Site icon Vistara News

IPL 2024: ಮುಂಬೈ ತಂಡಕ್ಕೆ ಮತ್ತಷ್ಟು ಚಿಂತೆ ಹೆಚ್ಚಿಸಿದ ಸೂರ್ಯಕುಮಾರ್ ಫಿಟ್‌ನೆಸ್‌

IPL 2024

ಮುಂಬಯಿ: ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್​(mumbai indians) ತಂಡದ ಚಿಂತೆಯನ್ನು ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​(Suryakumar Yadav) ಇನ್ನಷ್ಟು ಹೆಚ್ಚಾಗುವಂತೆ ಮಾಡಿದ್ದಾರೆ. ಇನ್ನೂ ಕೂಡ ಫಿಟ್(suryakumar yadav fitness)​ ಆಗದ ಕಾರಣ ಅವರ ಐಪಿಎಲ್​(IPL 2024) ಆಗಮನ ಇನಷ್ಟು ವಿಳಂಬವಾಗಲಿದೆ ಎಂದು ತಿಳಿದುಬಂದಿದೆ. ಇದು ಮುಂಬೈಗೆ ಭಾರೀ ಆತಂಕ ಉಂಟುಮಾಡಿದೆ. ಕಳೆದ ವಾರ ಫಿಟ್​ನೆಸ್​ ಫೇಲ್​ ಆದ ಕಾರಣದಿಂದ ಸೂರ್ಯ ಒಡೆದು ಹೋದ ಎಮೋಜಿಯ ಫೋಟೊ ಹಾಕಿ ಐಪಿಎಲ್​ ಗೈರಿನ ಸುಳಿವು ನೀಡಿದ್ದರು.

ಮುಂಬೈ ಇಂಡಿಯನ್ಸ್​ ತಂಡ ಆಡಿದ 2 ಪಂದ್ಯಗಳಲ್ಲಿಯೂ ಹೀನಾಯ ಸೋಲು ಕಂಡಿದೆ. ಈ ಸೋಲಿಗೆ ಪ್ರಮುಖ ಕಾರಣವಾದದ್ದು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಸಿಡಿಲಬ್ಬರ ಬ್ಯಾಟಿಂಗ್​ ಮೂಲಕ ನೆರವಾಗುವ ಆಟಗಾರ ಇಲ್ಲದೇ ಇರುವುದು. ಸೂರ್ಯಕುಮಾರ್​ ಇರುತ್ತಿದ್ದರೆ ಪಂದ್ಯ ಗೆಲ್ಲಬಹುದಿತ್ತು ಎನ್ನುವುದು ಫ್ರಾಂಚೈಸಿಯ ನಂಬಿಕೆ. ಏಕೆಂದರೆ ಹಾರ್ಡ್​ ಹಿಟ್ಟರ್​ ಆಗಿರುವ ಸೂರ್ಯ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದು ಅದೆಷ್ಟೋ ಪಂದ್ಯವನ್ನು ಗೆಲ್ಲಸಿಕೊಟ್ಟಿದ್ದಾರೆ. ಇದೀಗ ಅವರ ಆಗಮನ ಇನಷ್ಟು ತಡವಾಗಲಿದೆ ಎನ್ನುವ ಸುದ್ದಿ ಕೇಳಿ ಫ್ರಾಂಚೈಸಿ ಆಘಾತಕ್ಕೊಳಗಾಗಿದೆ.

ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಂಡಿರುವ ಸೂರ್ಯಕುಮಾರ್​ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಕಳೆದ ಜನವರಿಯಲ್ಲಿ ಸೂರ್ಯ ನ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇನ್ನೂ ಕೆಲವು ಸುತ್ತಿನ ಫಿಟ್‌ನೆಸ್‌ ಪರೀಕ್ಷೆಗೆ ಒಳಗಾಗಬೇಕಿರುವ ಕಾರಣ ಸೂರ್ಯ ಐಪಿಎಲ್​ ಆಡುವ ಕುರಿತು ಮುಂದಿನ ವಾರ ಸ್ಪಷ್ಟ ಚಿತ್ರಣ ಸಿಗಲಿದೆ.

ಇದನ್ನೂ ಓದಿ IPL 2024 Points Table: ಆರ್​ಸಿಬಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಿದ ಕೆಕೆಆರ್​

ಸೂರ್ಯಕುಮಾರ್‌ ಈ ವರೆಗೂ 60 ಟಿ20 ಪಂದ್ಯಗಳನ್ನಾಡಿದ್ದು, 171+ ಸ್ಟ್ರೈಕ್‌ರೇಟ್‌ನೊಂದಿಗೆ 2141 ರನ್‌ ಕಲೆಹಾಕಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅವರು 4 ಶತಕಗಳನ್ನೂ ಬಾರಿಸಿದ್ದಾರೆ. ಟಿ20 ಬ್ಯಾಟಿಂಗ್​ ಶ್ರೇಯಾಂಕದಲ್ಲಿಯೂ ಸೂರ್ಯ ನಂ.1 ಸ್ಥಾನ ಪಡೆದಿದ್ದಾರೆ. ನಟರಾಜ ಶೈಲಿಯಲ್ಲಿ ಬ್ಯಾಟ್​ ಬೀಸುವ ಇವರು ಹಲವು ಪಂದ್ಯಗಳಲ್ಲಿ ಮುಂಬೈ ತಂಡಕ್ಕೆ ಸ್ಮರಣೀಯ ಗೆಲುವು ಕೂಡ ತಂದುಕೊಟ್ಟಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್​ ಎಡ ಪಾದದ ನೋವಿಗೆ ಸಿಲುಕಿದ್ದರು. 

ಸಂಪೂರ್ಣ ಫಿಟ್‌ನೆಸ್‌ಗೆ ಮರಳಿದ ಬಳಿಕವಷ್ಟೇ ಸೂರ್ಯಕುಮಾರ್‌ ಅವರಿಗೆ ಎನ್‌ಸಿಎಯಿಂದ ಸರ್ಟಿಫಿಕೆಟ್‌ ಲಭಿಸಲಿದೆ. ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಸೂರ್ಯಕುಮಾರ್‌ ಯಾದವ್‌ ಟೀಮ್‌ ಇಂಡಿಯಾ ಪಾಲಿಗೆ ಅನಿವಾರ್ಯರಾಗಿರುವುದರಿಂದ ಇವರ ವಿಷಯದಲ್ಲಿ ಬಿಸಿಸಿಐ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಲು ಸಿದ್ಧವಿಲ್ಲ. ಒಟ್ಟಾರೆಯಾಗಿ ಹಿನ್ನಡೆಯಾಗಿರುವುದು ಮಾತ್ರ ಮುಂಬೈ ಇಂಡಿಯನ್ಸ್​ ತಂಡಕ್ಕೆ.

Exit mobile version