ಲಂಡನ್: ಕಳೆದ ವಾರವಷ್ಟೇ ಇಂಗ್ಲೆಂಡ್‌ನ ಮಾಂಟಿ ಪನೇಸರ್(Monty Panesar) ರಾಜಕೀಯಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಇದೀಗ ಒಂದು ವಾರ ಆಗುವಷ್ಟರಲ್ಲಿ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಜಾರ್ಜ್ ಗ್ಯಾಲೋವೆ ನೇತೃತ್ವದ ವರ್ಕರ್ಸ್ ಪಾರ್ಟಿ ಆಫ್ ಗ್ರೇಟ್ ಬ್ರಿಟನ್‌ನ ಸಂಸದೀಯ ಅಭ್ಯರ್ಥಿಯಾಗಿದ್ದ ಮಾಂಟಿ ಪನೇಸರ್, ತಮ್ಮ ಹೆಸರನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಇದೇ ವರ್ಷಾರಂಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಕೂಡ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಂದೇ ವಾರಕ್ಕೆ ದಿಢೀರ್ ರಾಜಕೀಯದಿಂದ ಹಿಂದೆ ಸರಿದಿದ್ದರು.
42 ವರ್ಷದ ಪನೇಸರ್ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಶ್ಚಿಮ ಲಂಡನ್‌ನ ಈಲಿಂಗ್ ಸೌಥಾಲ್ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆಯಾಗಿದ್ದರು. ಇದೀಗ ಅಚ್ಚರಿ ಎಂಬತ್ತೆ ಒಂದೇ ವಾರಕ್ಕೆ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಆದರೆ, ರಾಜಕೀಯದಿಂದ ದೂರವಾಗಲು ಕಾರಣ ಏನೆಂಬುದನ್ನು ಪನೇಸರ್ ತಿಳಿಸಿಲ್ಲ. ಮೂಲಗಳ ಪ್ರಕಾರ ಮಾಧ್ಯಮಗಳ ನಿರಂತರವಾದ ಸಂದರ್ಶನಗಳಿಂದ ಬೇಸತ್ತು ಅವರು ಈ ನಿರ್ಧಾರ ಕೈಗೊಂಡರು ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ನಡೆದಿದ್ದ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಪನೇಸರ್ ನ್ಯಾಟೊದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಮುಂದುವರಿದ ಸದಸ್ಯತ್ವದ ಬಗ್ಗೆ ಕೇಳಲಾಗಿದ್ದ ಪ್ರಶ್ನೆಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಹೆಣಗಾಡಿದ್ದರು. ಈ ಘಟನೆ ನಡೆದ 2 ದಿನಗಳ ಅಂತರದಲ್ಲಿ ಪನೇಸರ್ ರಾಜಕೀಯದಿಂದ ದೂರ ಸರಿದಿದ್ದಾರೆ. ರಾಜಕೀಯವು ಜನರಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಾನಿನ್ನೂ ಕಲಿಯಬೇಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ತಮ್ಮ ರಾಜಕೀಯ ನಿವೃತ್ತಿಯನ್ನು ಪ್ರಕಟಿಸಿದ್ದಾರೆ.
“ವರ್ಕರ್ಸ್ ಪಾರ್ಟಿಯ ಸಾರ್ವತ್ರಿಕ ಚುನಾವಣಾ ಅಭ್ಯರ್ಥಿಯಾಗಿ ನನ್ನ ಹೆಸರನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ. ನನ್ನ ವೈಯಕ್ತಿಕ ಮತ್ತು ರಾಜಕೀಯ ಮೌಲ್ಯಗಳಿಗೆ ಹೊಂದಿಕೆಯಾಗುವ ರಾಜಕೀಯ ನೆಲೆಯನ್ನು ಹುಡುಕಲು ನನಗೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಅರಿತುಕೊಂಡಿದ್ದೇನೆ. ಹೀಗಾಗಿ ನಾನು ಈ ನಿಲುವು ಕೈಗೊಂಡಿದ್ದೇನೆ. ವರ್ಕರ್ಸ್ ಪಾರ್ಟಿಗೆ ಶುಭ ಹಾರೈಸುತ್ತೇನೆ. ನನ್ನ ರಾಜಕೀಯ ನೆಲೆಯನ್ನು ಪ್ರಬುದ್ಧಗೊಳಿಸಲು ಮತ್ತು ಕಂಡುಕೊಳ್ಳಲು ಸ್ವಲ್ಪ ಸಮಯ ಬೇಕು. ಮುಂದಿನ ದಿನಗಳಲ್ಲಿ ಮತ್ತೆ ಬಲಿಷ್ಠನಾಗಿ ರಾಜಕೀಯಕ್ಕೆ ಟಂಟ್ರಿ ಕೊಡಲಿದ್ದೇನೆ” ಎಂದು ಪನೇಸರ್ ಹೇಳಿದ್ದಾರೆ.
ಇಂಗ್ಲೆಂಡ್ ಪರ 50 ಟೆಸ್ಟ್ ಪಂದ್ಯಗಳಲ್ಲಿ 167 ವಿಕೆಟ್ ಪಡೆದಿದ್ದಾರೆ. 26 ಏಕದಿನ ಪಂದ್ಯಗಳಲ್ಲಿ 26 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಪನೇಸರ್ ಕ್ರಿಕೆಟ್ ಕಾಮೆಂಟ್ರಿಯಲ್ಲಿ ತೊಡಗಿಕೊಂಡಿದ್ದಾರೆ.