ಮುಂಬಯಿ: ಐಪಿಎಲ್(IPL 2025) ಆಟಗಾರ ಮೆಗಾ ಹರಾಜು(ipl 2025 mega auction) ಪ್ರಕ್ರಿಯೆ ನಡೆಯುವ ಮುನ್ನವೇ ಕೆಲ ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ತಮ್ಮ ತಂಡದತ್ತ ಸೆಳೆಯಲು ತೆರೆ ಮರೆಯಲ್ಲಿ ಭಾರೀ ಕಸರತ್ತು ಆರಂಭಿಸಿದೆ. ಹೌದು, ಇದೀಗ ವರದಿಯಾದ ಪ್ರಕಾರ ಭಾರತ ಟಿ20 ತಂಡದ ನಾಯಕ, ಪ್ರಸ್ತುತ ಮುಂಬೈ ಇಂಡಿಯನ್ಸ್(mumbai indians) ತಂಡದ ಆಟಗಾರ ಸೂರ್ಯಕುಮಾರ್ ಯಾದವ್ಗೆ ಹಾಲಿ ಚಾಂಪಿಯನ್ ಕೆಕೆಆರ್(KKR) ತಂಡದಿಂದ ನಾಯಕತ್ವದ ಆಫರ್ ಬಂದಿದೆ ಎಂದು ವರದಿಯಾಗಿದೆ.
ಮುಂಬೈ ಇಂಡಿಯನ್ಸ್ ಕೂಡ ತನ್ನ ನಾಯಕತ್ವದಲ್ಲಿ ಬದಲಾವಣೆಗೆ ಮುಂದಾಗಿದ್ದು, ತಂಡದ ಆಟಗಾರ ಸೂರ್ಯಕುಮಾರ್ ಅವರನ್ನು ಕೆಕೆಆರ್ ತಂಡಕ್ಕೆ ಬಿಟ್ಟುಕೊಟ್ಟು ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಿ ನಾಯಕತ್ವ ನೀಡಲು ಮುಂಬೈ ಇಂಡಿಯನ್ಸ್ ನಿರ್ಧರಿಸಿದೆ ಎನ್ನಲಾಗಿದೆ. ಟ್ರೇಡಿಂಗ್ ಮೂಲಕ ಉಭಯ ಆಟಗಾರರನ್ನು ಪರಸ್ಪರ ಬದಲಾವಣೆ ಮಾಡಿಕೊಳ್ಳಲು ಎರಡು ಫ್ರಾಂಚೈಸಿಗಳು ಯೋಜನೆ ನಡೆಸಿವೆ ಎಂದು ವರದಿಯಾಗಿದೆ. ಈ ಸುದ್ದಿ ಕೇಳಿ ಬಂದ ತಕ್ಷಣ ನೆಟ್ಟಿಗರು ಸೂರ್ಯಕುಮಾರ್ಗೆ ಕೆಕೆಆರ್ ಜೆರ್ಸಿ, ಶ್ರೇಯಸ್ ಅಯ್ಯರ್ಗೆ ಮುಂಬೈ ಜೆರ್ಸಿ ತೊಡಿಸಿದ ಎಡಿಟೆಡ್ ಫೋಟೊವನ್ನು ಶೇರ್ ಮಾಡಲಾರಂಭಿಸಿದ್ದಾರೆ.
ಇದನ್ನೂ ಓದಿ IPL 2025: ಗೆಳೆಯ ಕೆ.ಎಲ್ ರಾಹುಲ್ರನ್ನು ಮತ್ತೆ ಆರ್ಸಿಬಿಗೆ ಕರೆತರಲು ಮುಂದಾದ ಕೊಹ್ಲಿ
ಮುಂಬೈ ತಂಡ ಕಳೆದ ಬಾರಿ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ತಂಡದಿಂದ ಟ್ರೇಡಿಂಗ್ ಮೂಲಕ ಖರೀದಿಸಿ ತಂಡದ ನಾಯಕತ್ವ ನೀಡಿತ್ತು. 5 ಬಾರಿ ತಂಡವನ್ನು ಚಾಂಪಿಯನ್ ಮಾಡಿದ್ದ ನಾಯಕ ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿತ್ತು. ಇದೀಗ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡಿರುವ, ಮುಂಬೈ ಮೂಲದವರೇ ಆದ ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಸೂರ್ಯಕುಮಾರ್ ಯಾದವ್ ಅವರು ಮುಂಬೈ ತಂಡ ಸೇರುವ ಮುನ್ನ ಕೆಕೆಆರ್ ಪರ ಆಡುತ್ತಿದ್ದರು. 2014 ರ ಐಪಿಎಲ್ ಹರಾಜಿನಲ್ಲಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಖರೀದಿಸಿತ್ತು. ಇದೇ ಆವೃತ್ತಿಯಲ್ಲಿ ಕೆಕೆಆರ್ ಚಾಂಪಿಯನ್ ಕೂಡ ಆಗಿತ್ತು. ಗೌತಮ್ ಗಂಭೀರ್ ತಂಡದ ನಾಯಕನಾಗಿದ್ದರು. ಸೂರ್ಯಕುಮಾರ್ ಕೆಕೆಆರ್ ಪರ ನಾಲ್ಕು ಋತುಗಳಲ್ಲಿ 54 ಪಂದ್ಯಗಳನ್ನಾಡಿ 608 ರನ್ ಬಾರಿಸಿದ್ದರು. 2018ರಲ್ಲಿ ಸೂರ್ಯ ಮುಂಬೈ ತಂಡ ಸೇರಿದ್ದರು.
ಸೂರ್ಯಕುಮಾರ್ ಇದುವರೆಗೆ 150 ಐಪಿಎಲ್ ಪಂದ್ಯಗಳಿಂದ 3594 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 24 ಅರ್ಧಶತಕ ಒಳಗೊಂಡಿದೆ. ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್ಗೆ ನಿವೃತ್ತಿ ಹೇಳಿದ ಕಾರಣ ಭಾರತ ತಂಡದ ಟಿ20 ನಾಯಕತ್ವ ಸೂರ್ಯಕುಮಾರ್ ಹೆಗಲೇರಿದೆ. ಅವರ ಪೂರ್ಣ ಪ್ರಮಾಣದ ನಾಯಕತ್ವದಲ್ಲಿ ಆಡಿದ್ದ ಕಳೆದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಿಂದ ಗೆದ್ದು ಬೀಗಿತ್ತು.
ಶ್ರೇಯಸ್ ಅಯ್ಯರ್ ‘ಸಿಯೆಟ್ ಅವಾರ್ಡ್ಸ್'(CEAT Cricket Awards)ನಲ್ಲಿ ವರ್ಷದ T20 ನಾಯಕತ್ವ ಪ್ರಶಸ್ತಿಯನ್ನು ಗೆದಿದ್ದರು. ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ತಂಡವನ್ನು 2 ಬಾರಿ ಫೈನಲ್ ತಲುಪಿಸಿದ ಸಾಧನೆಗೆ ಈ ಪ್ರಶಸ್ತಿ ಲಭಿಸಿತ್ತು. ಶ್ರೇಯಸ್ ಅಯ್ಯರ್ ಅವರು ಐಪಿಎಲ್ನಲ್ಲಿ ಡೆಲ್ಲಿ ತಂಡದ ನಾಯಕನಾಗಿ ತಂಡವನ್ನು ಒಮ್ಮೆ ಫೈನಲ್ ತಲುಪಿಸಿದ್ದರು. ಅಲ್ಲಿ ಮುಂಬೈ ವಿರುದ್ಧ ತಂಡ ಸೋಲು ಕಂಡು ರನ್ನರ್ ಅಪ್ ಪ್ರಶಸ್ತಿ ಪಡೆದಿತ್ತು. ಈ ಬಾರಿಯ ಆವೃತ್ತಿಯಲ್ಲಿ ಕೆಕೆಆರ್ ತಂಡದ ನಾಯಕನಾಗಿ ಟ್ರೋಫಿ ಗೆದ್ದ ಸಾಧನೆ ಮಾಡಿದ್ದರು.
ಅಯ್ಯರ್ ಇದುವೆರೆಗೆ 115 ಐಪಿಎಲ್ ಪಂದ್ಯವನ್ನಾಡಿ 3127 ರನ್ ಬಾರಿಸಿದ್ದಾರೆ. ಇದರಲ್ಲಿ 21 ಅರ್ಧಶತಕ ಒಳಗೊಂಡಿದೆ. 96 ಗರಿಷ್ಠ ವೈಯಕ್ತಿ ಮೊತ್ತವಾಗಿದೆ. ಭಾರತ ತಂಡದ ಪರ 51 ಟಿ20, 62 ಏಕದಿನ ಮತ್ತು 14 ಟೆಸ್ಟ್ ಪಂದ್ಯಗಳನ್ನಾಡಿ ಒಟ್ಟು 4,336 ರನ್ ಗಳಿಸಿದ್ದಾರೆ. ಟೆಸ್ಟ್ನಲ್ಲಿ 1, ಏಕದಿನದಲ್ಲಿ 5 ಶತಕ ಬಾರಿಸಿದ್ದಾರೆ.