Site icon Vistara News

R Ashwin: ಶತಕದ ಟೆಸ್ಟ್​ನಲ್ಲಿ ಹಲವು ದಾಖಲೆ ಬರೆದ ಅಶ್ವಿನ್​; ಕುಂಬ್ಳೆ ದಾಖಲೆಯೂ ಪತನ

R Ashwin

ಧರ್ಮಶಾಲಾ: ಆರ್. ಅಶ್ವಿನ್(R Ashwin) ಅವರು ಇಂಗ್ಲೆಂಡ್(IND v ENG)​ ವಿರುದ್ಧದ ಅಂತಿಮ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ತಮ್ಮ 100ನೇ ಟೆಸ್ಟ್(100th Test) ಪಂದ್ಯವನ್ನು ಇನ್ನಷ್ಟು ಸ್ಮರಣೀಯವಾಗಿಸಿದ್ದಾರೆ. ಜತೆಗೆ 100ನೇ ಟೆಸ್ಟ್​ ಪಂದ್ಯದಲ್ಲಿ 5 ವಿಕೆಟ್​ ಕಿತ್ತ ವಿಶ್ವದ ನಾಲ್ಕನೇ ಬೌಲರ್​ ಎನಿಸಿಕೊಂಡರು. ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್ ಮತ್ತು ಅನಿಲ್ ಕುಂಬ್ಳೆ ಉಳಿದ ಮೂವರು ಬೌಲರ್​ಗಳು. 3ನೇ ದಿನದ ಎರಡನೇ ಸೆಷನ್‌ನಲ್ಲಿ ಇಂಗ್ಲೆಂಡ್‌ನ ವಿಕೆಟ್‌ಕೀಪರ್-ಬ್ಯಾಟರ್ ಬೆನ್ ಫೋಕ್ಸ್ ಅವರನ್ನು ಔಟ್ ಮಾಡುವಾಗ ಮೂಲಕ ಅಶ್ವಿನ್ ಈ ಸಾಧನೆ ಮಾಡಿದರು.

ಕುಂಬ್ಳೆ ದಾಖಲೆ ಪತನ

5 ವಿಕೆಟ್​ ಕೀಳುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 5 ವಿಕೆಟ್ ಗೊಂಚಲು ಪಡೆದ ಭಾರತೀಯರ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿ ಅಶ್ವಿನ್​ ಅಗ್ರಸ್ಥಾನಕ್ಕೇರಿದರು. ಆರ್ ಅಶ್ವಿನ್ ಈಗ 36 ಬಾರಿ ಐದು ವಿಕೆಟ್ ಕಿತ್ತಿದ್ದಾರೆ. ಕುಂಬ್ಳೆ 35 ಬಾರಿ ಈ ಸಾಧನೆ ಮಾಡಿದ್ದರು. ಐದು ವಿಕೆಟ್​ ಸಾಧನೆಯ ಸಾರ್ವಕಾಲಿಕ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್​ ಅವರು ರಿಚರ್ಡ್ ಹ್ಯಾಡ್ಲಿಯನ್ನು ಸರಿಗಟ್ಟಿದರು.

ಇದನ್ನೂ ಓದಿ IND vs ENG: ಅಂತಿಮ ಟೆಸ್ಟ್​ ಗೆದ್ದು ಇತಿಹಾಸ ನಿರ್ಮಿಸಿದ ಭಾರತ; ನೂತನ ದಾಖಲೆ ಸೃಷ್ಟಿ

ಟೆಸ್ಟ್​ನಲ್ಲಿ ಅತಿ ಹೆಚ್ಚು ಐದು ವಿಕೆಟ್​ ಸಾಧನೆಯ ಸಾರ್ವಕಾಲಿಕ ಬೌಲರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅಗ್ರಸ್ಥಾನ ಪಡೆದಿದ್ದಾರೆ. ಅವರು 67 ಬಾರಿ ಈ ಸಾಧನೆ ಮಾಡಿದ್ದಾರೆ. ಶೇನ್​ ವಾರ್ನ್ (37) ದ್ವಿತೀಯ ಸ್ಥಾನಿಯಾಗಿದ್ದಾರೆ.

ಮೂರನೇ ದಿನವಾದ ಶನಿವಾರ 8 ವಿಕೆಟ್​ಗೆ 473 ರನ್​ ಗಳಿಸಿದ್ದಲ್ಲಿಂದ ಬ್ಯಾಟಿಂಗ್​ ಮುಂದುವರಿಸಿ ಭಾರತ ಕೇವಲ ನಾಲ್ಕು ರನ್​ ಗಳಿಸಲಷ್ಟೇ ಶಕ್ತವಾಗಿ 477ರನ್​ಗೆ ಆಲೌಟ್​ ಆಯಿತು. 259 ರನ್​ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಬ್ಯಾಟಿಂಗ್​ ಆರಂಭಿಸಿದ ಇಂಗ್ಲೆಂಡ್​ಗೆ 100ನೇ ಟೆಸ್ಟ್​ ಆಡಿದ ಆರ್​.ಅಶ್ವಿನ್​ ಅವಳಿ ಆಘಾತವಿಕ್ಕಿದರು. ಜಾಕ್​ ಕ್ರಾಲಿ ಅವರನ್ನು ಶೂನ್ಯಕ್ಕೆ ಮತ್ತು ಬೆನ್​ ಡಕೆಟ್​ ಅವರನ್ನು ಕೇವಲ 2 ರನ್​ಗೆ ಔಟ್​ ಮಾಡಿ ಪೆವಿಲಿಯನ್​ಗೆ ಅಟ್ಟಿದರು. ಆ ಬಳಿಕ ಕುಲ್​ದೀಪ್​ ಯಾದವ್​ ಕೂಡ ತಮ್ಮ ಸ್ಪಿನ್ ಜಾದು ಮೂಲಕ ವಿಕೆಟ್​ ಕಿತ್ತು ಆಂಗ್ಲರನ್ನು ಹಡೆಮುರಿ ಕಟ್ಟಿದರು. ಅಂತಿಮವಾಗಿ ಇಂಗ್ಲೆಂಡ್​ 195 ರನ್​ಗೆ ಆಲೌಟ್​ ಆಯಿತು.

Exit mobile version