ನವದೆಹಲಿ: ಭಾರತ ಮತ್ತು ಪಾಕ್(IND vs PAK) ಪಂದ್ಯದ ವೇಳೆ ಟೀಮ್ ಇಂಡಿಯಾದ ಯುವ ವೇಗಿ ಅರ್ಶ್ದೀಪ್ ಸಿಂಗ್ ವಿರುದ್ಧ ನೇರ ಪ್ರಸಾರದಲ್ಲೇ ಜನಾಂಗೀಯ ನಿಂದನೆ ಮಾಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಕಮ್ರಾನ್ ಅಕ್ಮಲ್ಗೆ(Kamran Akmal) ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್(Harbhajan Singh) ಜಾಡಿಸಿದ್ದಾರೆ.
ಅರ್ಶ್ದೀಪ್ ಅವರು ಪಂದ್ಯದ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದ ವೇಳೆ ಅಕ್ಮಲ್ “ಕುಚ್ ಭೀ ಹೋ ಸಕ್ತಾ ಹೈ.. 12 ಬಜ್ ಗಯೇ ಹೈ (ಏನು ಬೇಕಾದರೂ ಸಂಭವಿಸಬಹುದು. 12 ರ ನಂತರ ಯಾವುದೇ ಸಿಖ್ಖರನ್ನು ನೀಡಲಾಗುವುದಿಲ್ಲ) ಎಂದು ಸಿಕ್ಖ್ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಅಕ್ಮಲ್ ಅವರ ಹೇಳಿಕೆಗೆ ಹರ್ಭಜನ್ ಸಿಂಗ್(Harbhajan Singh slams Kamran Akmal) ಅವರು ಟ್ವೀಟ್ ಮಾಡಿ ತಿರುಗೇಟು ನೀಡಿದ್ದರು. ‘ನಿಮ್ಮ ಕೊಳಕು ಬಾಯಿ ತೆರೆಯುವ ಮೊದಲು ನೀವು ಸಿಖ್ಖರ ಇತಿಹಾಸವನ್ನು ಮೊದಲು ತಿಳಿದುಕೊಳ್ಳಬೇಕು. ನಾವು ಸಿಖ್ಖರು ನಿಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಆಕ್ರಮಣಕಾರರು ಅಪಹರಿಸಿದಾಗ ಅವರನ್ನು ರಕ್ಷಿಸಿದ್ದೇವೆ. ನಿಮಗೆ ನಾಚಿಕೆಯಾಗಬೇಕು… ಸ್ವಲ್ಪ ಕೃತಜ್ಞತೆ ಇರಲಿ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ IND vs PAK: ಟ್ರ್ಯಾಕ್ಟರ್ ಮಾರಿ ಭಾರತ-ಪಾಕ್ ಪಂದ್ಯ ವೀಕ್ಷಿಸಿ ಕಣ್ಣೀರು ಹಾಕಿದ ಅಭಿಮಾನಿ
ಕ್ಷಮೆ ಕೇಳಿದ ಅಕ್ಮಲ್
ವಿವಾದಾತ್ಮಕ ಹೇಳಿಕೆಗೆ ಭಾರೀ ಟಿಕೆ ಮತ್ತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕಮ್ರಾನ್ ಅಕ್ಮಲ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕ್ಷಮೆ ಯಾಚಿಸಿದ್ದಾರೆ. “ಇತ್ತೀಚಿನ ನನ್ನ ಹೇಳಿಕೆಗೆ ಹರ್ಭಜನ್ ಸಿಂಗ್ ಮತ್ತು ಸಿಕ್ಖ್ ಸಮುದಾಯದ ಬಳಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ನನ್ನ ಮಾತುಗಳು ಅಗೌರವ ಮತ್ತು ಅಸಮರ್ಪಕ. ವಿಶ್ವಾದ್ಯಂತ ಇರುವ ಸಿಕ್ಖ್ ಸಮುದಾಯದ ಮೇಲೆ ನನಗೆ ಅಪಾರ ಗೌರವ ಇದೆ. ಯಾರನ್ನೂ ನೋಯಿಸುವ ಉದ್ದೇಶ ನನಗೆ ಇರಲಿಲ್ಲ. ನಿಜವಾಗಿಯೂ ಕ್ಷಮೆ ಯಾಚಿಸುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ.
ಭಾನುವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಪಾಕ್ ಬೌಲರ್ಗಳ ನಿಖರ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ ಕೇವಲ 119 ರನ್ನಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಪಾಕ್ ಕೂಡ ಭಾರತದ ಬೌಲಿಂಗ್ ದಾಳಿಗೆ ನಲುಗಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಸೋಲು ಕಂಡಿತು. ಮೊಹಮ್ಮದ್ ರಿಜ್ವಾನ್(31) ಒಂದು ಹಂತದ ವರೆಗೆ ಭಾರತೀಯ ಬೌಲರ್ಗಳನ್ನು ಕಾಡಿದರೂ ಕೂಡ ಬುಮ್ರಾ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಇಲ್ಲಿಂದ ಪಾಕ್ ಕುಸಿತ ಕೂಡ ಆರಂಭವಾಯಿತು. ಭಾರತ ಪಂದ್ಯವನ್ನು ಗೆದ್ದು ಬೀಗುವಲ್ಲಿ ಯಶಸ್ಸು ಕಂಡಿತು.
ಸೂಪರ್-8ಗೆ ಪ್ರವೇಶಿಸಲು ಪಾಕಿಸ್ತಾನ ತಂಡವು ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಅಷ್ಟೇ ಅಲ್ಲದೆ ಯುಎಸ್‌ಎ ಮತ್ತು ಕೆನಡಾ ತಂಡಗಳು ಗುಂಪು ಹಂತದಲ್ಲಿ ಉಳಿದ ಪಂದ್ಯಗಳಲ್ಲಿ ಸೋಲು ಕಾಣಬೇಕು. ಅಮೆರಿಕ ಮುಂದಿನ 2 ಪಂದ್ಯಗಳಲ್ಲಿ ಸೋಲು ಕಂಡು, ಪಾಕ್ 2 ಪಂದ್ಯ ಗೆದ್ದರೆ ಉಭಯ ತಂಡಗಳಿಗೆ ತಲಾ 4 ಅಂಕ ಆಗಲಿದೆ. ಹೀಗಾಗಿ ಪಾಕ್ಗೆ ಕೇವಲ ಗೆಲುವು ಮಾತ್ರ ಸಾಲದು ಜತೆಗೆ ರನ್ರೇಟ್ ಕೂಡ ಬೇಕಾಗಿದೆ. ಅಮೆರಿಕ ಮತ್ತು ಭಾರತ ಮುಂದಿನ ಪಂದ್ಯದಲ್ಲಿ ಗೆದ್ದರೆ ಪಾಕ್ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.