Site icon Vistara News

KL Rahul: 32ನೇ ವಸಂತಕ್ಕೆ ಕಾಲಿಟ್ಟ ಕನ್ನಡಿಗ ಕೆ.ಎಲ್​ ರಾಹುಲ್​; ಬಿಸಿಸಿಐಯಿಂದ ವಿಶೇಷ ಶುಭ ಹಾರೈಕೆ

kl rahul

ಬೆಂಗಳೂರು: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರಿಗೆ ಇಂದು(ಗುರುವಾರ) 32ನೇ ವರ್ಷದ ಜನ್ಮದಿನದ ಸಂಭ್ರಮ. ಹುಟ್ಟು ಹಬ್ಬದ(Happy Birthday KL Rahul) ಸಂತಸದಲ್ಲಿರುವ ರಾಹುಲ್​ಗೆ ಅವರ ಅಭಿಮಾನಿಗಳು, ಹಾಲಿ ಮತ್ತು ಮಾಜಿ ಆಟಗಾರರು ಸೇರಿ ಬಿಸಿಸಿಐ(BCCI) ಕೂಡ ಶುಭ ಹಾರೈಸಿದೆ.

ಕೆ.ಎಲ್‌. ರಾಹುಲ್‌ ಅವರು ಹುಟ್ಟಿದ್ದು ಏಪ್ರಿಲ್​ 18, 1992ರಲ್ಲಿ. ಬೆಂಗಳೂರಿನಲ್ಲಿ ಜನಿಸಿದ ಅವರು ಬಾಲ್ಯ ಕಳೆದದ್ದು ಮಂಗಳೂರಿನಲ್ಲಿ. ತನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸುರತ್ಕಲ್‌ನ ಎನ್‌ಐಟಿಕೆ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದ ಅವರು, ಪಿಯುಸಿ ವಿದ್ಯಾಬ್ಯಾಸವನ್ನು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಪಡೆದರು. ಬಳಿಕ ಕ್ರಿಕೆಟ್​ಗಾಗಿ ಬೆಂಗಳೂರಿನತ್ತ ಮುಖ ಮಾಡಿದ್ದರು. ಎಲ್ಲೇ ಇದ್ದರೂ ಕನ್ನಡದ ಪ್ರೇಮವನ್ನು ಅವರು ಮರೆತಿಲ್ಲ. ಕರ್ನಾಟಕ ಮೂಲದ ಕ್ರಿಕೆಟಿಗರಲ್ಲಿ ಕನ್ನಡವನ್ನೇ ಮಾತನಾಡಿ ಹಲವು ಬಾರಿ ಕನ್ನಡಿಗರ ಮನ ಗೆದ್ದಿದ್ದರು.

ಮಂಗಳೂರಿನಲ್ಲಿ ಅಂಡರ್‌- 13 ಕ್ರಿಕೆಟ್‌ ಪಂದ್ಯಾಟದಲ್ಲಿ ದ್ವಿಶತಕ ಬಾರಿಸಿ ಗಮನಸೆಳೆದಿದ್ದ ರಾಹುಲ್​ ಬಳಿಕ ಕರ್ನಾಟಕ ತಂಡ, ಭಾರತ ಪರ ಆಡಿ ಹಲವು ಸಾಧನೆ ಮಾಡಿದ್ದಾರೆ. ಯಾವುದೇ ಕ್ರಮಾಂಕದಲ್ಲಿಯೂ ಬ್ಯಾಟಿಂಗ್​ ನಡೆಸಬಲ್ಲ ಏಕೈಕ ಆಟಗಾರ ಎಂದರೆ ಅದು ರಾಹುಲ್​. ಜತೆಗೆ ಕೀಪಿಂಗ್​ ಕೂಡ ಮಾಡಬಲ್ಲರು. ಇದುವರೆಗೆ ಭಾರತ ಪರ ಒಟ್ಟು 197 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 7948 ರನ್​ ಬಾರಿಸಿದ್ದಾರೆ. ಇದರಲ್ಲಿ 17 ಶತಕ ಕೂಡ ಒಳಗೊಂಡಿದೆ.

ಇದನ್ನೂ ಓದಿ KL Rahul: ತುಮಕೂರಿನ ಸಿದ್ದಗಂಗಾ ಮಠಕ್ಕೆ ಕೆ.ಎಲ್. ರಾಹುಲ್ ಭೇಟಿ

ಚೊಚ್ಚಲ ಏಕದಿನ ಪಂದ್ಯದಲ್ಲೇ ಶತಕ


ಕೆ.ಎಲ್​ ರಾಹುಲ್​ ಅವರು ಭಾರತ ಪರ ಪದಾರ್ಪಣೆ ಮಾಡಿದ್ದು ಟೆಸ್ಟ್​ ಕ್ರಿಕೆಟ್​ ಆಡುವ ಮೂಲಕ. 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ. ಚೊಚ್ಚಲ ಏಕದಿನ ಪಂದ್ಯವನ್ನು 2016ರಲ್ಲಿ ಜಿಂಬಾಬ್ವೆ ವಿರುದ್ಧ ಆಡಿ ಈ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಮಿಂಚಿದ್ದರು. ಇದೇ ವರ್ಷ ಜಿಂಬಾವ್ವೆ ವಿರುದ್ಧವೇ ಟಿ20 ಕ್ರಿಕೆಟ್​ಗೂ ಅಡಿಯಿರಿಸಿದ್ದರು. ಹಲವು ಸರಣಿಗಳಲ್ಲಿ ಹಂಗಾಮಿ ನಾಯಕನಾಗಿ ಸರಣಿ ಗೆದ್ದ ಸಾಧನೆಯೂ ಇವರದ್ದಾಗಿದೆ. ಸದ್ಯ ಐಪಿಎಲ್​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ನಾಯಕನಾಗಿ ಆಡುತ್ತಿದ್ದಾರೆ.

ಟ್ಯಾಟು ಪ್ರಿಯ, ಅಪಾದ ದೈವ ಭಕ್ತ


ಕ್ರಿಕೆಟ್ ಅಂಗಳದಲ್ಲಿ ರಾಹುಲ್ ಎಷ್ಟು ಸಾಧನೆ ಮಾಡಿದ್ದಾರೋ ಅಂಗಳದಾಚೆ ಅಷ್ಟೇ ಸ್ಟೈಲಿಶ್. ಕೆಎಲ್ ರಾಹುಲ್‌ಗೆ ಟ್ಯಾಟೂಗಳೆಂದರೆ ಪಂಚಪ್ರಾಣ. ರಾಹುಲ್ ಮೈಮೇಲೆ 7 ಟ್ಯಾಟೂಗಳು ಇದ್ದು, ಈ ಏಳೂ ಟ್ಯಾಟೂಗಳ ಹಿಂದೆಯೂ ಕುತೂಹಲಕಾರಿ ಕತೆಯೂ ಇದೆ. ಅಪಾರ ದೈವ ಭಕ್ತರಾಗಿರುವ ರಾಹುಲ್​ ಕ್ರಿಕೆಟ್​ ಬಿಡುವಿನ ವೇಳೆ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ. ಧರ್ಮಸ್ಥಳ ದೇವಾಸ್ಥಾನಕ್ಕೆ ಆಗಾಗ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿರುತ್ತಾರೆ.

Exit mobile version