ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಕಳೆದ ಪಂದ್ಯದಲ್ಲಿ ಆರ್ಸಿಬಿ(RCB) ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಮಹೇಂದ್ರ ಸಿಂಗ್ ಧೋನಿ(MS Dhoni Retirement) ಅವರ ನಿವೃತ್ತಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೀಗ ಧೋನಿ ನಿವೃತ್ತಿ ವಿಚಾರವಾಗಿ ಸಿಎಸ್‌ಕೆ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಮಹತ್ವದ ಹೇಳಿಕೆ ನೀಡಿದ್ದಾರೆ.
ಕಳೆದ ವರ್ಷವೇ ಧೋನಿ ಅವರು ಐಪಿಎಲ್ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್ಗೂ ಗುಡ್ಬೈ ಹೇಳಲಾಗಿತ್ತು. ಇದೀಗ ಚೆನ್ನೈ ಸೋತು ಟೂರ್ನಿಯಿಂದ ಹೊರಬಿದ್ದರೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.
ಇದೀಗ ಸಿಎಸ್‌ಕೆ ಅಧಿಕಾರಿಯೊಬ್ಬರು ಧೋನಿ ನಿವೃತ್ತಿ ಬಗ್ಗೆ ಮಾತನಾಡಿದ್ದು, “ಧೋನಿ ಅವರು ಸಿಎಸ್‌ಕೆ ಜತೆ ಯಾರೊಂದಿಗೂ ತಮ್ಮ ನಿವೃತ್ತಿ ಬಗ್ಗೆ ಇದುವರೆಗೂ ಮಾತನಾಡಿಲ್ಲ. ಕೆಲವು ಸಕ್ರಿಯ ಕ್ರಿಕೆಟಿಗರಿಂದ ಹೆಚ್ಚು ಟೀಕೆಗೆ ಒಳಗಾಗಿರುವ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮವು ಧೋನಿಯ ನಿವೃತ್ತಿಯ ವಿಚಾರದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. ನಿಯಮವು ಮುಂದುವರಿದರೆ, ತಂಡದೊಂದಿಗೆ ನಿರ್ದಿಷ್ಟ ಕೆಲಸವನ್ನು ಪೂರೈಸಲು ಇದು ಅವರಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ. ನಿಯಮವನ್ನು ರದ್ದುಗೊಳಿಸಿದರೆ, ಧೋನಿ ಆಡುವುದು ಕಷ್ಟ” ಎಂದು ಹೇಳಿದ್ದಾರೆ.
ಅಧಿಕಾರಿಯ ಈ ಮಾತನ್ನು ಕೇಳುವಾಗ ಧೋನಿ ಇಂಪ್ಯಾಕ್ಟ್ ನಿಯಮ ಜಾರಿಯಲ್ಲಿದ್ದರೆ ಮುಂದಿನ ಆವೃತ್ತಿಯಲ್ಲಿಯೂ ಆಡುವುದು ಬಹುತೇಖ ಖಚಿತ ಎನ್ನುವುದು ತಿಳಿದುಬಂದಿದೆ. ಒಂದೊಮ್ಮೆ ಈ ನಿಯಮ ಇಲ್ಲವಾದರೆ ಧೋನಿ ಮುಂದಿನ ಆವೃತ್ತಿಯ ಆಟಗಾರರ ಹರಾಜಿಗೂ ಮುನ್ನವೇ ನಿವೃತ್ತಿ ಹೇಳುವುದು ಬಹುತೇಖ ಖಚಿತ ಎನ್ನಲಡ್ಡಿಯಿಲ್ಲ. ಚೆನ್ನೈ ತಂಡ ಆರ್ಸಿಬಿ ವಿರುದ್ಧ ಸೋಲು ಕಂಡಾಗ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಅವರು ಧೋನಿ ಮುಂದಿನ ಆವೃತ್ತಿಯಲ್ಲಿಯೂ ಆಡಲಿದ್ದಾರೆ ಎಂದು ಬಲವಾದ ಹೇಳಿಕೆ ನೀಡಿದ್ದರು.
ಇದನ್ನೂ ಓದಿ MS Dhoni : ಆರ್ಸಿಬಿ ವಿರುದ್ಧ ಬೌಲಿಂಗ್ ಮಾಡಲು ಅಭ್ಯಾಸ ನಡೆಸಿದ ಎಂ ಎಸ್ ಧೋನಿ
ಕಳೆದ ಕೆಲವು ವರ್ಷಗಳಿಂದ ಸಿಎಸ್‌ಕೆಗಾಗಿ ಧೋನಿ ಆಡುತ್ತಿದ್ದಾರೆ. ಅವರ ಈ ಪ್ರದರ್ಶನವನ್ನು ಪರಿಗಣಿಸಿ, ಚೆನ್ನೈಯಲ್ಲಿ ಧೋನಿಯ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ. ಧೋನಿ ಚೆನ್ನೈನ ದೇವರು ಎಂದ ರಾಯುಡು, ಮುಂಬರುವ ವರ್ಷದಲ್ಲಿ ಚೆನ್ನೈನಲ್ಲಿ ಎಂಎಸ್ ಧೋನಿಯ ಮಂದಿರ ನಿರ್ಮಾಣವಾಗುವುದು ಖಚಿತ ಎಂದು ಹೇಳಿದ್ದಾರೆ.