Site icon Vistara News

Manu Bhaker : ಪ್ಯಾರಿಸ್​ ಒಲಿಂಪಿಕ್ಸ್​​ ಸಮಾರೋಪದಲ್ಲಿ ಮನು ಭಾಕರ್​​ ತ್ರಿವರ್ಣ ಧ್ವಜಧಾರಿ

Paris Olympics 2024

ಬೆಂಗಳೂರು: ಶೂಟಿಂಗ್​ನಲ್ಲಿ ಎರಡು ಪದಕಗಳನ್ನು ಗೆದ್ದಿರುವ ಶೂಟರ್ ಮನು ಭಾಕರ್ (Manu Bhaker) 2024 ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತದ ಧ್ವಜಧಾರಿಯಾಗಿರಲಿದ್ದಾರೆ. ಪ್ಯಾರಿಸ್​​ನಲ್ಲಿ ನಡೆದ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಎರಡು ಒಲಿಂಪಿಕ್ ಪದಕಗಳನ್ನು ಗೆಲ್ಲುವ ಮೂಲಕ 22 ವರ್ಷದ ಆಟಗಾರ್ತಿ ಇತಿಹಾಸ ನಿರ್ಮಿಸಿದ್ದಾರೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಖಾತೆ ತೆರೆದಿದ್ದರು. ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಅವರು ಮತ್ತೊಂದು ಕಂಚಿನ ಪದಕ ಗೆದ್ದಿದ್ದಾರೆ. ಅದೇ ರೀತಿ ಮೂರು ಒಲಿಂಪಿಕ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದ್ದರು. ಆದರೆ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕೂದಲೆಳೆಯ ಅಂತರದಲ್ಲಿ ವಂಚಿತರಾದರು.

ಭಾರತದ ಒಲಿಂಪಿಕ್ ಅಸೋಸಿಯೇಷನ್​ ಅಧಿಕಾರಿಯೊಬ್ಬರು ಮನು ಭಾಕರ್​ ಭಾರತದ ಧ್ವಜಧಾರಿಯಾಗಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ. ಮನು ಕೂಡ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದು ಜವಾಬ್ದಾರಿ ನೀಡಿರುವುದಕ್ಕೆ ಗೌರವವಿದೆ ಎಂದು ಹೇಳಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪ ಸಮಾರಂಭ ಆಗಸ್ಟ್ 11ರಂದು ನಡೆಯಲಿದೆ. ಒಲಿಂಪಿಕ್ಸ್​​ನಲ್ಲಿ ಎರಡು ಪದಕಗಳನ್ನು ಗೆದ್ದ ಪಿ.ವಿ.ಸಿಂಧು ಮತ್ತು ನಾರ್ಮನ್ ಪ್ರಿಚರ್ಡ್ ಸೇರಿದಂತೆ ಎಲೈಟ್ ಪಟ್ಟಿಗೆ 22 ವರ್ಷದ ಮನು ಸೇರಿದ್ದಾರೆ.

ಇದನ್ನೂ ಓದಿ:Graham Thorpe : ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರಹಾಂ ಥಾರ್ಪ್ ನಿಧನ

ಮನು ಅವರನ್ನು ಧ್ವಜಧಾರಿಯಾಗಿ ಆಯ್ಕೆ ಮಾಡಲಾಗಿದೆ. ಅವರು ಒಲಿಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ” ಎಂದು ಐಒಎ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ತಂಡದಲ್ಲಿ ಎಲ್ಲರೂ ಅರ್ಹರಾಗಿದ್ದಾರೆ. ಆದರೆ ನನ್ನನ್ನು ಕೇಳಿದರೆ ಅದು ನಿಜವಾದ ಗೌರವ ಎಂದು ಅಂದುಕೊಳ್ಳುತ್ತೇನೆ” ಎಂದು ಮನು ಪಿಟಿಐಗೆ ತಿಳಿಸಿದ್ದಾರೆ. ಮನು ಆಗಸ್ಟ್ 6, ಮಂಗಳವಾರ ಭಾರತಕ್ಕೆ ಮರಳಲಿದ್ದು, ತನ್ನ ಎರಡು ಕಂಚಿನ ಪದಕಗಳನ್ನು ಮನೆಗೆ ತರಲಿದ್ದಾರೆ. ಭಾನುವಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಅವರು ಅದೇ ವಾರ ಪ್ಯಾರಿಸ್ ಗೆ ಮರಳಲಿದ್ದಾರೆ.

ಟೇಬಲ್ ಟೆನಿಸ್​ ತಂಡ ಕ್ವಾರ್ಟರ್​​ಫೈನಲ್​ಗೆ

ಪ್ಯಾರಿಸ್: ಭಾರತದ ಮಹಿಳೆಯರ ಟೇಬಲ್​ ಟೆನಿಸ್ ತಂಡ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಕ್ವಾರ್ಟರ್​ಫೈನಲ್​ಗೇರಿದೆ. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೊಮೇನಿಯಾ ವಿರುದ್ಧ 3-2 ಅಂತರದಲ್ಲಿ ಜಯ ಸಾಧಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮುನ್ನಡೆ ಸಾಧಿಸಿದೆ. ಅನುಭವಿ ಆಟಗಾರ್ತಿ ಮಣಿಕಾ ಭಾತ್ರಾ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಶ್ರೀಜಾ ಅಕುಲಾ-ಅರ್ಚನಾ ಕಾಮತ್ ಮತ್ತು ಮಣಿಕಾ ಬಾತ್ರಾ ಅವರಿದ್ದ ತಂಡವು ಈ ಸಾಧನೆ ಮಾಡಿದೆ.

ಭಾರತ ತಂಡ ಎರಡು ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಸಾಧಿಸಿತು. ರೊಮೇನಿಯಾ ಮುಂದಿನ ಎರಡು ಪಂದ್ಯಗಳನ್ನು ಗೆದ್ದಿತು. ಐದನೇ ಪಂದ್ಯದಲ್ಲಿ ಬಾತ್ರಾ 11-5, 11-9, 11-9 ಸೆಟ್ ಗಳಿಂದ ಆದಿನಾ ಡಯಾಕೊನು ಅವರನ್ನು ಸೋಲಿಸಿದರು. ಮಹಿಳಾ ಟೇಬಲ್ ಟೆನಿಸ್ ಕ್ವಾರ್ಟರ್ ಫೈನಲ್​​ನಲ್ಲಿ ಭಾರತ ಯುಎಸ್ಎ ಅಥವಾ ಜರ್ಮನಿಯನ್ನು ಎದುರಿಸಲಿದೆ.

Exit mobile version