Site icon Vistara News

IPL 2024: ಕೆಕೆಆರ್ ನಾಯಕ ಶ್ರೇಯಸ್​ ಅಯ್ಯರ್​ಗೆ ಬಿತ್ತು 12 ಲಕ್ಷ ದಂಡದ ಬರೆ

IPL 2024

ಕೋಲ್ಕತ್ತಾ: ರಾಜಸ್ಥಾನ್​ ರಾಯಲ್ಸ್(RR)​ ವಿರುದ್ಧದ ಪಂದ್ಯದಲ್ಲಿ(IPL 2024) ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣ ಕೆಕೆಆರ್​(KKR) ತಂಡದ ನಾಯಕ ಶ್ರೇಯಸ್​ ಅಯ್ಯರ್(Shreyas Iyer)​ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಸೋಲಿನ ಹತಾಶೆಯಲ್ಲಿದ್ದ ಅವರಿಗೆ ದಂಡದ ಬಿಸಿ ಕೂಡ ಮುಟ್ಟಿದಂತಾಗಿದೆ.

‘ಇದು ಐಪಿಎಲ್‌ನ ನೀತಿ ಸಂಹಿತೆಯಡಿಯಲ್ಲಿ ಕನಿಷ್ಠ ಓವರ್‌ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಈ ಆವೃತ್ತಿಯಲ್ಲಿ ಕೆಕೆಆರ್ ತಂಡದ ಮೊದಲ ಅಪರಾಧವಾಗಿರುವುದರಿಂದ, ಶ್ರೇಯಸ್ ಐಯ್ಯರ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ’ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಐಪಿಎಲ್​ನ ಕೋಡ್​ ಆಫ್​ ಕಂಡಕ್ಟ್​ ಅಪರಾಧವನ್ನು ಅಯ್ಯರ್ ಒಪ್ಪಿಕೊಂಡಿದ್ದಾರೆ.

​ಸ್ಲೋ ಓವರ್​ ರೇಟ್​ ನಿಯಮದ ಪ್ರಕಾರ ಮೊದಲ ತಪ್ಪಿಗೆ ನಾಯಕನನ್ನು ದೋಷಿಯನ್ನಾಗಿ ಮಾಡಲಾಗುತ್ತದೆ. ಮೊದಲ ಬಾರಿಯ ತಪ್ಪಿಗೆ 12 ಲಕ್ಷ ರೂ. ದಂಡ ಹಾಕಲಾಗುತ್ತದೆ. ಇದು ಪುನರಾವರ್ತನೆಯಾದಲ್ಲಿ 24 ಲಕ್ಷ ರೂ. ದಂಡ ನಿಗದಿ ಮಾಡಲಾಗಿದೆ. ಅಲ್ಲದೆ ತಂಡದ ಇತರೆ ಆಟಗಾರರು ಪಂದ್ಯದ ಶುಲ್ಕದ ಶೇ.25 ರಷ್ಟು ಮೊತ್ತವನ್ನು ದಂಡವಾಗಿ ನೀಡಬೇಕು. ಒಂದೊಮ್ಮೆ ಮೂರನೇ ಬಾರಿ ಮತ್ತೆ ಇದೇ ತಪ್ಪು ಮರುಕಳಿಸಿದರೆ ಆಗ ನಾಯಕ ಒಂದು ಪಂದ್ಯದ ನಿಷೇಧಕ್ಕೆ ಗುರಿಯಾಗಲಿದ್ದಾರೆ.

ಇದನ್ನೂ ಓದಿ IPL 2024: ಜೋಶ್​ನಿಂದ ಬ್ಯಾಟಿಂಗ್​ ನಡೆಸಿ ಕ್ರಿಸ್​ ಗೇಲ್​ ದಾಖಲೆ ಮುರಿದ ಜಾಸ್​ ಬಟ್ಲರ್​

ಅಯ್ಯರ್​ ಅವರು ಈ ಪಂದ್ಯದಲ್ಲಿ ಕೇವಲ 1 ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 11 ರನ್​ಗೆ ವಿಕೆಟ್​ ಕಳೆದುಕೊಂಡು ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ವಿಫಲರಾಗಿದ್ದರು. ಈ ಆವೃತ್ತಿಯಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ಕೂಡ ಕಂಡುಬಂದಿಲ್ಲ.

ಪಂದ್ಯ ಸೋತ ಕೆಕೆಆರ್​

ಈಡನ್​ ಗಾರ್ಡನ್ಸ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 223 ರನ್ ಬಾರಿಸಿತು ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನಿಂಗ್ಸ್​ನ ಕೊನೇ ಎಸೆತಕ್ಕೆ 8 ವಿಕೆಟ್ ನಷ್ಟ ಮಾಡಿಕೊಂಡು 224 ರನ್​ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ಪ್ರೇಕ್ಷಕರ ಮುಂದೆ ಕೆಕೆಆರ್ ತಂಡಕ್ಕೆ ಸೋಲುಣಿಸಿತು. ಕೆಕೆಆರ್​ ವಿರುದ್ಧ ಬಿರುಸಿನ ಬ್ಯಾಟಿಂಗ್​ ನಡೆಸಿದ ಬಟ್ಲರ್​ 60 ಎಸೆತಗಳಿಂದ 9 ಬೌಂಡರಿ ಮತ್ತು 6 ಸೊಗಸಾದ ಸಿಕ್ಸರ್​ ನೆರವಿನಿಂದ ಅಜೇಯ 107 ರನ್​ ಬಾರಿಸಿದರು. ಇದು ಬಟ್ಲರ್​ ಅವರ ಆವೃತ್ತಿಯ 2ನೇ ಶತಕ. ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿಯೂ ಅಜೇಯ ಶತಕ ಬಾರಿಸಿದ್ದರು.

Exit mobile version