Site icon Vistara News

MS Dhoni Fans: ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಹಳೆಯ ಐಪಿಎಲ್​ ನಿಯಮ ಜಾರಿಗೆ ಮುಂದಾದ ಬಿಸಿಸಿಐ

MS Dhoni Fans

MS Dhoni Fans: Good News For MS Dhoni Fans! BCCI Likely To Bring Back Old Retention Rule

ಮುಂಬಯಿ: 18ನೇ ಆವೃತ್ತಿಯ ಐಪಿಎಲ್(Indian Premier League)​ ವಿಚಾರದಲ್ಲಿ ದಿನಕ್ಕೊಂದು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿವೆ. ಇದೀಗ ಈ ಪಟ್ಟಿಗೆ ಹೊಸದೊಂದು ವಿಚಾರ ಸೇರ್ಪಡೆಗೊಂಡಿದೆ. ವರದಿಯೊಂದರ ಪ್ರಕಾರ ಬಿಸಿಸಿಐ(BCCI) ಕನಿಷ್ಠ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರನ್ನು ಅನ್‌ಕ್ಯಾಪ್ಡ್ ವಿಭಾಗದಲ್ಲಿ ಇರಿಸುವ ನಿಯಮವನ್ನು ಮರಳಿ ತರಲು ಮುಂದಾಗಿದೆ ಎನ್ನಲಾಗಿದೆ.

ಮೊದಲ ಸೀಸನ್‌ನಿಂದ ಜಾರಿಯಲ್ಲಿದ್ದ ಈ ನಿಯಮವನ್ನು 2021ರಲ್ಲಿ ರದ್ದುಗೊಳಿಸಲಾಗಿತ್ತು. ಕಳೆದ ತಿಂಗಳು ಮುಂಬೈಯಲ್ಲಿ ನಡೆದಿದ್ದ ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಮತ್ತು ಬಿಸಿಸಿಐ ನಡುವಿನ ಸಭೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಆಡಳಿತವು ಈ ನಿಯಮವನ್ನು ಹಿಂದಿರುಗಿಸುವಂತೆ ಒತ್ತಾಯಿಸಿತ್ತು. ಇದೀಗ ಬಿಸಿಸಿಐ ಮತ್ತೆ ಈ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ ಎನ್ನಲಾಗಿದೆ. ಹೀಗಾದರೆ ಧೋನಿ(MS Dhoni) ಮುಂದಿನ ಬಾರಿಯೂ ಐಪಿಎಲ್​ ಆಡುವುದು ಖಚಿತ ಎನ್ನಲಾಗಿದೆ. ಅಲ್ಲದೆ ಈ ನಿಯಮ ಜಾರಿಗೊಳ್ಳಲಿದೆ ಎನ್ನುವಾಗಲೇ ಧೋನಿ ಅಭಿಮಾನಿಗಳು(MS Dhoni Fans) ಸಂತಸಗೊಂಡಿದ್ದಾರೆ.

ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ಅನ್‌ಕ್ಯಾಪ್ಡ್ ಆಟಗಾರನಿಗೆ ಫ್ರಾಂಚೈಸಿ ಕೇವಲ 4 ಕೋಟಿ ರೂ. ನೀಡಲಿದೆ. ಈ ನಿಯಮ ಜಾರಿಗೆ ಬಂದರೆ ಧೋನಿ ಇದೇ ಮೊತ್ತದಲ್ಲಿ ಚೆನ್ನೈಗಾಗಿ ಆಡುವುದನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಇದೇ ಮೊತ್ತಕ್ಕೆ ಚೆನ್ನೈ ತಂಡ ಧೋನಿಯನ್ನು ಮತ್ತೆ ರೀಟೈನ್​ ಮಾಡಿಕೊಳ್ಳಬಹುದು. 2022ರ ಮೆಗಾ ಹರಾಜಿನ ಮೊದಲು, ಚೆನ್ನೈ 12 ಕೋಟಿಗೆ ಧೋನಿಯನ್ನು ತಂಡದಲ್ಲಿ ಉಳಿಸಿಕೊಂಡಿತ್ತು. “ಧೋನಿ ಅನ್‌ಕ್ಯಾಪ್ಡ್ ಆಟಗಾರನಾಗಿ ಆಡುತ್ತಾರಾ? ಇದೊಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ” ಎಂದು ಆರ್​.ಅಶ್ವಿನ್​ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ Rohit Sharma : ಧೋನಿಯ ನಾಯಕತ್ವದ ದಾಖಲೆಯೊಂದನ್ನು ಮುರಿದ ರೋಹಿತ್ ಶರ್ಮಾ

ಈ ಬಾರಿ ರೈಟ್​ ಟು ಮ್ಯಾಚ್​(ಆರ್​ಟಿಎಂ) ಕಾರ್ಡ್​ ಪದ್ಧತಿಯನ್ನೂ ಮತ್ತೆ ತರಲಾಗುವುದು ಎಂದು ವರದಿಯಾಗಿದೆ. ಆರ್​ಟಿಎಂ ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಆರ್​ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್​ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್​ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಧಿಕಾರಿಗಳ ಅಭಿಪ್ರಾಯ. ಐಪಿಎಲ್​ನಲ್ಲಿ ಇದುವರೆಗೆ ವಿರಾಟ್​ ಕೊಹ್ಲಿ (ಆರ್​ಸಿಬಿ), ಜಸ್​ಪ್ರೀತ್​ ಬುಮ್ರಾ(ಮುಂಬೈ) ಮಾತ್ರ ಒಂದೇ ತಂಡದ ಪರ ಆಡಿದ್ದಾರೆ. ಉಳಿದ ಆಟಗಾರರು ಬೇರೆ ಬೇರೆ ಫ್ರಾಂಚೈಸಿ ಪರ ಕನಿಷ್ಠ ಒಂದೆರಡು ವರ್ಷಗಳ ಕಾಲ ಆಡಿದ್ದಾರೆ.

ಐಪಿಎಲ್ ಮೆಗಾ ಹರಾಜನ್ನು ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವಂತೆಯೂ ಕೆಲವು ಫ್ರಾಂಚೈಸಿಗಳು ಮನವಿ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತಿತ್ತು. ಒಂದೊಮ್ಮೆ ಈ ಬೇಡಿಕೆಗೆ ಬಿಸಿಸಿಐ ಸಮ್ಮತಿಸಿದರೆ. ಮುಂದಿನ ಮೆಗಾ ಹರಾಜು 2029ರಲ್ಲಿ ನಡೆಯಲಿದೆ. ಇದರ ನಡುವೆ ಮಿನಿ ಹರಾಜು ಮಾತ್ರ ನಡೆಯಲಿದೆ. ಈ ತಿಂಗಳಾಂತ್ಯದಲ್ಲಿ ಐಪಿಎಲ್ ಮಾಲೀಕರೊಂದಿಗೆ ಬಿಸಿಸಿಐ ಸಭೆ ನಡೆಸಿ ಮೆಗಾ ಹರಾಜಿನ ಅಂತಿಮ ರೂಪುರೇಷೆಗಳ ಬಗ್ಗೆ ಚರ್ಚಿಸಲಿದೆ ಎಂದು ವರದಿಯಾಗಿದೆ

Exit mobile version