ಬೆಂಗಳೂರು: ವಿಶ್ವದ ಕ್ಯಾಶ್ ರಿಚ್ ಕ್ರಿಕೆಟ್ ಲೀಗ್ 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆರ್ಸಿಬಿ ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮಾರ್ಚ್ 22ರಂದು ನಡೆಯುವ ಪಂದ್ಯದಲ್ಲಿ ಆಡುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಇದುವರೆಗಿನ 16 ಆವೃತ್ತಿಯ ಐಪಿಎಲ್‌ನಲ್ಲಿ ಹಲವು ವಿವಾದಗಳು ಸೃಷ್ಟಿಯಾಗಿದೆ. ಈ ಪೈಕಿ ಬಹುದೊಡ್ಡ 5 ವಿವಾದಗಳ ಪಟ್ಟಿಯೊಂದು ಇಲ್ಲಿದೆ.
ಸ್ಪಾಟ್ ಫಿಕ್ಸಿಂಗ್
ಐಪಿಎಲ್ ಟೂರ್ನಿಗೆ ತಟ್ಟಿದ ಬಹುದೊಡ್ಡ ಕಳಂಕವೆಂದರೆ 2013ರಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣ. ಇದು ವಿಶ್ವ ಮಟ್ಟದಲ್ಲಿ ಭಾರೀ ಸುದ್ದಿ ಮಾಡಿತ್ತು. ಪ್ರಮುಖ ಆಟಗಾರರಲ್ಲದೆ ಗುರುನಾಥ್ ಮೇಯಪ್ಪನ್ ಮತ್ತು ರಾಜ್ ಕುಂದ್ರಾ ಸೇರಿದಂತೆ ತಂಡದ ಮಾಲೀಕರು ಈ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದರು. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಮೂವರು ಕ್ರಿಕೆಟಿಗರಾದ ಎಸ್ ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕೀತ್ ಚವಾಣ್ ಅವರನ್ನು ಬಂಧಿಸಿದ್ದರು. ಅಲ್ಲದೆ ಈ ಮೂವರು ಕ್ರಿಕೆಟಿಗರನ್ನು ಐಪಿಎಲ್ನಿಂದ ಬ್ಯಾನ್ ಮಾಡಿತ್ತು.
ಶ್ರೀಶಾಂತ್ಗೆ ಕಪಾಳಮೋಕ್ಷ
ಐಪಿಎಲ್ ಇತಿಹಾಸದ ಬಹುದೊಡ್ಡ ವಿವಾದಗಳಲ್ಲಿ ಶ್ರೀಶಾಂತ್ ಮತ್ತು ಹರ್ಭಜನ್ ನಡುವಣ ‘ಕಪಾಳಮೋಕ್ಷ’ ವಿವಾದವೂ ಒಂದು. 2008ರ ಉದ್ಘಾಟನ ಆವೃತ್ತಿಯ ಐಪಿಎಲ್‌ನಲ್ಲಿ ಈ ಘಟನೆ ನಡೆದಿತ್ತು. ಪಂದ್ಯ ಮುಗಿದ ಬಳಿಕ ಆನ್‌ಫೀಲ್ಡ್‌ನಲ್ಲೇ ಶ್ರೀಶಾಂತ್ ಕೆನ್ನೆಗೆ ಭಜ್ಜಿ ಬಾರಿಸಿದ್ದರು. ಇದಾದ ಬಳಿಕ ಇಬ್ಬರ ನಡುವೆ ರಾಜಿ ಸಂದಾನದ ಮೂಲಕ ಪರಿಸ್ಥಿತಿ ತಿಳಿಯಾಗಿತ್ತು.
ಕೆಕೆಆರ್‌ನಿಂದ ಸೌರವ್ ಗಂಗೂಲಿ ವಜಾ
2011ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಅನುಭವಿ ಸೌರವ್ ಗಂಗೂಲಿ ಅವರನ್ನು ತಂಡದಿಂದ ಕೈಬಿಟ್ಟದ್ದು ಕೂಡ ದೊಡ್ಡ ವಿವಾದ ಸೃಷ್ಟಿಸಿತ್ತು. ಫ್ರಾಂಚೈಸಿ ವಿರುದ್ಧ “ನೋ ದಾದಾ, ನೋ ಕೆಕೆಆರ್” ಅಭಿಯಾನವನ್ನು ಪ್ರಾರಂಭಿಸಿದ್ದರು. ಜತೆಗೆ ಬೀದಿಗಿಳಿದು ಪ್ರತಿಭಟನೆಗಳನ್ನು ಕೂಡ ಮಾಡಿದ್ದರು.
ಇದನ್ನೂ ಓದಿ IPL 2024 : ಐಪಿಎಲ್ ಇತಿಹಾಸದಲ್ಲಿ ದಾಖಲಾಗಿರುವ ಅತಿವೇಗದ ಶತಕಗಳ ವಿವರ ಈ ಕೆಳಗಿನಂತಿದೆ
ಲ್ಯೂಕ್ ಪೊಮರ್ಸ್‌ಬ್ಯಾಕ್ ಬಂಧನ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಲ್ಯೂಕ್ ಪೊಮರ್ಸ್‌ಬ್ಯಾಕ್ ಅವರು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೆ ಒಳಪಟ್ಟಿದ್ದರು. ಭಾರತೀಯ ದಂಡ ಸಂಹಿತೆಯ ಅನೇಕ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಅಂತಿಮವಾಗಿ ಅವರು ಕ್ಷಮೆಯಾಚಿಸಿದ ಬಳಿಕ ಆರೋಪಗಳನ್ನು ಕೈಬಿಡಲಾಗಿತ್ತು.
ಇದನ್ನೂ ಓದಿ IPL 2024: ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರರು…
ಶಾರುಖ್ ಖಾನ್ಗೆ ಬ್ಯಾನ್ ಶಿಕ್ಷೆ
2012ರಲ್ಲಿ ಐಪಿಎಲ್‌ನಲ್ಲಿ ಕೆಕೆಆರ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಗೆದ್ದಿತ್ತು. ಈ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ಸಹ-ಮಾಲೀಕ ಶಾರುಖ್ ಖಾನ್ ಅವರು ಕುಡಿತ ಮತ್ತಿನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಅಸಹ್ಯವಾದ ಜಗಳವಾಡೊದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಐದು ವರ್ಷಗಳ ಕಾಲ ವಾಂಖೆಡೆ ಸ್ಟೇಡಿಯಂ ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು.