ಬಾರ್ಬಡೋಸ್: ಇಂದು(ಶನಿವಾರ) ನಡೆದ ಅಮೆರಿಕ ವಿರುದ್ಧದ ಟಿ20 ವಿಶ್ವಕಪ್ ಸೂಪರ್-8 ಪಂದ್ಯದಲ್ಲಿ ವೆಸ್ಟ್ ಇಂಡೀಸ್(United States vs West Indies) 9 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ 12 ಎಸೆತಗಳಿಂದ ಅಜೇಯ 27 ಚಚ್ಚಿದ ನಿಕೋಲಸ್ ಪೋರನ್(Nicholas Pooran) ಅವರು ತಮ್ಮದೇ ದೇಶದ ಮಾಜಿ ಆಟಗಾರ ಕ್ರಿಸ್ ಗೇಲ್(Chris Gayle) ಅವರ ದಾಖಲೆಯೊಂದನ್ನು ಮುರಿದಿದ್ದಾರೆ.
ಪೂರನ್ ಅಮೆರಿಕ ವಿರುದ್ಧ 3 ಸಿಕ್ಸರ್ ಬಾರಿಸುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯ ಆವೃತ್ತಿಯೊಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಇದುವರೆಗೆ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಗೇಲ್ 2012ರ ಆವೃತ್ತಿಯಲ್ಲಿ 16 ಸಿಕ್ಸರ್ ಬಾರಿಸಿದ್ದರು. ಇದೀಗ ಪೂರನ್ 17* ಸಿಕ್ಸರ್ ಬಾರಿಸುವ ಮೂಲಕ ತನ್ನದೇ ದೇಶದ ಆಟಗಾರನ ದಾಖಲೆಯನ್ನು ಮುರಿದಿದ್ದಾರೆ. ಅಚ್ಚರಿ ಎಂದರೆ ಈ ದಾಖಲೆಯ ಪಟ್ಟಿಯಲ್ಲಿ ಅಗ್ರ ಮೂರು ಸ್ಥಾನದಲ್ಲಿ ವಿಂಡೀಸ್ ಆಟಗಾರರೇ ಕಾಣಿಸಿಕೊಂಡಿದ್ದಾರೆ. 15 ಸಿಕ್ಸರ್ ಬಾರಿಸಿರುವ ಮಾರ್ಲನ್ ಸ್ಯಾಮುವೆಲ್ಸ್ ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ WI vs USA: ಹೋಪ್ ಬ್ಯಾಟಿಂಗ್ ಆರ್ಭಟಕ್ಕೆ ತಲೆಬಾಗಿದ ಅಮೆರಿಕ; ವಿಂಡೀಸ್ ಸೆಮಿ ಆಸೆ ಜೀವಂತ
ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಬ್ಯಾಟರ್
ನಿಕೋಲಸ್ ಪೂರನ್-17* ಸಿಕ್ಸರ್(2024)
ಕ್ರಿಸ್ ಗೇಲ್-16 ಸಿಕ್ಸರ್(2012)
ಮಾರ್ಲನ್ ಸ್ಯಾಮುವೆಲ್ಸ್-15 ಸಿಕ್ಸರ್(2012)
ಶೇನ್ ವಾಟ್ಸನ್-15 ಸಿಕ್ಸರ್ (2012)
ವಿಂಡೀಸ್ ಸೆಮಿ ಆಸೆ ಜೀವಂತ
ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸಂಘಟಿತ ಪ್ರದರ್ಶನ ತೋರಿದ ವೆಸ್ಟ್ ಇಂಡೀಸ್(WI vs USA) ತಂಡ ಅಮೆರಿಕ ವಿರುದ್ಧ 9 ವಿಕೆಟ್ಗಳ ಗೆಲುವು ಸಾಧಿಸಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ. ಇಲ್ಲಿನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಆಯ್ಕೆಗೆ ತಕ್ಕ ಬೌಲಿಂಗ್ ಪ್ರದಶನ ತೋರುವ ಮೂಲಕ ಅಮೆರಿಕವನ್ನು ಕೇವಲ 128 ರನ್‌ಗಳಿಗೆ ಕಟ್ಟಿಹಾಕಿತು. ಬಳಿಕ ಈ ಸಣ್ಣ ಮೊತ್ತವನ್ನು ಬೆನ್ನಟ್ಟಿದ ವಿಂಡೀಸ್ 10.5 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ನಷ್ಟಕ್ಕೆ 130 ರನ್ ಬಾರಿಸಿ ಭಜರಿ ಗೆಲುವು ತನ್ನದಾಗಿಸಿಕೊಂಡಿತು.
ಚೇಸಿಂಗ್ ವೇಳೆ ಸಿಡಿದು ನಿಂತ ಓಪನರ್ ಶೈ ಹೋಪ್ ಅಮೆರಿಕ ಬೌಲರ್ಗಳ ಮೇಲೆರಗಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಬಡಿದಟ್ಟಿ ತವರಿನ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದರು. 39 ಎಸೆತಗಳಿಂದ ಅಜೇಯ 82 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಗೆಲುವಿನ ರನ್ ಕೂಡ ಸಿಕ್ಸರ್ ಮೂಲಕವೇ ಸಾರಿದರು. ಇವರ ಸ್ಫೋಟಕ ಬ್ಯಾಟಿಂಗ್ ಇನಿಂಗ್ಸ್ ವೇಳೆ ಬರೋಬ್ಬರಿ 8 ಸಿಕ್ಸರ್ ಮತ್ತು 4 ಬೌಂಡರಿ ದಾಖಲಾಯಿತು. ಕಳೆದೊಂದು ವರ್ಷದಿಂದ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದ ಹೋಪ್ ಈ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ನಡೆಸಿ ತಮ್ಮ ಹಳೆಯ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡರು.