Site icon Vistara News

Jofra Archer: ಟಿ20 ವಿಶ್ವಕಪ್​ ಮೂಲಕ ಮತ್ತೆ ಕ್ರಿಕೆಟ್​ ಕಮ್​ಬ್ಯಾಕ್​ ಮಾಡಲಿದ್ದಾರೆ ಜೋಫ್ರಾ ಆರ್ಚರ್

Jofra Archer

ಲಂಡನ್​: ಮೊಣಕೈ ಗಾಯಕ್ಕೆ ತುತ್ತಾಗಿರುವ ಇಂಗ್ಲೆಂಡ್ ತಂಡದ ಪ್ರಮುಖ ಬೌಲರ್ ಜೋಫ್ರಾ ಆರ್ಚರ್(Jofra Archer) ಅವರು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳುವ ಸಿದ್ಧತೆಯಲ್ಕಿದ್ದಾರೆ. ಇದೇ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್(T20 World Cup 2024)​ ಆಡುವ ಸಲುವಾಗಿ ಟೆಸ್ಟ್​ ಕ್ರಿಕೆಟ್​ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಆರ್ಚರ್​ ಅವರು 2019ರ ಏಕದಿನ ವಿಶ್ವಕಪ್​ ಬಳಿಕ ಗಾಯದ ಸಮಸ್ಯೆಗೆ ಸಿಲುಕಿದ್ದರು. ಕೆಲವು ಬಾರಿ ಚೇತರಿಕೆ ಕಂಡರೂ ಕೂಡ ಪದೇಪದೆ ಗಾಯಕ್ಕೀಡಾಗುತ್ತಲೇ ಇದ್ದರು. ಇದೇ ಕಾರಣದಿಂದ ಅವರು ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿಯೂ ಸ್ಥಾನ ಪಡೆಯಲು ವಿಫಲರಾಗಿದ್ದರು. ಆರ್ಚರ್​ ಕಳೆದ ಒಂದುವರೆ ವರ್ಷದಿಂದ ಇಂಗ್ಲೆಂಡ್​ ಪರ ಏಕದಿನ ಆಡಿಲ್ಲ. ಕೊನೆಯ ಬಾರಿ ಟೆಸ್ಟ್​ ಆಡಿದ್ದು 2021ರಲ್ಲಿ. ಭಾರತ ವಿರುದ್ಧದ ಸರಣಿಯಲ್ಲಿ. ಗಾಯದಿಂದ ಬಳಲುತ್ತಿದ್ದ ಆರ್ಚರ್ ಶಸ್ತ್ರಚಿಕಿತ್ಸೆ ಬಳಿಕ​, ಈ ಹಿಂದೊಮ್ಮೆ ತಾನು ಮತ್ತೆ ಗಾಯಕ್ಕೀಡಾದರೆ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದರು.

ಇದನ್ನೂ ಓದಿ IPL 2024: ಈ ಬಾರಿಯ ಐಪಿಎಲ್​ನಲ್ಲಿ ಭಾರೀ ಭದ್ರತಾ ವೈಫಲ್ಯ; ಕೊಹ್ಲಿ ಪ್ರಾಣಕ್ಕೆ ಮತ್ತೆ ಕುತ್ತು

ಗಾಯದಿಂದ ಸಂಪೂರ್ಣ ಚೇತರಿಕೆ ಕಂಡಿರುವ ಆರ್ಚರ್​ ಈ ವರ್ಷ ನಡೆಯುವ ಟಿ20 ವಿಶ್ವಕಪ್​ ಆಡುವ ಆತ್ಮವಿಶ್ವಾಸದಲ್ಲಿದ್ದಾರೆ. ಇದಕ್ಕಾಗಿ ಪೂರ್ವಾಭ್ಯಾಸ ಕೂಡ ನಡೆಸುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಎನ್​ಸಿಎಯಲ್ಲಿ ಬೌಲಿಂಗ್​ ಅಭ್ಯಾಸ ಕೂಡ ನಡೆಸಿದ್ದರು. ಆರ್ಚರ್​ ಕಮ್​ಬ್ಯಾಕ್​ ಬಗ್ಗೆ ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡದ ಆಡಳಿತ ನಿರ್ದೇಶಕ ರಾಬ್ ಕೀ ಕೂಡ ಬಲವಾದ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ನಾವು ಆರ್ಚರ್ ಅವರ ಬೌಲಿಂಗ್​ ಸೇವೆಯನ್ನು ದೀರ್ಘಾವಧಿ ಬದಲಿಗೆ ಸೀಮಿತ ಅವಧಿಯ ಕ್ರಿಕೆಟ್​ಗೆ ಬಳಸಿಕೊಳ್ಳಲು ಬಯಸಿದ್ದೇವೆ. ಜೋಫ್ರಾ ಈ ಋತುವಿನಲ್ಲಿ ಹೆಚ್ಚು ಸೀಮಿತ ಓವರ್ ಕ್ರಿಕೆಟ್​ ಮಾತ್ರ ಆಡಲಿದ್ದಾರೆ’ ಎಂದು ರಾಬ್ ಕೀ ಹೇಳಿದರು.

ಆರ್ಚರ್​ ಕ್ರಿಕೆಟ್​ ಸಾಧನೆ


ಜೋಫ್ರಾ ಆರ್ಚರ್​ ಅವರು 2019ರಲ್ಲಿ ಇಂಗ್ಲೆಂಡ್​ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇದುವರೆಗೆ 13 ಟೆಸ್ಟ್​ ಪಂದ್ಯ ಆಡಿ 42 ವಿಕೆಟ್​ ಕಿತ್ತಿದ್ದಾರೆ. ಏಕದಿನದಲ್ಲಿಯೂ 42 ವಿಕೆಟ್​ ಕಿತ್ತಿದ್ದಾರೆ. ಟಿ20ಯಲ್ಲಿ 18 ವಿಕೆಟ್​ ಪಡೆದಿದ್ದಾರೆ. ಐಪಿಎಲ್​ನಲ್ಲಿ 48 ವಿಕೆಟ್​ ಪಡೆದಿದ್ದಾರೆ.

ಟಿ20 ವಿಶ್ವಕಪ್​(T20 World Cup 2024) ಟೂರ್ನಿ ಜೂನ್ 1 ರಿಂದ 29 ರ ವರೆಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

Exit mobile version