Site icon Vistara News

WPL 2024: ಡಬ್ಲ್ಯುಪಿಎಲ್​ಗೂ ತಟ್ಟಿದ ಡಿಆರ್​ಎಸ್ ವಿವಾದ; ಅಸಮಾಧಾನ ಹೊರಹಾಕಿದ ಯುಪಿ ತಂಡ

WPL 2024

ಬೆಂಗಳೂರು: ಎಷ್ಟೇ ತಂತ್ರಜ್ಞಾನ ಬಂದರೂ ಕ್ರಿಕೆಟ್​ನಲ್ಲಿ ಅಂಪೈರ್​ಗಳ ಕೆಲ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸುತ್ತದೆ. ಅಲ್ಲದೆ ಇದನ್ನು ಮಾನ್ಯ ಮಾಡುವ ರೀತಿಯೂ ಕೆಲವು ಬಾರಿ ವಿವಾದಕ್ಕೆ ಕಾರಣವಾಗುತ್ತದೆ. ಈ ರೀತಿಯ ತೀರ್ಪಿನಿಂದ ಪಂದ್ಯವನ್ನು ಸೋತ ಮತ್ತು ಆಟಗಾರರು ಅಂಪೈರ್​ ತೀರ್ಪಿಗೆ(DRS Controversy) ಆಕ್ರೋಶ ವ್ಯಕ್ತಪಡಿಸಿದ ಹಲವು ನಿದರ್ಶನವೂ ಇದೆ. ಇದೀಗ ಮಹಿಳಾ ಪ್ರೀಮಿಯರ್​ ಲೀಗ್​(ಡಬ್ಲ್ಯುಪಿಎಲ್​)ನಲ್ಲಿಯೂ(WPL 2024) ಮೂರನೇ ಅಂಪೈರ್​ ತೀರ್ಪಿಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸೋಮವಾರ ನಡೆದಿದ್ದ ಆರ್​ಸಿಬಿ(Royal Challengers Bangalore) ಮತ್ತು ಯುಪಿ ವಾರಿಯರ್ಸ್(UP Warriorz)​ ನಡುವಣ ಪಂದ್ಯದಲ್ಲಿ ಯುಪಿ ತಂಡದ ಆಟಗಾರ್ತಿ ಚಾಮರಿ ಅಟಪಟ್ಟು(Chamari Athapaththu) ಅವರಿಗೆ ಮೂರನೇ ಅಂಪೈರ್​ ನೀಡಿದ ಡಿಆರ್​ಎಸ್​ ಎಲ್​ಬಿಡಬ್ಲ್ಯು ತೀರ್ಪಿನ ಬಗ್ಗೆ ತಂಡದ ನಾಯಕಿ, ಕೋಚ್​ ಸೇರಿ ಹಲವು ಕ್ರಿಕೆಟ್​ ಪಂಡಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ, ಸ್ಮೃತಿ ಮಂಧಾನ(80) ಮತ್ತು ಎಲ್ಲಿಸ್​ ಪೆರ್ರಿ(58) ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ಕೇವಲ 3 ವಿಕೆಟ್​ ನಷ್ಟಕ್ಕೆ 198 ರನ್​ ಬಾರಿಸಿತು. ಯುಪಿ ವಾರಿಯರ್ಸ್ ಈ ಬೃಹತ್​ ಮೊತ್ತವನ್ನು​ ಬೆನ್ನಟ್ಟಲಾರಂಭಿಸಿತು. ಈ ವೇಳೆ ಆರಂಭಿಕ ಆಟಗಾರ್ತಿ ಕಿರಣ್ ನವಗಿರೆ ವಿಕೆಟ್​ ಪತನಗೊಂಡಿದು. ದ್ವಿತೀಯ ವಿಕೆಟ್​ಗೆ ಆಡಲಿಳಿದ ಲಂಕಾದ ಹಾರ್ಟ್ ಹಿಟ್ಟರ್​ ಚಾಮರಿ ಅಟಪಟ್ಟು 8 ರನ್​ ಗಳಸಿದ್ದ ವೇಳೆ ಜಾರ್ಜಿಯಾ ವೇರ್ಹ್ಯಾಮ್ ಅವರ ಎಸೆತವನ್ನು ಲೆಗ್​ಸೈಡ್​ ಕಡೆ ಬಾರಿಸಲು ಮುಂದಾದರು. ಆದರೆ ಚೆಂಡು ನೇರವಾಗಿ ಪ್ಯಾಟ್​ಗೆ ಬಡಿಯಿತು. ಆರ್​ಸಿಬಿ ಆಟಗಾರ್ತಿಯರು ಔಟ್​ಗೆ ಮನವಿ ಮಾಡಿದರು. ಫೀಲ್ಡ್​ ಅಂಪೈರ್​ ಇದನ್ನು ಮಾನ್ಯ ಮಾಡದೆ ನಾಟೌಟ್​ ತೀರ್ಪು ನೀಡಿದರು.

ಇದನ್ನೂ ಓದಿ WPL 2024 Points Table: ಡಬ್ಲ್ಯುಪಿಎಲ್​ನಲ್ಲಿ ಇನ್ನು 9 ಪಂದ್ಯಗಳು ಬಾಕಿ; ಅಂಕಪಟ್ಟಿ ಹೇಗಿದೆ?

ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಸಹ ಆಟಗಾರ್ತಿಯರಲ್ಲಿ ಚರ್ಚಿಸಿ ಡಿಆರ್​ಎಸ್​ ಮೊರೆ ಹೋದರು. ಮೂರನೇ ಅಂಪೈರ್ ಟಿವಿ ರೀಪ್ಲೆಯಲ್ಲಿ​ ಇದನ್ನು ಪರೀಕ್ಷಿಸುವಾಗ ಚೆಂಡು ಪ್ಯಾಡ್​ಗೆ ಬಡಿದು ಲೆಗ್ ಸೈಡ್​ನತ್ತ ಹೋಗುವುದು ಸ್ಪಷ್ಟವಾಗಿ ಕಂಡುಬಂತು. ಆದರೆ, ಪಿಚಿಂಗ್​ ಇನ್​ಸೈಡ್​ ಮಾರ್ಕ್ ಮತ್ತು ಬಾಲ್​ ಟ್ರ್ಯಾಕಿಂಗ್​ನಲ್ಲಿ ಲೆಗ್​ ಸೈಡ್​ಗೆ ಹೋಗಬೇಕಿದ್ದ ಚೆಂಡು ನೇರವಾಗಿ ಚಲಿಸಿ ವಿಕೆಟ್​ಗೆ ಬಡಿಯುತ್ತಿರುವಂತೆ ಕಂಡುಬಂತು. ಹೀಗಾಗಿ ಮೂರನೇ ಅಂಪೈರ್​ ಇದನ್ನು ಔಟ್​ ನೀಡಿದರು.

ಅಂಪೈರ್​ ಅವರ ಈ ನಿರ್ಧಾರ ಕಂಡು ಮೈದಾನದಲ್ಲಿದ್ದ ಯುಪಿ ನಾಯಕಿ ಅಲಿಸ್ಸಾ ಹೀಲಿ ಅರೆ ಇದು ಹೇಗೆ ಸಾಧ್ಯ, ಲೆಗ್​ಸೈಡ್​ ಹೋಗಬೇಕಿದ್ದ ಚೆಂಡು ವಿಕೆಟ್​ಗೆ ಹೇಗೆ ಬಡಿಯಿತು ಎಂದು ವಾಗ್ವಾದ ನಡೆಸಿದರು. ಚಾಮರಿ ಅಟಪಟ್ಟು ಕೂಡ ಈ ತೀರ್ಪಿಗೆ ಬೇಸರಗೊಂಡ ಪೆವಿಲಿಯನ್​ ಕಡೆ ಹೆಜ್ಜೆಹಾಕಿದರು. ಪಂದ್ಯ ಮುಕ್ತಾಯದ ಬಳಿಕ ಯುಪಿ ತಂಡದ ಕೋಚ್​ ಕೂಡ ಈ ತೀರ್ಪಿನ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಈ ಪಂದ್ಯದವನ್ನು ಯುಪಿ 23ರನ್​ ಅಂತರದಿಂದ ಕಳೆದುಕೊಂಡಿತ್ತು. ಈ ತೀರ್ಪು ಕೂಡ ತಂಡದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. ಒಂದೊಮ್ಮೆ ಈ ತೀರ್ಪು ಸರಿಯಾಗುತ್ತಿದ್ದರೆ, ಚಾಮರಿ ಅಟಪಟ್ಟು ಇನಷ್ಟು ರನ್​ ಬಾರಿಸಿ ತಂಡದ ಗೆಲುವಿಗೆ ಕಾರಣವಾಗುವ ಸಾಧ್ಯತೆಯೂ ಇರುತ್ತಿತ್ತು.

Exit mobile version