Site icon Vistara News

IPL 2024: ಭಾರತ ಕ್ರಿಕೆಟ್​ಗೆ ನಿಮ್ಮ ಕೊಡುಗೆ ಏನು? ಹರ್ಷ ಭೋಗ್ಲೆಗೆ ಪ್ರಶ್ನೆ ಮಾಡಿದ ಮಾಜಿ ಆಟಗಾರ

IPL 2024

ಚೆನ್ನೈ: ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಮತ್ತು ತಮಿಳುನಾಡು ಮೂಲದ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್(Laxman Sivaramakrishnan) ಅವರು ಕ್ರಿಕೆಟ್ ವೀಕ್ಷಕ ವಿವರಣೆಗಾರ ಮತ್ತು ವಿಶ್ಲೇಷಕ ಹರ್ಷ ಭೋಗ್ಲೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣ ಹರ್ಷ ಭೋಗ್ಲೆ(Harsha Bhogle) ಅವರು ಚೆನ್ನೈ ಸೂಪರ್​ ಸಿಂಗ್ಸ್ ತಂಡದ(IPL 2024)​ ವಿರುದ್ಧ ಮಾಡಿದ ಒಂದು ಟ್ವೀಟ್​.

ಭಾನುವಾರ ಚೆನ್ನೈ ಮತ್ತು ಮುಂಬೈ(MI vs CSK) ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ 6 ವಿಕೆಟ್​ಗೆ 206 ರನ್​ ಬಾರಿಸಿತು. ಈ ವೇಳೆ ಟ್ವೀಟ್​ ಮಾಡಿದ ಭೋಗ್ಲೆ, “206 ಉತ್ತಮ ಸ್ಕೋರ್. ಆದರೆ, ಈ ಸ್ಟೇಡಿಯಂನಲ್ಲಿ ಸ್ವಲ್ಪ ಇಬ್ಬನಿ ಸಮಸ್ಯೆಯಿದೆ. ಚೆನ್ನೈ ತಂಡದಲ್ಲಿ ಹೆಚ್ಚಿನ ಬೌಲಿಂಗ್ ಆಯ್ಕೆಗಳಿಲ್ಲದಿರುವುದರಿಂದ ತಂಡಕ್ಕೆ ಇನ್ನೂ 20ರನ್​ಗಳ ಅಗತ್ಯವಿತ್ತು ಎಂದು ಭಾವಿಸುತ್ತದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.


ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ್ ಶಿವರಾಮಕೃಷ್ಣನ್, ನೀವು ಚೆನ್ನೈ ಆಟಗಾರರನ್ನು ಯಾವಾಗಲೂ ಕಡೆಗಣಿಸುತ್ತೀರಿ. ಭಾರತೀಯ ಕ್ರಿಕೆಟ್‌ಗೆ ನಿಮ್ಮ ಕೊಡುಗೆ ಏನು ಎಂದು ನಿಜವಾಗಿಯೂ ಆಶ್ಚರ್ಯವಾಗುತ್ತದೆ” ಎಂದು ಖಾರವಾಗಿಯೇ ಉತ್ತರಿಸಿದ್ದಾರೆ. ಈ ಟ್ವೀಟ್​ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಶಿವರಾಮಕೃಷ್ಣನ್ ಅವರು ಇದನ್ನು ಡಿಲಿಟ್​ ಮಾಡಿದ್ದಾರೆ. ಆದರೂ ಕೆಲವು ಸ್ಕ್ರೀನ್​ ಶಾಟ್​ಗಳು ಈಗ ವೈರಲ್​ ಆಗುತ್ತಿದೆ.

ಕಳೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 100ನೇ ಟೆಸ್ಟ್ ಪಂದ್ಯವನ್ನಾಡಿದ ಆರ್​.ಅಶ್ವಿನ್​ ಅವರ ಬಗ್ಗೆಯೂ ಶಿವರಾಮಕೃಷ್ಣನ್ ಗಂಭೀರ ಆರೋಪ ಮಾಡಿದ್ದರು. ಅಶ್ವಿನ್​ ಹಿರಿಯ ಆಟಗಾರರಿಗೆ ಗೌರವ ನೀಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಕೂಡ ಮಾಡಿದ್ದರು.

“100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಅಶ್ವಿನ್​ಗೆ ಶುಭ ಕೋರಲು ನಾನು ಹಲವು ಕರೆಗಳನ್ನು ಮಾಡಿದೆ. ಆದರೆ ಅವರು ಈ ಕರೆಗಳನ್ನು ಸ್ವೀಕರಿಸಿಲ್ಲ. ನ್ನನ ಕರೆಗಳನ್ನು ಕಟ್​ ಮಾಡುವ ಮೂಲಕ ಅಗೌರವ ತೋರಿದ್ದಾರೆ ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ಆರೋಪಿಸಿದ್ದಾರೆ. “ನನ್ನ ಕರೆಯನ್ನು ಕಟ್ ಮಾಡಿದ ಬಳಿಕ ನಾನು ಆತನಿಗೆ ಸಂದೇಶ ಕಳುಹಿಸಿದೆ, ಅದಕ್ಕೂ ಯಾವುದೇ ಉತ್ತರವಿಲ್ಲ. ಇದು ನಮ್ಮಂತಹ ಮಾಜಿ ಕ್ರಿಕೆಟಿಗರು ಪಡೆಯುತ್ತಿರುವ ಗೌರವ” ಎಂದು ಪೋಸ್ಟ್​ನಲ್ಲಿ ಬರೆದಿದ್ದರು.

ಇದನ್ನೂ ಓದಿ IPL 2024: ಕೆಕೆಆರ್ ಸೋಲು ಕಂಡು ಕಣ್ಣೀರು ಸುರಿಸಿದ ನಟ ಶಾರೂಖ್ ಖಾನ್‌; ಫೋಟೊ ವೈರಲ್​

ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಭಾರತ ಪರ 9 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್​ನಲ್ಲಿ 130, ಏಕದಿನದಲ್ಲಿ ಕೇವಲ 5 ರನ್​ ಗಳಿಸಿದ್ದಾರೆ. ಬೌಲಿಂಗ್​ನಲ್ಲಿ ಒಟ್ಟು 41 ವಿಕೆಟ್​ ಉರುಳಿಸಿದ್ದಾರೆ. ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಯಿಂದಲೇ ಇವರು ಗುರುತಿಸಿಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್ ಕಾಮೆಂಟರಿಯಲ್ಲಿ ಹರ್ಷ ಭೋಗ್ಲೆ ಚಿರಪರಿಚಿತ ಹೆಸರು. ಕಂಚಿನ ಕಂಠದ ಮೂಲಕ ವಿಶ್ಲೇಷಣೆ ಮಾಡುವ ಚಾಕಚಕ್ಯತೆ, ಭಾಷೆಯ ಮೇಲಿನ ಹಿಡಿತ ಅತ್ಯದ್ಭುತ. ಇವರ ಧ್ವನಿಯನ್ನು ಹೈವೋಲ್ಟೇಜ್​ ಪಂದ್ಯಗಳಲ್ಲಿ ಕೇಳುವುದೇ ಒಂದು ಸೌಭಾಗ್ಯ ಎಂದರೂ ತಪ್ಪಾಗಲಾರದು. ಮೂಲತಃ ಹೈದರಾಬಾದ್ ನವರಾದ ಹರ್ಷ ಭೋಗ್ಲೆ ತನ್ನ 19ನೇ ವಯಸ್ಸಿನಲ್ಲೇ ಕ್ರಿಕೆಟ್ ಕಾಮೆಂಟರಿ ಆರಂಭಿಸಿದ್ದರು. ಅಂದು ಆಲ್ ಇಂಡಿಯಾ ರೇಡಿಯೋದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಹರ್ಷ ಆ ಬಳಿಕ ಟಿವಿ ವೀಕ್ಷಕ ವಿವರಣೆಯಲ್ಲಿ ದೊಡ್ಡ ಹೆಸರು ಮಾಡಿದರು.

Exit mobile version