Site icon Vistara News

KC Cariyappa Love Case : ಮದುವೆ ಆಗುವುದಾಗಿ ಅಬಾರ್ಷನ್‌ ಮಾಡಿಸಿ ಕೈಕೊಟ್ರಾ ಕ್ರಿಕೆಟರ್‌ ಕಾರಿಯಪ್ಪ!

KC Cariyappa Love Case

ಬೆಂಗಳೂರು: ಮದುವೆ ಆಗುವುದಾಗಿ ಹೇಳಿ ಕ್ರಿಕೆಟಿಗ ಕೆ.ಸಿ ಕಾರಿಯಪ್ಪ (KC Cariyappa Love Case) ವಂಚಿಸಿದ್ದಾರೆ ಎಂದು ಮಾಜಿ ಪ್ರಿಯತಮೆ ಠಾಣೆ ಮೆಟ್ಟಿಲೇರಿದ್ದರೆ, ಇತ್ತ ಕುಟುಂಬಸ್ಥರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಿಯತಮೆ ವಿರುದ್ಧ ಕೆ.ಸಿ ಕಾರಿಯಪ್ಪ ದೂರು ನೀಡಿದ್ದಾರೆ.

ಐಪಿಎಲ್‌ನಲ್ಲಿರುವ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಆಯ್ಕೆಯಾಗಿರುವ ಕೆ.ಸಿ ಕಾರಿಯಪ್ಪ ನನ್ನ ಮದುವೆ ಆಗುವುದಾಗಿ ಹೇಳಿ, ನನ್ನಿಂದ ಆಗಾಗ ಹಣವನ್ನು ಪಡೆದು ಮೋಸ ಮಾಡಿದ್ದಾನೆ ಎಂದು ದಿವ್ಯಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ದೂರಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಹೇಳಿಕೆ ಕೊಟ್ಟಿರುವ ದಿವ್ಯಾ, ಕಾರಿಯಪ್ಪ ಪ್ರೀತಿಯ ನಾಟಕವಾಡಿ ನನ್ನ ಜತೆ ದೈಹಿಕ ಸಂರ್ಪಕ ಬೆಳೆಸಿ, ಗರ್ಭಿಣಿಯನ್ನಾಗಿಸಿದ್ದ. ಮದುವೆ ಆಗು ಎಂದು ಹೇಳಿದರೆ ನಾನು ನಿನ್ನ ಜತೆ ಬ್ರೇಕ್‌ ಆಪ್‌ ಮಾಡಿಕೊಳ್ಳುತ್ತೇನೆ. ನೀನು ಬೇರೆಯವರನ್ನು ಮದುವೆ ಆಗು ಎಂದು ಕೈಕೊಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.

ಆಕೆ ಡ್ರಗ್‌ ಅಡಿಕ್ಟ್ ಕೆ.ಸಿ ಕಾರ್ಯಪ್ಪ ಆರೋಪ

ದಿವ್ಯಾ ಡ್ರಗ್ಸ್‌ ಅಡಿಕ್ಟ್ ಆಗಿದ್ದಾಳೆ. ಜತೆಗೆ ಅವಳ ಕ್ಯಾರೆಕ್ಟರ್‌ ಸರಿ ಇರಲಿಲ್ಲ. ಹೀಗಾಗಿ ನಾನು ಬ್ರೇಕ್‌ ಅಪ್‌ ಮಾಡಿಕೊಂಡಿದ್ದೆ ಎಂದು ಕ್ರಿಕೆಟರ್‌ ಕಾರ್ಯಪ್ಪ ದೂರಿದ್ದಾರೆ. ದಿವ್ಯಾ ಒಂದುವರೆ ವರ್ಷದ ಹಿಂದೆ ಸೋಶಿಯಲ್‌ ಮೀಡಿಯಾ ಮೂಲಕ ದಿಶಾ ಪರಿಚಯವಾಗಿದ್ದರು. ಒಂದೇ ಊರಿನವರು ಎಂಬ ಕಾರಣಕ್ಕೆ ಹತ್ತಿರವಾಗಿದ್ದೆವು. ನಂತರ ನಮ್ಮಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ ಕಾಲ ಕಳೆದಂತೆ ದಿವ್ಯಾಳಿಗೆ ಮೊದಲೊಂದು ಮದುವೆ ಆಗಿ ಡಿವೋರ್ಸ್‌ ಆಗಿರುವ ವಿಚಾರ ತಿಳಿದುಬಂತು. ಆಕೆ ಈ ವಿಚಾರವನ್ನು ಮುಚ್ಚಿಟ್ಟು ನನಗೆ ಮೋಸ ಮಾಡಿದ್ದಾಳೆ ಕಾರ್ಯಪ್ಪ ಆರೋಪಿಸಿದ್ದಾರೆ.

ದಿವ್ಯಾಳ ಕ್ಯಾರೆಕ್ಟರ್ ಸರಿ ಇಲ್ಲದ ಕಾರಣಕ್ಕೆ ಹಾಗೂ ಡ್ರಗ್ಸ್‌, ಮದ್ಯ ವ್ಯಸನಿಯಾಗಿರುವುದರಿಂದ ಹಲವಾರು ಸಾರಿ ಬುದ್ಧಿವಾದವನ್ನು ಹೇಳಿದ್ದೆ. ಕೇಳದೆ ಇದ್ದಾಗ ಬ್ರೇಕ್‌ ಅಪ್‌ ಮಾಡಿಕೊಂಡಿದ್ದೆ ಎಂದು ಕಾರ್ಯಪ್ಪ ತಿಳಿಸಿದ್ದಾರೆ. ಬ್ರೇಕ್‌ ಆಪ್‌ ಮಾಡಿಕೊಂಡ ಕಾರಣಕ್ಕೆ ಕೋಪಗೊಂಡ ದಿವ್ಯಾ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ಕಳೆದ ವರ್ಷ ದೂರನ್ನೂ ನೀಡಿದ್ದಳು. ಆದರೆ ನಂತರ ಕೇಸಿನಲ್ಲಿ ನ್ಯಾಯಾಲಯಕ್ಕೆ ಬಿ ವರದಿಯನ್ನು ಸಲ್ಲಿಸಲಾಗಿತ್ತು ಎಂದಿದ್ದಾರೆ ಕಾರ್ಯಪ್ಪ.

ಇದಾದ ನಂತರವೂ ದಿವ್ಯಾ ಪದೇಪದೆ ನನಗೆ ಕಿರುಕುಳ ನೀಡುತ್ತಾ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನಿನ್ನ ಕ್ರಿಕೆಟ್ ಕೆರಿಯರ್‌ ಅನ್ನು ಹಾಳು ಮಾಡುತ್ತೇನೆ ಎಂದು ಬ್ಲಾಕ್‌ಮೇಲ್‌ ಮಾಡುತ್ತಿದ್ದಳು ಎಂದು ಕಾರ್ಯಪ್ಪ ಆರೋಪಿಸಿದ್ದಾರೆ. ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ, ನಿನ್ನ ಬಗ್ಗೆ ಕೆಟ್ಟದಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶಗಳನ್ನು ಹಾಕುತ್ತೇನೆಂದು ಬೆದರಿಸುತ್ತ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಳು ವೃತ್ತಿ ಜೀವನ ಹಾಳಾಗುತ್ತದೆ ಎಂಬ ಕಾರಣಕ್ಕೆ ಆಕೆಯ ಕಿರುಕುಳವನ್ನು ಸಹಿಸಿಕೊಂಡು ಬಂದಿದ್ದೆ ಎಂದು ಕಾರ್ಯಪ್ಪ ಹೇಳಿಕೆ ನೀಡಿದ್ದಾರೆ.

ಕಳೆದ ಡಿ. 22ರಂದು ದಿಶಾ ಏಕಾಏಕಿ ನಮ್ಮ ಮನೆಯೊಳಗೆ ನುಗ್ಗಿ ಕಿರುಚಾಡಿ, ಅವಾಚ್ಯ ಶಬ್ದಗಳಿಂದ ನನ್ನನ್ನು ಹಾಗೂ ನನ್ನ ಪೋಷಕರನ್ನು ನಿಂದಿಸಿದ್ದಾಳೆ. ಮಾತ್ರವಲ್ಲದೇ ಆನ್‌ಲೈನ್‌ ಮೂಲಕ ಚಾಕು ತರಿಸಿಕೊಂಡು ಚುಚ್ಚಿಕೊಂಡು ಸಾಯುವುದಾಗಿ ಬೆದರಿಕೆಯನ್ನು ಹಾಕಿದ್ದಳು ಎಂದು ಕಾರ್ಯಪ್ಪ ಆರೋಪಿಸಿದ್ದಾರೆ. ಹೀಗಾಗಿ ಆಕೆಯ ವಿರುದ್ಧ ದೂರು ನೀಡಿದ್ದಾಗಿ ತಿಳಿಸಿದ್ದಾರೆ.

ಬಲವಂತವಾಗಿ ಅಬಾರ್ಷನ್‌ ಮಾತ್ರೆ ಕೊಟ್ಟರು: ದಿವ್ಯಾ ಪ್ರತ್ಯಾರೋಪ

ಕ್ರಿಕೆಟರ್‌ ಕಾರ್ಯಪ್ಪರ ಆರೋಪಕ್ಕೆ ದಿವ್ಯಾ ಕೂಡ ಪ್ರತ್ಯಾರೋಪ ಮಾಡಿದ್ದಾರೆ. ಮದುವೆ ಆಗುವುದಾಗಿ ನಂಬಿಸಿ ನನ್ನನ್ನು ಪ್ರೆಗ್ನೆಂಟ್‌ ಮಾಡಿ, ಬಲವಂತವಾಗಿ ಮಾತ್ರೆ ಕೊಟ್ಟು ಅಬಾರ್ಷನ್‌ ಮಾಡಿಸಿದ್ದಾನೆ ಎಂದು ಆರೋಪಿಸಿದ್ದಾರೆ. 2018ರಲ್ಲಿ ನನಗೆ ಮದುವೆ ಆಗಿತ್ತು, ಆದರೆ ಕಾರಣಾಂತರಗಳಿಂದ 2020ರಲ್ಲಿ ಡಿವೋರ್ಸ್ ಪಡೆದುಕೊಂಡೆ ಎಂದು ತನ್ನ ಬದುಕಿನ ಕಥೆ ಹೇಳಿದ್ದಾರೆ.

ಒಂದೂವರೆ ವರ್ಷದ ಹಿಂದೆ ಇನ್‌ಸ್ಟಾಗ್ರಾಮ್‌ ಮೂಲಕ ಕೆಸಿ ಕಾರ್ಯಪ್ಪ ಪರಿಚಯವಾಗಿದ್ದರು. ಮೊದಮೊದಲು ನನಗೆ ಗರ್ಲ್‌ ಫ್ರೆಂಡ್‌ ಇದ್ದಾಳೆ, ಆದರೆ ಆಕೆಯೊಂದಿಗೆ ನಾನು ಬ್ರೇಕ್‌ ಆಪ್‌ ಮಾಡಿಕೊಂಡಿದ್ದೀನಿ. ನೀನು ಅಂದರೆ ನನಗೆ ಇಷ್ಟ, ನಾವಿಬ್ಬರು ಒಂದೇ ಸಮುದಾಯದವರು. ಮದುವೆ ಆಗೋಣಾ ಎಂದು ಕಾರ್ಯಪ್ಪ ನಂಬಿಸಿದ್ದ. ಹೀಗಾಗಿ ಇಬ್ಬರೂ ಪರಸ್ಪರ ಒಪ್ಪಿಕೊಂಡು ದೈಹಿಕ ಸಂರ್ಪಕವನ್ನೂ ಬೆಳೆಸಿದ್ದೆವು. ನಾನು ಗರ್ಭ ಧರಿಸಿದಾಗ ಈಗಲೇ ಮಗು ಬೇಡ ಎಂದು ಬಲವಂತವಾಗಿ ಮಾತ್ರೆ ಕೊಟ್ಟು ಗರ್ಭಪಾತ ಮಾಡಿಸಿದ್ದ. ಹೀಗಾಗಿ ನಾನು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ನಂತರ ಕಾರ್ಯಪ್ಪ ನನ್ನನ್ನು ಪುಸಲಾಯಿಸಿ ಮನವಿ ಮಾಡಿಕೊಂಡಿದ್ದರಿಂದ ದೂರು ವಾಪಸ್‌ ಪಡೆದುಕೊಂಡಿದ್ದೆ ಎಂದು ದಿವ್ಯಾ ತಿಳಿಸಿದ್ದಾರೆ.

ಬಳಿಕ ಕಾರ್ಯಪ್ಪ ನನ್ನಿಂದ ತಪ್ಪಾಗಿದೆ, ನಾವಿಬ್ಬರೂ ಮದುವೆ ಮಾಡಿಕೊಂಡು ಜೀವನ ಮಾಡೋಣವೆಂದು ಹೇಳಿ, ನನ್ನಿಂದ ಹಂತಹಂತವಾಗಿ 2 ಲಕ್ಷ ಹಣವನ್ನು ಪಡೆದುಕೊಂಡಿದ್ದ ಎಂದು ದಿವ್ಯಾ ಆರೋಪಿಸಿದ್ದಾರೆ. ಇತ್ತೀಚೆಗೆ ಮದುವೆ ಬಗ್ಗೆ ಪ್ರಸ್ತಾಪ ಮಾಡಿದಾಗ ಕಾರ್ಯಪ್ಪ ಹಿಂದೇಟು ಹಾಕಿ, ನೀನೊಬ್ಬಳು ಡ್ರಗ್ಸ್‌ ಆಡಿಕ್ಟ್‌ ಎಂದು ದೂರ ಮಾಡಲು ಮುಂದಾದರು. ನಾನು ಡ್ರಗ್ಸ್‌ ಆಡಿಕ್ಟ್‌ ಆದರೆ ನನ್ನ ಬ್ಲಡ್‌ ಚೆಕ್‌ ಅಪ್‌ ಮಾಡಿಸಲಿ ಎಂದು ದಿವ್ಯಾ ಸವಾಲು ಹಾಕಿದ್ದಾರೆ.

ಈ ನಡುವೆ ಕಾರ್ಯಪ್ಪನ ಪೋಷಕರು ನೀನು ಡಿವೋರ್ಸ್ ಆದವಳು, ನನ್ನ ಮಗನನ್ನು ಮದುವೆ ಮಾಡಿಕೊಳ್ಳಬೇಡ ಎಂದು ಅವಾಚ್ಯವಾಗಿ ನಿಂದಿಸಿದ್ದರು. ನಂತರ ಮನೆಗೆ ಬಂದ ಕಾರ್ಯಪ್ಪ, ನೀನು ಡಿವೋರ್ಸಿ, ನಿನ್ನನ್ನು ಕಂಡರೆ ನನಗೆ ಇಷ್ಟವಿಲ್ಲ, ಮದುವೇ ಆಗಲ್ಲ ಎಂದು ನನ್ನ ಮೇಲೆ ಹಲ್ಲೆ ಮಾಡಿ, ಬೆದರಿಕೆ ಹಾಕಿ ಮೋಸ ಮಾಡಿದ್ದಾರೆ ಎಂದು ದಿವ್ಯ ದೂರು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version