Site icon Vistara News

KKR vs SRH: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಕೆಕೆಆರ್​

Andre Russell is pumped up after dismissing a well-set Abhishek Sharma

ಕೋಲ್ಕತ್ತಾ: ಅತ್ಯಂತ ರೋಚಕವಾಗಿ, ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಶನಿವಾರದ ದ್ವಿತೀಯ ಐಪಿಎಲ್​ ಪಂದ್ಯದಲ್ಲಿ ಕೊನೆಗೂ ಕೋಲ್ಕತ್ತಾ ನೈಟ್ ರೈಡರ್ಸ್(KKR vs SRH) ತಂಡದ ಕೈ ಮೇಲಾಗಿದೆ. ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ 4 ರನ್​​ ಅಂತರದಿಂದ ಗೆದ್ದು ನಿಟ್ಟುಸಿರುಬಿಟ್ಟಿದೆ. ಕೆಕೆಆರ್​ ಪರ ವಿಂಡೀಸ್​ ದೈತ್ಯ ಆ್ಯಂಡ್ರೆ ರಸೆಲ್(64* ರನ್​ ಹಾಗೂ 2 ವಿಕೆಟ್​)​ ಅವರ ಆಲ್​ರೌಂಡರ್​ ಪ್ರದರ್ಶನ ಮತ್ತು ಹೈದರಾಬಾದ್​ ಪರ ಹೆನ್ರಿಕ್‌ ಕ್ಲಾಸೆನ್‌(63) ಅಸಾಮಾನ್ಯ ಬ್ಯಾಟಿಂಗ್​ ಪಂದ್ಯದ ಪ್ರಮುಖ ಹೈಲೆಟ್ಸ್​ ಆಗಿತ್ತು.

ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಸ್ಟೇಡಿಯಂನಲ್ಲಿ ನಡೆದ ಬೃಹತ್​ ಮೊತ್ತದ ಪಂದ್ಯಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಕೆಕೆಆರ್(Kolkata Knight Riders)​ 7 ವಿಕೆಟ್​ಗೆ 208 ರನ್​ ಬಾರಿಸಿತು. ಬೃಹತ್​ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿಕೊಂಡು ಹೋದ ಹೈದರಾಬಾದ್(Sunrisers Hyderabad)​ ತನ್ನ ಪಾಲಿನ ಆಟದಲ್ಲಿ 7 ವಿಕೆಟ್ ಕಳೆದುಕೊಂಡು 204 ರನ್​ ಗಳಿಸಿ ಕೇವಲ 4 ರನ್​ ಅಂತರದಿಂದ ಸೋಲು ಕಂಡಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿಕೊಂಡು ಹೋದ ಹೈದರಾಬಾದ್ ಅಂತಿಮ ಮೂರು ಓವರ್​ನಲ್ಲಿ ಗೆಲುವಿಗೆ 60 ರನ್ ಬೇಕಿದ್ದಾಗ ಶಕ್ತಿ ಮೀರಿ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಹೆನ್ರಿಕ್‌ ಕ್ಲಾಸೆನ್‌ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದರು. ಅಂತಿಮ ಓವರ್​ನಲ್ಲಿ ಗೆಲುವಿಗೆ 13 ರನ್​ ಇದ್ದಾಗ ಸಿಕ್ಸರ್​ ಬಾರಿಸಿದ ಕ್ಲಾಸೆನ್‌ ಮುಂದಿನ ಎಸೆತದಲ್ಲಿ ಒಂದು ರನ್​ ತೆಗೆದರು. ಆದರೆ ಮುಂದಿನ ಎಸೆತದಲ್ಲಿ ಶಹಬಾಜ್ ಅಹ್ಮದ್​ ವಿಕೆಟ್​ ಕೈಚೆಲ್ಲಿದರು. ಬಳಿಕ ಬಂದ ಜಾನ್ಸೆನ್​ ಒಂದು ರನ್​ ತೆಗೆದು ಮತ್ತೆ ಕ್ಲಾಸೆನ್​ಗೆ ಕ್ರೀಸ್​ ನೀಡಿದರು. 2 ಎಸೆತಗಳ ಮುಂದೆ 5 ರನ್​ ತೆಗೆಯುವ ಸವಾಲನ್ನು ಕ್ಲಾಸೆನ್ ಮೆಟ್ಟಿನಿಂತು ಹೈದರಾಬಾದ್​​ಗೆ ಸ್ಮರಣೀಯ ಗೆಲುವು ತಂದು ಕೊಡುತ್ತಾರೆ ಎಂದು ನಿರೀಕ್ಷೆ ಮಾಡಿದಾಗಲೇ ಅವರ ವಿಕೆಟ್​ ಕೂಡ ಬಿತ್ತು. ಆದರೂ ಪಂದ್ಯ ಹೈದರಾಬಾದ್​ ಕಡೆಯೇ ಇತ್ತು. ಏಕೆಂದರೆ ಬ್ಯಾಟಿಂಗ್​ಗೆ ಬಂದದ್ದು ಪ್ಯಾಟ್​ ಕಮಿನ್ಸ್​. ಆದರೆ ಅಂತಿಮ ಎಸೆತವನ್ನು​ ಡಾಟ್​ ಎಸೆದ ಹರ್ಷಿತ್​ ರಾಣ ಕೆಕೆಆರ್​ಗೆ ಸ್ಮರಣೀಯ ಗೆಲುವು ತಂದುಕೊಟ್ಟರು.

ಕನ್ನಡಿಗ ಮಯಾಂಕ್​ ಅಗರ್ವಾಲ್​ ಮತ್ತು ಅಭಿಷೇಕ್​ ಶರ್ಮ ಉತ್ತಮ ಆರಂಭ ನೀಡಿದರು. ಈ ಜೋಡಿ ಬಿರುಸಿನ ಬ್ಯಾಟಿಂಗ್​ ನಡೆಸಿ ಮೊದಲ ವಿಕೆಟ್​ಗೆ 60 ರನ್​ ಕಲೆಹಾಕಿತು. ಅಗರ್ವಾಲ್​ 21 ಎಸೆತಗಳಿಂದ 32 ರನ್​ ಬಾರಿಸಿದರೆ, ಅಭಿಷೇಕ್​ ಕೂಡ 32 ರನ್​ ಗಳಿಸಿದರು. ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಯಾರು ಕೂಡ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸುವಲ್ಲಿ ಯಶಸ್ಸು ಕಾಣಲಿಲ್ಲ. ಇದು ತಂಡಕ್ಕೆ ಹಿನ್ನಡೆಯಾಯಿತು. ಕೆಕೆಆರ್​ ಪರ ಬೌಲಿಂಗ್​ನಲ್ಲಿಯೂ ಮಿಂಚಿದ ರೆಸಲ್(Andre Russell)​ 2 ಓವರ್​ ಎಸೆದು 25 ರನ್​ ವೆಚ್ಚದಲ್ಲಿ ಪ್ರಮುಖ 2 ವಿಕೆಟ್​ ಕಿತ್ತರು.

ಸಿಕ್ಸರ್​ಗಳ ಸುರಿಮಳೆಗೈದ ರಸೆಲ್​


ಮೊದಲು ಇನಿಂಗ್ಸ್​ ಆರಂಭಿಸಿದ ಕೆಕೆಆರ್​ ಕೇವಲ 51 ರನ್​ಗೆ 4 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತು. ಸುನೀಲ್ ನರೈನ್(2)​, ನಾಯಕ ಶ್ರೇಯಸ್​ ಅಯ್ಯರ್(0)​, ವೆಂಕಟೇಶ್​ ಅಯ್ಯರ್(7)​, ನಿತೇಶ್​ ರಾಣಾ(9) ಘೋರ ಬ್ಯಾಟಿಂಗ್​ ವೈಫಲ್ಯ ಕಂಡು ಪೆವಿಲಿಯನ್​ ಪರೇಡ್​ ನಡೆಸಿದರು. ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಆರಂಭಿಕ ಆಟಗಾರ ಫಿಲ್​ ಸಾಲ್ಟ್​ ದಿಟ್ಟ ರೀತಿಯಲ್ಲಿ ಬ್ಯಾಟಿಂಗ್​ ನಡೆಸಿ ಅರ್ಧಧತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುತ್ತಿದ್ದರು. ಆದರೆ 54 ರನ್​ ಗಳಿಸಿದ ವೇಳೆ ಇವರ ವಿಕೆಟ್​ ಕೂಡ ಪತನಗೊಂಡಿತು.

119 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ವೇಳೆ ಕ್ರೀಸ್​ಗಿಳಿದ ಆ್ಯಂಡ್ರೆ ರಸೆಲ್ ಸನ್​ರೈಸರ್ಸ್​ ಹೈದರಾಬಾದ್​ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನ ಬಂದಂತೆ ಕಾಡಿದರು. ಅದುವರೆಗೂ ಉತ್ತಮ ಸ್ಪೆಲ್​ ನಡೆಸಿದ್ದ ಬೌಲರ್​ಗಳು ರಸೆಲ್​ ಬ್ಯಾಟಿಂಗ್​ ಮುಂದೆ ಸರಿಯಾಗಿ ಚಚ್ಚಿಸಿಕೊಂಡರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್​ ಬಾರಿಸಿದ ರಸೆಲ್​ ನೆರೆದಿದ್ದ ಅಭಿಮಾನಿಗಳನ್ನು ಸಂಪೂರ್ಣವಾಗಿ ರಂಜಿಸಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು.

ಮಯಾಂಕ್ ಮಾರ್ಖಂಡೆ ಅವರ ಒಂದೇ ಓವರ್​ನಲ್ಲಿ ಮೂರು ಸಿಕ್ಸರ್​ ಬಾರಿಸಿ ಮಿಂಚಿದರು. ಒಟ್ಟಾರೆ ಪಂದ್ಯದಲ್ಲಿ ಬರೋಬ್ಬರಿ 7 ಸಿಕ್ಸರ್​ ಸಿಡಿಸಿದರು. ಜತೆಗೆ ಮೂರು ಬೌಂಡರಿ ಕೂಡ ಬಾರಿಸಿ ಅಜೇಯ 64 ರನ್ ಗಳಿಸಿದರು. ಈ ಮೊತ್ತ 25 ಎಸೆತಗಳಲ್ಲಿ ದಾಖಲಾಯಿತು. ಇವರ ಪ್ರದರ್ಶನಕ್ಕೆ ಫ್ರಾಂಚೈಸಿಯ ಒಡೆಯ ಶಾರುಖ್ ಖಾನ್ ಕೂಡ ಗ್ಯಾಲರಿಂದ ತಲೆಬಾಗಿ ನಮಿಸಿದರು. ಇವರಿಗೆ ಸಿಕ್ಸರ್​ ಕಿಂಗ್​ ಖ್ಯಾತಿಯ ರಿಂಕು ಸಿಂಗ್​ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ನೀಡಿ 15 ಎಸೆತಗಳಲ್ಲಿ 23 ರನ್ ಬಾರಿಸಿದರು.

Exit mobile version