ಲಿ ಎಡಗಾಲಿನ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಚೇತರಿಕೆಯ ಹಾದಿಯಲ್ಲಿದ್ದಾರೆ.

ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಸೇವೆಯನ್ನು ಕಳೆದುಕೊಂಡ ಗುಜರಾತ್​ಗೆ ಭಾರಿ ಹಿನ್ನಡೆಯಾಗಿದೆ.

ಅನುಭವಿ, ಆಸ್ಟ್ರೇಲಿಯಾದ ಆಟಗಾರ ಮ್ಯಾಥ್ಯೂ ವೇಡ್‌(Matthew Wade) ಅವರು ಕೂಡ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅವರು “ಶೆಫೀಲ್ಡ್‌ ಶೀಲ್ಡ್‌’ ಕ್ರಿಕೆಟ್‌ ಫೈನಲ್‌ನಲ್ಲಿ ಆಡುವ ಕಾರಣ ಅಲಭ್ಯರಾಗಲಿದ್ದಾರೆ. ವೇಡ್​​ ಅವರು ಮಾರ್ಚ್​ 31ರಂದು ಸನ್‌ರೈಸರ್ ಹೈದರಾಬಾದ್‌ ವಿರುದ್ಧ ನಡೆಯುವ ಪಂದ್ಯಕ್ಕೆ ತಂಡ ಸೇರಿಕೊಳ್ಳಲಿದ್ದಾರೆ.

Exit mobile version